ಹಾಸನ

ಅಧಿವೇಶನದಲ್ಲಿ ಹೋರಾಟ

Published On :

ಕ.ಪ್ರ. ವಾರ್ತೆ ಹಾಸನ ನ. 11
ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ಅಧಿವೇಶನದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ದುದ್ದ-ತಿಪಟೂರು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವರು ಆ ಪ್ರದೇಶಕ್ಕೆ ಭೇಟಿ ನೀಡಿ 15 ದಿನಗಳ ಒಳಗಾಗಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿಲ್ಲ.
ರಸ್ತೆ ದುರಸ್ಥಿ ಕಾರ್ಯ ನಡೆಯದ ಕಾರಣ ಸಾರ್ವಜನಿಕರು ಪ್ರತಿನಿತ್ಯ ಸಾರ್ವಜನಿಕರು ವನವಾಸ ಪಡುವಂತಾಗಿದೆ. ರಸ್ತೆ ದುರಸ್ಥಿ ಪಡಿಸದ ಕಾರಣ ಹಾಸನ, ಹೊಳೆನರಸೀಪುರ, ಅರಸೀಕೆರೆ ಹಾಗೂ ತಿಪಟೂರು ಕ್ಷೇತ್ರದ ಶಾಸಕರು ಒಟ್ಟಾಗಿ ಇದರ ವಿರುದ್ಧ ವಿಧಾನಸಭೆಯಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ರಾಜ್ಯ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಟಿಎ, ಡಿಎಗಾಗಿ ಮಾತ್ರ:  ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 120 ವೈದ್ಯರು ಹಾಗೂ ಔಷಧಿಗಳ ಕೊರತೆ ಉಂಟಾಗಿದೆ. ಜೊತೆಗೆ ಹಾವು ಕಡಿತಕ್ಕೆ ಯಾವುದೇ ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಇದರಿಂದ ರೈತರು ಇತರರು ಸಾವನ್ನಪ್ಪುತ್ತಿದ್ದಾರೆ. ಇಷ್ಟಾದರೂ ಆರೋಗ್ಯ ಸಚಿವರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸಚಿವರು ಈಗಾಗಲೇ ಜಿಲ್ಲೆಗೆ ಮೂರ್ನಾಲ್ಕು ಬಾರಿ ಬಂದು ಹೋಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗುವುದು ಎಂದರು.
ಮಾಜಿ ಪ್ರಧಾನಿಗಳ ಊರಾದ ಪಡುವಲಹಿಪ್ಪೆಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ಅಗತ್ಯ ಔಷಧಿಯ ಕೊರತೆ ಉಂಟಾಗಿದೆ. ಈ ಬಗ್ಗೆ ಸಚಿವರು ಯಾವುದೆ ಕ್ರಮಕೈಗೊಂಡಿಲ್ಲ ಎಂದ ಅವರು, ಸಚಿವರು ಜಿಲ್ಲಾ ಪ್ರವಾಸ ಕೈಗೊಂಡರೆ ಅದರಿಂದ ಉಪಯೋಗ ಆಗಬೇಕು. ಅದನ್ನು ಬಿಟ್ಟು ಕೇವಲ ಟಿಎ-ಡಿಎ ಪಡೆಯುವುದಕ್ಕಾಗಿ ಪ್ರವಾಸ ಕೈಗೊಂಡರೆ ಯಾವುದೇ ಪ್ರಯೋಜನವಾಗದು ಎಂದು ಕಿಡಿಕಾರಿದರು.
ದ್ವಂದ್ವ ಹೇಳಿಕೆ: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪೈಕಿ ಕಾಡಾನೆ ಸಮಸ್ಯೆಯು ಒಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 30 ಕಾಡಾನೆಗಳನ್ನು ಸೆರೆ ಹಿಡಿಯಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 30 ಕಾಡಾನೆಗಳನ್ನು ಸೆರೆ ಹಿಡಿಯುವುದಾಗಿ ಅರಣ್ಯ ಸಚಿವರು ಹೇಳುತ್ತಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಮೂರ್ನಾಲ್ಕು ಕಾಡಾನೆಗಳನ್ನು ಮಾತ್ರ ಸೆರೆ ಹಿಡಿಯುವುದಾಗಿ ಹೇಳುತ್ತಾರೆ. ಇಂಥ ದ್ವಂದ್ವ ಹೇಳಿಕೆಯನ್ನು ನೀಡುವ ಮೂಲಕ ಜಿಲ್ಲೆಯ ಜನತೆಗೆ ಸರ್ಕಾರ ಕಣ್ಣೋರೆಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಸರ್ಕಾರದ ದ್ವಂದ್ವ ಹೇಳಿಕೆ:  ಮೂಢನಂಬಿಕೆ ಪ್ರತಿಬಂಧಕ ಕರಡು ವಿಧೇಯಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರು ದ್ವಂದ್ವ ಹೇಳಿಕೆ ನೀಡುವ ಮೂಲಕ ಕೆಲವೊಂದು ಸಮಾಜವನ್ನು ಮಟ್ಟ ಹಾಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಎಚ್.ಡಿ.ರೇವಣ್ಣ ಕಿಡಿಕಾರಿದರು.
ಮೂಢನಂಬಿಕೆ ಕರಡು ವಿಧೇಯಕ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ರೀತಿಯ ಹೇಳಿಕೆ ನೀಡಿದರೆ, ಅದಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವರು ಮತ್ತೊಂದು ರೀತಿಯ ಹೇಳಿಕೆ ನೀಡುವ ಮೂಲಕ ದ್ವಂದ್ವ ನಿಲವು ತಾಳಿದ್ದು, ಆ ಮೂಲಕ ರಾಜ್ಯಕ್ಕೆ ಇಬ್ಬರು ಸಿಎಂ ಆದಂತಾಗಿದ್ದಾರೆ ಎಂದ ಅವರು, ಕಾಂಗ್ರೆಸ್‌ನ ಈ ನೀತಿ ಕೆಲವೊಂದು ಸಮಾಜವನ್ನು ತುಳಿಯುವಂತಹದಾಗಿದೆ ಎಂದು ಹೇಳಿದರು.

ಈಗ ಸರ್ದಾರ್ ಪಟೇಲ್ ನೆನಪು
ಲೋಕಸಭೆ ಚುನಾವಣೆ ಸಮೀಪವಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಸರ್ದಾರ್ ವಲ್ಲಭಬಾಯಿ ಪಟೇಲ್‌ರನ್ನು ನೆನೆಯುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.