ಕಬ್ಬು ದರ ನಿಗದಿವರೆಗೆ ಹಳೆ ಬೆಲೆನೇ ನೀಡಿ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ನ.12
ಕಬ್ಬು ಬೆಲೆ ನಿಗದಿಗಾಗಿ ರೈತರು ಹೋರಾಟ ನಡೆಸುತ್ತಿದ್ದು, ಅದು ನಿಗದಿಯಾಗುವವರಗೆ ಕಳೆದ ವರ್ಷ ನೀಡಿದ ದರವನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಶ್ರೀನಿವಾಸಪುರ ಚಾಮುಂಡೇಶ್ವರಿ ಕಾರ್ಖಾನೆ ಎದುರು ಧರಣಿ ನಡೆಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಆನೆಕೆರೆ ರವಿ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಕಾರ್ಖಾನೆ ಆಡಳಿತ ಕಚೇರಿ ಮುಂಭಾಗದಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ಕಳೆದ ವರ್ಷ ನೀಡಿದ ಪ್ರತಿ ಟನ್ಗೆ 2400ರು.ಗಳನ್ನು ಪ್ರಸಕ್ತ ಸಾಲಿನಲ್ಲಿ ತಾತ್ಕಾಲಿಕವಾಗಿ ನೀಡಬೇಕು. ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದ ನಂತರ ಹೆಚ್ಚುವರಿಯಾಗಿ ಆ ಹಣವನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು.
ಕಳೆದ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 2500ರು.ಗಳನ್ನು ಸರ್ಕಾರ ನಿಗದಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ 2400ರು.ಗಳನ್ನು ನೀಡಲಾಗಿದ್ದು, ಉಳಿದ 100ರು.ಗಳನ್ನೂ ನೀಡಬೇಕು. ಕಳೆದ ಸಾಲಿನಲ್ಲಿ ಹೆಚ್ಚು ನೀಡಿ ಪ್ರಸಕ್ತ ಸಾಲಿನಲ್ಲಿ 2100ರು.ಗಳನ್ನು ನೀಡುವುದು ಎಷ್ಟು ಸಮಂಜಸ ಎಂದು ಪ್ರತಿಪಾದಿಸಿದ ರೈತ ಸಂಘದ ಕಾರ್ಯಕರ್ತರು ಕಳೆದ ಸಾಲಿನಲ್ಲಿ ಕಬ್ಬು ಸಾಗಿಸಿದ ರೈತರಿಗೆ ನೀಡಬೇಕಾದ ಬಾಕಿಯನ್ನು ಕಳೆದ ಒಂದು ವಾರದಲ್ಲಿ ನೀಡಿದ್ದಾರೆ ಎಂದು ಆರೋಪಿಸಿದರು.
ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ 15 ದಿನಗಳಲ್ಲಿ ನಿಗದಿ ಮಾಡಿದ ಹಣವನ್ನು ನೀಡಬೇಕು. ಹಾಗೂ ಉಳಿಕೆ ಹಣವನ್ನು ಸರ್ಕಾರ ನಿಗದಿ ಮಾಡಿದ ನಂತರದಲ್ಲಿ ವಿಳಂಬ ಮಾಡದೆ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಬ್ರಿಟ್ಟೋ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ 2100ರು.ಗಳನ್ನು ಪ್ರತಿ ಟನ್ ಕಬ್ಬಿಗೆ ನೀಡಲು ನಿರ್ಧರಿಸಿದ್ದು, ರಾಜ್ಯ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಿದ ನಂತರದಲ್ಲಿ ನಿಗದಿತ ಹಣವನ್ನು ಕಾರ್ಖಾನೆ ನೀಡಲಿದೆ ಎಂದು ತಿಳಿಸಿದರು.
ರೈತರು ಹಾಗೂ ಸರ್ಕಾರದ ನಡುವೆ ಬೆಲೆ ನಿಗದಿ ಕಿತ್ತಾಟ ನಡೆಯುತ್ತಿದೆ ಈ ಸಂದರ್ಭದಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ಬೆಲೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಸರ್ಕಾರ ನಿಗದಿ ಮಾಡಿದ ನಂತರದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

