ರೈತರ ವಿಚಾರ ವಿನಿಮಯಕ್ಕೆ ಕೃಷಿ ಶಿಬಿರ ಅನುಕೂಲ
ಕನ್ನಡಪ್ರಭ ವಾರ್ತೆ ಹಾಸನ ನ.14
ರೈತರು ಪರಸ್ಪರ ಸಂವಾದ ಮಾಡಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಅನುಕೂಲವಾಗಲಿದೆ ಎಂದು ಹಾಸನದ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಲ್. ಮಂಜುನಾಥ್ ತಿಳಿಸಿದ್ದಾರೆ.
ಜಿಲ್ಲೆಯ 8 ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಕೃಷಿ ಕಾರ್ಯಾನುಭವ ಶಿಬಿರ ಮುಕ್ತಾಯದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಎಂದು ಕರೆಯುವ ಈ ಕಾರ್ಯಕ್ರಮವು ಹಲವರ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ಅವರು ಹೇಳಿದರು.
ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ. ಡಿ. ರಘುಪತಿ ಮಾತನಾಡಿ, ಮೂರು ತಿಂಗಳುಗಳ ಕಾಲ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮಗಳಲ್ಲೇ ಇದ್ದು, ಅಲ್ಲಿಯ ಪರಿಸರವನ್ನು ತಿಳಿದುಕೊಂಡು ಆ ಭಾಗದ ರೈತರಿಗೆ ಅಗತ್ಯವಿರುವ ತಾಂತ್ರಿಕತೆಗಳ ಬಗ್ಗೆ ಪ್ರಾತ್ಯಕ್ಷಿಕೆ, ಪ್ರಯೋಗಗಳನ್ನು ಕೈಗೊಳ್ಳುತ್ತಾರೆ. ಕ್ಷೇತ್ರ ಭೇಟಿಯೂ ಇರುತ್ತದೆ. ರೈತರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಾರೆ, ಪರಿಹರಿಸಲು ತಜ್ಞರೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಸಭೆಗಳನ್ನು ಏರ್ಪಡಿಸುತ್ತಾರೆ. ಇಂತಹ ಕಾರ್ಯಕ್ರಮ ಹಳ್ಳಿಗರಿಗೂ, ಕೃಷಿ ವಿದ್ಯಾರ್ಥಿಗಳಿಗೂ ಉಪಯುಕ್ತ ಎಂದು ಹೇಳಿದರು.
ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿಕೊಂಡು ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿದ್ದರು ಎಂದು ನುಡಿದರು. ಒಂದೊಂದು ಹಳ್ಳಿಯಲ್ಲಿ ಏಳೆಂಟು ಕೃಷಿ ವಿದ್ಯಾರ್ಥಿಗಳು 90 ದಿನಗಳ ಕಾಲ ವಿವಿಧ ಸಂಗತಿಗಳ ಬಗ್ಗೆ ಅಭ್ಯಾಸಿಸಿ ಮಾಹಿತಿ ಕೇಂದ್ರಗಳನ್ನು ರೂಪಿಸುತ್ತಾರೆ. ಕೈತೋಟ, ಎರೆಹುಳು ಗೊಬ್ಬರ, ಅಜೋಲ್ಲ, ಮೇವಿನ ತಳಿಗಳು, ವಿವಿಧ ಸುಧಾರಿತ ತಳಿಗಳು, ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ಖಚಿತಪಡಿಸುತ್ತಾರೆ. ಸ್ಥಳೀಯ ಸಮಸ್ಯೆಗಳ ನಿವಾರಣೆಗೂ ಗಮನ ಹರಿಸುತ್ತಾರೆ. ತಜ್ಞರನ್ನು, ಅಧಿಕಾರಿಗಳನ್ನು ಆಮಂತ್ರಿಸಿ ಸಮಾರಂಭಗಳನ್ನು ಏರ್ಪಡಿಸಿದ್ದರು.
ಹೀಗೆ ಹಳ್ಳಿಗರ ಬದುಕಿಗೆ ಬೇಕಾದ ಹಲವಾರು ಸಂಗತಿಗಳನ್ನು ತಿಳಿಸುವ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಕೃಷಿ ಜೈವಿಕ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೊನೆಯ ಹಂತದಲ್ಲಿ ಭಾಗವಹಿಸಿ ಪೌಷ್ಠಿಕ ಆಹಾರ, ಜೈವಿಕ ತಂತ್ರಜ್ಞಾನ, ಸಂಸ್ಕರಣೆ, ಮೌಲ್ಯವರ್ಧನೆ ಮುಂತಾದ ವಿಷಯಗಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಕೃಷಿಕರು ತಮ್ಮ ನೆಮ್ಮದಿಯ ಬದುಕಿಗೆ ಏನೆಲ್ಲಾ ದಾರಿಗಳನ್ನು ಹುಡುಕಿಕೊಳ್ಳಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಈ ಮೂರು ತಿಂಗಳುಗಳ ಅವಧಿಯಲ್ಲಿ ರೈತರು ತಮಗೆ ಬೇಕಾಗಿರುವ ಅಗತ್ಯ ವಿಷಯಗಳನ್ನು ಪಡೆಯಲು ಸುಸಂದರ್ಭವಾಗಿರುತ್ತದೆ ಎಂದು ಶಿಬಿರಗಳ ಆಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹಾಯಕ ಪ್ರಾಧ್ಯಾಪಕ ಡಾ. ಜಿ. ನಾಗೇಶ್ ಹೇಳಿದರು. ಕಾರ್ಯಕ್ರಮ ಹೊರಜಗತ್ತಿನ ಹತ್ತಾರು ಬೆಳವಣಿಗೆಗಳನ್ನು ತೆರೆದಿಟ್ಟಿತು. ರೈತರಿಂದ ನಾವು ಸಾಕಷ್ಟು ಕಲಿತೆವು ಎಂದು ಕೃಷಿ ವಿದ್ಯಾರ್ಥಿ ಎಂ. ಎನ್. ಸುನಾಗ್ ಪ್ರತಿಕ್ರಿಯಿಸಿದರು.
ಹಳ್ಳಿಗರು ನಮಗೆ ಚೆನ್ನಾಗಿಯೇ ಸಹಕಾರ ನೀಡಿದರು, ತಮ್ಮ ಮಕ್ಕಳಂತೆ ನಮ್ಮನ್ನು ಕಂಡರು, ದುಡಿಮೆಯ ದಾರಿಗಳನ್ನು ಪರಿಚಯಿಸಿದರು, ಗ್ರಾಮ ವಾಸ್ತವ್ಯವು ಒಳ್ಳೆಯ ಅನುಭವಗಳನ್ನು ಕಲಿಸಿತು ಎಂದು ವಿದ್ಯಾರ್ಥಿನಿ ಅಕ್ಷತಾ ಹೇಳಿದರು.
ಇಲಾಖೆಯ ಸಹಕಾರದೊಂದಿಗೆ ಪ್ರತಿ ವರ್ಷವೂ ಅಂತಿಮ ವರ್ಷದ ಕೃಷಿ ಪದವೀಧರರಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸ್ಥಳೀಯ ರೈತರು, ಜನಪ್ರತಿನಿಧಿಗಳು, ಶಾಸಕರಿಂದ ಪ್ರಶಂಸೆ ವ್ಯಕ್ತವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

