ಹಾಸನ

ವಿವೇಕ ರಥಯಾತ್ರೆ ಅದ್ಧೂರಿ ಸ್ವಾಗತಕ್ಕೆ ನಿರ್ಧಾರ

Published On :

ಹೊಳೆನರಸೀಪುರ: ಯುವಕರಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ಹಾಗೂ ಪರಿಪೂರ್ಣ ವ್ಯಕ್ತಿತ್ವವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷದ ಅಂಗವಾಗಿ ನಾಡಿನೆಲ್ಲೆಡೆ ಸಂಚರಿಸುತ್ತಿರುವ ವಿವೇಕಾನಂದ ರಥಯಾತ್ರೆಯು ನ.13ರಂದು ಪಟ್ಟಣಕ್ಕೆ ಆಗಮಿಸುತ್ತಿದೆ.
 ಈ ಹಿನ್ನೆಲೆಯಲ್ಲಿ, ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿ, ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸುವ ಕುರಿತಂತೆ ತಹಸೀಲ್ದಾರ್ ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
 ಸಭೆಯಲ್ಲಿ ನಾನಾ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖ್ಯಸ್ಥರು  ಹಾಗೂ ನಾಗರೀಕರು ಭಾಗವಹಿಸಿ ರಥಯಾತ್ರೆಯನ್ನು ಪಟ್ಟಣದಲ್ಲಿ ವಿದ್ಯುಕ್ತವಾಗಿ ನಡೆಸಲು ಸಲಹೆ ಸೂಚನೆಗಳನ್ನು ನೀಡಿದರು.
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಬೋಧಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ತೊಡೆದು ಹಾಕಿ, ವಿಶ್ವಾಸಪೂರ್ಣ ಸಮಾಜದ ನಿರ್ಮಾಣಕ್ಕೆ ಕಾರಣರಾದ ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ನಾಡಿಗೆ ಸಾರುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
  ಈ ಸಂದರ್ಭದಲ್ಲಿ ವಿವೇಕಾನಂದರ ಜೀವನ ಕುರಿತಾದ ಭಿತ್ತಿಚಿತ್ರಗಳ ಪ್ರದರ್ಶನ, ಅವರ ಉಪದೇಶಗಳನ್ನುಳ್ಳ ಪುಸ್ತಕಗಳ ಮಾರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು,  ಸುವರ್ಣವರ್ಣದ ವಿವೇಕಾನಂದರ ಎರಡು ಭವ್ಯ ಮೂರ್ತಿಗಳನ್ನು ಒಳಗೊಂಡಿರುವ ರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆಯು ಸಾಗಲಿರುವುದಾಗಿ ಅವರು ವಿವರ ನೀಡಿದರು.
 ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ  ಮಾತನಾಡಿ, ರಥಯಾತ್ರೆಗೆ ಅಗತ್ಯವಾದ ಸಹಕಾರವನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನೀಡಲಾಗುವುದು ಎಂದರು.
ರಥಯಾತ್ರೆಯ ಸಂಚರಿಸುವ ಬೀದಿಗಳನ್ನು ಸಿಂಗರಿಸಿ ವೇದಿಕೆ ಹಾಗೂ ಸಭಾಕಾರ್ಯಕ್ರಮಕ್ಕೆ ಶಾಮಿಯಾನ ವ್ಯವಸ್ಥೆಯನ್ನು ಪುರಸಭೆಯು ನೀಡಲಿರುವುದಾಗಿ ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ ಹಾಗೂ ಮುಖ್ಯಾಧಿಕಾರಿ ಹರೀಶ್ ಭರವಸೆ ನೀಡಿದರು. ರಥಯಾತ್ರೆಯ ವೇಳೆ ನಾನಾ ಶಾಲಾ ಮಕ್ಕಳ ಪಥಸಂಚಲನ ಹಾಗೂ ಬ್ಯಾಂಡ್ಸೆಟ್ಗಳ ಸಹಕಾರವನ್ನು ಶಿಕ್ಷಣ ಇಲಾಖೆಯು ನಿರ್ವಹಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ತಿಳಿಸಿದರು.
 ರಥಯಾತ್ರೆಯ ನಂತರ ಲಘು ಉಪಹಾರ ವ್ಯವಸ್ಥೆ ಹಾಗೂ ಪಾನೀಯದ ವ್ಯವಸ್ಥೆಯನ್ನು ಪುರಸಭೆ ಮಾಜಿ ಅಧ್ಯಕ್ಷ  ಕೆ.ಶ್ರೀನಿವಾಸ್ ವಿವಿಧ ರೈಸ್ಮಿಲ್ಗಳ ಸಹಕಾರದೊಂದಿಗೆ ನೀಡಲಿರುವುದಾಗಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಯುವ ವೇದಿಕೆ, ಗುರುಗಣೇಶ ಸ್ವಿಟ್ಸ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ತಾಲೂಕು ಕುರುಬರ ಸಂಘ, ತಾಲೂಕು ದೈಹಿಕ ಶಿಕ್ಷಕರ ಸಹಯೋಗ ಅಲ್ಲದೇ ವಿವಿಧ ಸಂಘಸಂಸ್ಥೆಗಳು ನಾನಾ ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಭರವಸೆ ನೀಡಿದರು.
  ಸಮಾಜ ಕಲ್ಯಾಣಾಧಿಕಾರಿ ರಂಗರಾಜು, ಪ್ರದೀಪ್ಕುಮಾರ್, ಚಂದು, ಕೆ.ಮಂಜಶೆಟ್ಟಿ,  ಬಾ.ರಾ.ಸುಬ್ಬರಾಯ, ಎಂ.ಎನ್.ಜೈಪ್ರಕಾಶ್, ರಂಗನಾಥ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಎಸ್.ರಾಧಾಕೃಷ್ಣ, ಜಿಲ್ಲಾ ಸಂಚಾಲಕ  ಪ್ರಕಾಶ್ಯಾಜಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.