ಹಾಸನ

ಸೌಲಭ್ಯ ವಂಚಿತ ರಾಯರಕೊಪ್ಪಲು

Published On :

-ಎಚ್.ಆರ್.ರಾಘವೇಂದ್ರ
ಆಲೂರು: ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿಯ ರಾಯರಕೊಪ್ಪಲು ಗ್ರಾಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜಾವಬ್ದಾರಿತನದಿಂದಾಗಿ ಸೌಲಭ್ಯ ವಂಚಿತವಾಗಿದೆ.
ಸುಮಾರು 150 ರಿಂದ 200 ಕುಟುಂಬಗಳಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆ, ವಿದ್ಯಾರ್ಥಿನಿಲಯ ಜೇನು ಸಾಕಾಣೆ ಕೇಂದ್ರಗಳು ಇದ್ದು ಇಲ್ಲದಂತಾಗಿವೆ. 1923ರಲ್ಲಿ ಉದ್ಘಾಟನೆಗೊಂಡ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಕೇಂದ್ರದಲ್ಲಿ ನೌಕರರ ತೀವ್ರ ಕೊರತೆ ಕಾಡುತ್ತಿದೆ.
ಆಸ್ಪತ್ರೆಯಲ್ಲಿರ ಬೇಕಾದ ಮೂವರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಪೈಕಿ ಇರುವುದು ಒಬ್ಬರೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಇಲ್ಲ, ಕಿರಿಯ ಪುರುಷ ಆರೋಗ್ಯ ಸಹಾಯಕ ಇಲ್ಲ, ಗುಮಾಸ್ತರು ಇಲ್ಲ, ಗ್ರೂಪ್ ಡಿ ನೌಕರರಿಲ್ಲದೆ ವೈದ್ಯರೇ ಚನ್ನಾಪುರ ಆಸ್ಪತ್ರೆಯ ಡಿ ಗ್ರೂಪ್ ನೌಕರರನ್ನು ಕಾಡಿಬೇಡಿ ಕರೆತಂದಿದ್ದಾರೆ.
ಬಿಲ್ ಕಟ್ಟದೇ ಫೋನ್ ಸಂಪರ್ಕ ಬಂದ್: ಇರುವ ಒಬ್ಬ ಗುತ್ತಿಗೆ ಆಧಾರಿತ ವೈದ್ಯ ಹಾಸನದಿಂದ ಇಲ್ಲಿಗೆ ಬರಬೇಕಾಗಿದೆ ಇದರಿಂದಾಗಿ ಈ ಭಾಗದ ಜನತೆ ಅನಾರೋಗ್ಯಕ್ಕೆ ತುತ್ತಾದಾಗ ದೂರದ ತಾಲೂಕು ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ಬಂದೊದಗಿದೆ. ಫೋನ್‌ನ್ ಬಿಲ್ ಕಟ್ಟದಿರುವ ಕಾರಣ ಸಂಪರ್ಕ ಕಡಿತಗೊಂಡು ತಿಂಗಳುಗಳೆ ಕಳೆದಿದೆ. ಯು.ಪಿ.ಎಸ್ ಕೆಟ್ಟು ನಾಲ್ಕು ತಿಂಗಳಾಗಿದೆ. ವೈದ್ಯಕೀಯ ಉಪಕರಣಗಳಿಲ್ಲ.
ಇಲ್ಲಿನ ವೈದ್ಯರು ಹೇಳುವಂತೆ ಇಲ್ಲಿರುವ ನೀರಿನ ತೊಟ್ಟಿ ಸ್ವಚ್ಛ ಮಾಡಲೂ ಯಾರು ಇಲ್ಲ, ಹಾಗೂ ಕನಿಷ್ಠ ಒಂದು ಬಲ್ಬ್ ಹಾಕಿಸಲು ನಮಗೆ ಅಧಿಕಾರವಿಲ್ಲ. ಏಕೆಂದರೆ ನಾವು ಗುತ್ತಿಗೆ ಆಧಾರದ ಮೇಲೆ ನಿಯುಕ್ತಿಗೊಂಡಿರುವುದೇ ಆಗಿದೆ. ಎಂಬಿಬಿಎಸ್ ಪಾಸುಮಾಡಿ 13 ವರ್ಷ ಸೇವೆ ಸಲ್ಲಿಸಿರುವ ನನಗೆ ಆಡಳಿತ ನಡೆಸಲು, ಆಗುವುದಿಲ್ಲವೇ ಎಂದು ಪ್ರಶ್ನಿಸುವ ಅವರು ಈ ಬಗ್ಗೆ ಡಿ.ಎಚ್.ಒ ರವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ.
ವೈದ್ಯರು ರೋಗಿಗಳೊಂದಿಗೆ, ಸೂಕ್ತ ರೀತಿ ಸ್ಪಂದಿಸುವುದಿಲ್ಲವೆಂದು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಹಲವಾರು ಬಾರಿ ದೂರು ಸಹ ನೀಡಿದ್ದಾರೆ. ಇದೆಲ್ಲದರಿಂದಾಗಿ ಸುತ್ತ ಮುತ್ತಲ ಗ್ರಾಮಸ್ಥರು ತೀವ್ರ ತೊಂದರೆ  ಅನುಭವಿಸುವಂತಾಗಿದೆ.
ಯಾರೂ ಚಕಾರ ಎತ್ತುತ್ತಿಲ್ಲ:  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಲ್ಲಿ ಸರ್ಕಾರ ತಾಯಿ ಮಗುವಿನ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಆದರೆ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವವರಿಲ್ಲದಿರುವ ಬಗ್ಗೆ ಯಾರೂ ಚಕಾರವೆತ್ತದೆ  ಇರುವುದು ಆಶ್ಚರ್ಯರದ ಸಂಗತಿಯಾಗಿದೆ. ಇದರಿಂದಾಗಿ ಬಡ ಗರ್ಭಿಣಿಯರು ದೂರದ ಆಸ್ಪತ್ರೆಗಳಿಗೆ ತೆರಳಬೇಕಿದ್ದು ತಾಲೂಕು ಆಸ್ಪತ್ರೆಯಲ್ಲಿ 108 ವಾಹನ ಕೆಟ್ಟು ನಿಂತಿದ್ದು ತುರ್ತು ಸಂದರ್ಭದಲ್ಲಿ ಗರ್ಭಿಣಿ ಹಾಗೂ ಮಗುವನ್ನು ದೇವರೆ ಕಾಪಾಡಬೇಕಿದೆ.     
ಇನ್ನು ಗ್ರಾಮದಲ್ಲಿರುವ ವಿದ್ಯಾರ್ಥಿನಿಲಯ ಸರ್ಕಾರಿ ಸವಲತ್ತುಗಳು ಅಧಿಕಾರಿಗಳ ಬೇಜವಬ್ದಾರಿತನದಿಂದ ಯಾವ ರೀತಿ ಪೋಲಾಗುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಡಾನೆ ದಾಳಿಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಈ ಭಾಗದ ಜನತೆ ಭಯದಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ.
ಏಕೆಂದರೆ ಶಾಲಾ ಮಕ್ಕಲು ನಡೆದು ಬರುವ ಮಾರ್ಗ ಮಧ್ಯೆ ಕಾಡಾನೆಗಳ ದಾಳಿಗೆ ಮಕ್ಕಳು ಸಿಲುಕಬಹುದೆಂಬ ಭಯ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಬೇಕಿದ್ದ ವಿದ್ಯಾರ್ಥಿ ನಿಲಯ ಮುಚ್ಚಿ ವರ್ಷಗಳೆ ಕಳೆದಿವೆ. ಅಶ್ಚರ್ಯದ ಸಂಗತಿ ಎಂದರೆ ಹಾಸ್ಟೆಲ್ ಮುಚ್ಚಿದ ನಂತರ ಅಲ್ಲಿದ್ದ ಬೆಲೆಬಾಳುವ ಪಾತ್ರೆ, ಅಲ್ಯುಮಿನಿಯಂ ಟ್ರಂಕ್‌ಗಳು, ಹಾಸಿಗೆಗಳು ಸ್ಟವ್ ಪುಸ್ತಕಗಳು ಸೇರಿದಂತೆ ಯಾವುದೆ ವಸ್ತುಗಳನ್ನು ಇಲಾಖೆಯವರು ತೆಗೆದುಕೊಂಡು ಹೋಗದೆ ನಮಗೆ ಸಂಬಂಧ ವಿಲ್ಲವೆಂಬಂತೆ ಇಲ್ಲಿಯೇ ಬಿಟ್ಟು ಹೋಗಿರುವುದಾಗಿದೆ. ಇವುಗಳಲ್ಲಿ ಏಳೆಂಟು ಟ್ರಂಕ್‌ಗಳನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳನ್ನು ದೋಚಿಕೊಂಡು ಹೋಗಲಾಗಿದೆ.
ಹಾಸ್ಟೆಲ್ ಕಿಟಿಕಿ, ಬಾಗಿಲು, ಕಳ್ಳರ ಪಾಲು:  ಹಾಸಿಗೆಗಳು ಜೂಜು ಕುಡಿತ ಅನೈತಿಕ ಚಟುವಟಿಕೆ ನಡೆಸುವವರಿಗೆ ಅನುಕೂಲಕವಾಗಿದೆ. ಅಲ್ಲದೆ ಈ ಹಾಸ್ಟೆಲ್ ಕಿಟಿಕಿ ಬಾಗಿಲು ಕಬ್ಬಿಣ ಮರ ಹೆಂಚುಗಳು ಸಹ ಕಳ್ಳರ ಪಾಲಾಗಿವೆ. ಇಷ್ಟೆಲ್ಲಾ ಆದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
 ಈ ವಿದ್ಯಾರ್ಥಿ ನಿಲಯ ಪಕ್ಕದಲ್ಲೆ 4 ಎಕರೆ ಪ್ರದೇಶದಲ್ಲಿ ಜೇನುಸಾಕಣೆ ತರಬೇತಿ ಕೇಂದ್ರದ 2 ಕಟ್ಟಡಗಳಿದ್ದು ಈ ಕೇಂದ್ರ ಸಹ ಮುಚ್ಚಿ ದಶಕಗಳೇ ಕಳೆದಿವೆ. ಗ್ರಾಮದಲ್ಲಿರುವ ವೆಟನರಿ ಹಾಸ್ಟೆಲ್‌ನಲ್ಲಿ ವೈದ್ಯರಿಲ್ಲ. ಕುಡಿಯುವ ನೀರಿಲ್ಲ, ವಿದ್ಯುತ್ ಯಾವ ಸಂದರ್ಭದಲ್ಲಿ ಇರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ.
ಅಲ್ಲದೇ ಇಲ್ಲಿದ್ದ ನೆಮ್ಮದಿ ಕೇಂದ್ರವನ್ನು ಕೆಂಚಮ್ಮನ ಹೊಸಕೋಟೆಗೆ ಸ್ಥಳಾತರಿಸಿರುವುದರಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲಾ. ರಸ್ತೆ ಸರಿಯಿದ್ದರೂ ಗ್ರಾಮಕ್ಕೆ ಬರಬೇಕಾದ ಬಸ್ಸುಗಳಲ್ಲಿ ಅರ್ಧದಷ್ಟು ಬಸ್ಸುಗಳು ಮಗ್ಗೆಯಿಂದಲೆ ವಾಪಸಾಗುತ್ತವೆ.
 ಗ್ರಾಮದಲ್ಲಿ ಈ ಎಲ್ಲದರ ಜೊತೆಗೆ ಕಾಡಾನೆ ಹಾವಳಿ ಬೇರೆ. ಇನ್ನಾದರೂ ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರ ಇತ್ತ ಗಮನ ಹರಿಸುವಂತೆ ಸೂಚಿಸುವರೇ, ಕಾದು ನೋಡ ಬೇಕಿದೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.