ಧರ್ಮಾಚರಣೆಯಿಂದ ಸುಖ, ಶಾಂತಿ'
ಅರಸೀಕೆರೆ: ಧಾರ್ಮಿಕತೆಯಲ್ಲಿ ದೇವರು-ಧರ್ಮದ ನಡುವೆ ಅವಿನಾಭಾವ ಸಂಬಂಧ ಹೊಂದಿದ್ದು, ಧರ್ಮಾಚಾರಣೆಯಿಂದ ಮನುಷ್ಯ ಸುಖ, ಶಾಂತಿ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಣಕಟ್ಟೆ ಹೋಬಳಿ ಯರೇಹಳ್ಳಿ ಗ್ರಾಮದಲ್ಲಿ ಯರಹಳ್ಳಿ ಪಾಳ್ಯ, ಪುರದಕಟ್ಟೆ, ರಾಮಗಟ್ಟೆ ಗ್ರಾಮಗಳ ಗ್ರಾಮಸ್ಥರು ನೂತನವಾಗಿ ನಿರ್ಮಿಸಿರುವ ತಿಮ್ಮಪ್ಪನ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ, ಆಂಜನೇಯ ಸ್ವಾಮಿ, ಚೌಡೇಶ್ವರಿ ದೇವಿ ಹಾಗೂ ಅರಳಿಮರದಮ್ಮ ದೇವಿ ಅವರ ದೇವಾಲಯಗಳ ಕಲಶಾರೋಹಣ ಮತ್ತು ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಧರ್ಮಾಚರಣೆ, ಪರೋಪಕಾರ, ಭಕ್ತಿ, ಇರುವೆಡೆ ದೈವತ್ವ ಇರುತ್ತದೆ ಎಂದು ಸ್ವಾಮೀಜಿ ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಜಗತ್ತಿನ ದೊಂಬರಾಟದ ನಡುವೆ ಮಾನಸಿಕವಾಗಿ ಸುಖ ಶಾಂತಿ ನೆಮ್ಮದಿ ದೊರೆಯುವ ಸ್ಥಳವೆಂದರೆ ಭಗವಂತನ ಸನ್ನಿಧಿ. ಆ ಕಾರಣದಿಂದ ಧರ್ಮ ನಿಷ್ಠೆ ಬೆಳೆಸಲು ಗುರು-ಹಿರಿಯರು ಸಾವಿರಾರು ವರ್ಷಗಳಿಂದ ಗ್ರಾಮ ಪಟ್ಟಣಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಸಮಾಜದಲ್ಲಿ ದೇವರ ಭಯದ ಮೂಲಕ ಒಂದಾಗಿ ಬಾಳುವುದನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಧರ್ಮ ಮತ್ತು ಧಾರ್ಮಿಕ ಮನೋಭಾವನೆ ಬೆಳೆಸಿಕೊಂಡು ದೇವಸ್ಥಾನಗಳ ಅಭಿವೃದ್ಧಿ ಮೂಲಕ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ. ದೇವಸ್ಥಾನಗಳ ಅಭಿವೃದ್ಧಿ ಜತೆಗೆ ದೈವಭಕ್ತಿ ಹೆಚ್ಚಬೇಕಾದರೆ ಪ್ರತಿಯೊಬ್ಬರೂ ಧರ್ಮಕ್ಕೆ ಮೊರೆ ಹೋಗಬೇಕು. ಧರ್ಮ ಪಾಲಿಸುವ ವ್ಯಕ್ತಿಯನ್ನು ಧರ್ಮ ರಕ್ಷಿಸುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕುಮಾರಿ ಗಾನವಿ ವೈ.ಎಸ್.ವೀರಭದ್ರಪ್ಪ ಭರತನಾಟ್ಯ ನೆರೆದಿದ್ದವರನ್ನು ರಂಜಿಸಿತು. ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಹಳ್ಳಿ ಮಹೇಶ್, ಗುಬ್ಬಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವಿ. ಬಸವರಾಜು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಮ್ಮ, ಮಾಜಿ ಸದಸ್ಯರಾದ ಡಿ.ಎಂ. ತಮ್ಮಯ್ಯ, ಕಲ್ಲುಸಾದರಹಳ್ಳಿ ಶಿವಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ್, ದಾಸಪ್ಪ ಇನ್ನೂ ಮೊದಲಾದವರು ಇದ್ದರು. ಆಕಾಶವಾಣಿ ಕೇಂದ್ರದ ನಿರೂಪಕಿ ಸವಿತಾ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

