ಕಾಂಗ್ರೆಸ್ ತಾರತಮ್ಯಕ್ಕೆ ಇದೇ ಸಾಕ್ಷಿ
-ಪಿ. ಶಾಂತಕುಮಾರ್
ಅರಸೀಕೆರೆ: ನಿಜಕ್ಕೂ ಅರಸೀಕೆರೆ ಬರವನ್ನೇ ಅಪ್ಪಿಕೊಂಡಿರುವ ತಾಲೂಕು. ಇಲ್ಲಿಯ ಜನ ಶ್ರಮ ಜೀವಿಗಳು. ಸತತ ಬರದ ಬೇಗುದಿಗೆ ಸಿಕ್ಕು ನಲುಗಿ ಇಲ್ಲಿನ ಆರ್ಥಿಕ ಮೂಲವಾಗಿದ್ದ ತೆಂಗಿನ ಮರಗಳು ಸುಳಿ ಬಿದ್ದು ಹೋಗಿವೆ.
ಇದರ ಪರಿಣಾಮ ಕಂಗಾಲಾಗಿರುವ ರೈತರು ತಮ್ಮ ಬದುಕಿಗಾಗಿ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಸರ್ಕಾರದ ತಾರತಮ್ಯಕ್ಕೆ ಉದಾಹರಣೆಯಾಗಿದೆ.
ಇತ್ತೀಚಿಗೆ ಸರ್ಕಾರ ಬಿಡುಗಡೆ ಮಾಡಿರುವ ರಾಜ್ಯದ 64 ತಾಲೂಕುಗಳ ಪಟ್ಟಿಯಲ್ಲಿ ಅರಸೀಕೆರೆ ತಾಲೂಕು ಹೆಸರು ಮಾಯವಾಗಿರುವುದು ಆಶ್ಚರ್ಯಕ್ಕೆ ಎಡೆಮಾಡಿದೆ. ಸತತ ಮಳೆ ಅಭಾವದಿಂದ ತಾಲೂಕಿನಲ್ಲಿ ಸುಮಾರು ಏಳೂವರೆ ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸುಳಿ ಬಿದ್ದು ಸಂಪೂರ್ಣ ನಾಶವಾಗಿವೆ ಎಂದು ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದರೂ, ಸರ್ಕಾರ ರಾಜಕೀಯ ಕಾರಣಗಳಿಗಾಗಿ ಈ ಕ್ಷೇತ್ರವನ್ನು ಪಟ್ಟಿಯಿಂದ ಕೈಬಿಟಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ರೈತರ ಬದುಕನ್ನು ಕಿತ್ತು ತಿನ್ನುತ್ತಿರುವ ನೀರಿನ ಅಭಾವ, ತಾಲೂಕಿನ ಎಲ್ಲಾ ಕೆರೆ-ಕಟ್ಟೆಗಳು ಸಂಪೂರ್ಣ ಬರಿದಾಗಿದ್ದು ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. 600-700 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ಪ್ಲೋರೈಡ್ ಸಮಸ್ಯೆಯಿಂದ ಬಳಲುವಂತಾಗಿದ್ದರೂ ರೈತನ ಮೇಲೆ ಸರ್ಕಾರಕ್ಕೆ ಕರುಣೆ ಬಾರದಿರುವುದು ಆಶ್ಚರ್ಯದ ಸಂಗತಿ.
ಮುಂಗಾರು ಆರಂಭವಾದಾಗಿನಿಂದಲೂ ಮಳೆ ಇಲ್ಲಿಯ ರೈತನ ಬದುಕಿನೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಿದ್ದರಿಂದ ರೈತರು ಸಾಲ ಮಾಡಿ ಆಭರಣಗಳನ್ನು ಅಡವಿಟ್ಟು ಕೈಯಲ್ಲಿದ್ದ ಅಷ್ಟಿಟ್ಟು ಹಣವನ್ನು ಹಾಕಿ ಬಿತ್ತನೆ ಮಾಡಿ ಮತ್ತೆ ವರುಣನ ಅವಕೃಪೆಯಿಂದಾಗಿ ಸಂಪೂರ್ಣ ಬೆಳೆ ನಾಶವಾಗಿ ಹಿಂಗಾರು ಕೂಡ ಕೈ ಕೊಟ್ಟು ಅನ್ನದಾತ ಬರಿಗೈಯಾಗಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ. ಇಲ್ಲಿನ ಪರಿಸ್ಥಿತಿಯನ್ನರಿತು ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಸರ್ಕಾರ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ದುರದೃಷ್ಟಕರ.
ಜಿಲ್ಲೆಯ ಬೇಲೂರು ಹಾಗೂ ಅರಕಲಗೂಡು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಕಾಡಲಾರಂಭಿಸಿದ್ದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ಎರಡು ಕ್ಷೇತ್ರದ ಶಾಸಕರು ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿದ್ದು ಅದರ ದುರಸ್ಥಿಗೆ ಹಣ ನೀಡಬೇಕೆಂದು ಸದನದಲ್ಲಿ ಒತ್ತಾಯಿಸಿದ್ದು ಹಸಿರಾಗಿರುವಾಗಲೇ ಆ ಕ್ಷೇತ್ರಗಳನ್ನು ಬರಪಟ್ಟಿಗೆ ಸೇರಿಸಿ ಅರಸೀಕೆರೆ ಕೈ ಬಿಟ್ಟಿರುವುದು ಜೆಡಿಎಸ್ ಶಾಸಕರಿದ್ದಾರೆ ಎಂಬ ಕಾರಣಕ್ಕೆ. ಇಂತಹ ಪಕ್ಷಬೇಧವನ್ನು ಈವರೆಗೂ ಯಾವುದೇ ಸರ್ಕಾರ ಮಾಡಿರಲಿಲ್ಲ ಎಂಬುದು ರೈತರ ದೂರಾಗಿದೆ.
ವಿರೋಧ ಪಕ್ಷದ ಶಾಸಕರಿದ್ದಾರೆ ಎಂಬ ಕಾರಣಕ್ಕೆ ರೈತರ ಹಿತ ಮರೆತು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲು ಹೊರಟಂತಿದೆ. ಅರಸೀಕೆರೆ ತಾಲೂಕಿಗೆ ಸೇರಿರುವ ಬೇಲೂರು ಕ್ಷೇತ್ರದ ಜಾವಗಲ್ ತಮ್ಮ ಕಾರ್ಯಕ್ಷೇತ್ರವೆಂಬುದನ್ನು ಶಾಸಕ ಮರೆತಿದ್ದಾರೆ ಎಂಬುದೇ ವಿಪರ್ಯಾಸ ಅಲ್ಲವೇ.
ಕುಡಿಯಲು ನೀರು, ಜಾನುವಾರುಗಳಿಗೆ ಮೇವಿಲ್ಲದೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಇದು ಅಧಿಕಾರಿಗಳ ಗಮನಕ್ಕೆ ಬಂದಂತಿಲ್ಲ. ಕೆಲ ರೈತ ಮುಖಂಡರು ಗೋಶಾಲೆ ಆರಂಭಿಸುವಂತೆ ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಂಡ ಘಟನೆ ವಿಧಾನಪರಿಷತ್ತಿನಲ್ಲಿ ಪಟೇಲ್ ಶಿವರಾಂ ಪ್ರಸ್ತಾಪ ಮಾಡಿ ಅರಸೀಕೆರೆ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವರು ವಾಗ್ದಾನ ನೀಡಿದ್ದು ಇದೇ ರೀತಿ ವಿಧಾನಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ತಾಲೂಕಿನ ಬರ ಪರಿಸ್ಥಿತಿಯ ಬಗ್ಗೆ ಪ್ರಶ್ನಿಸಿದಾಗ ಕೃಷಿ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದು ಮಾಸುವ ಮುನ್ನವೇ ಬರಪಟ್ಟಿಯಿಂದ ಕೈಬಿಟ್ಟು ಸರ್ಕಾರ ತಾಲೂಕಿನ ರೈತರನ್ನು ಆತಂಕಕ್ಕೀಡುಮಾಡಿದೆ.
ತಾಲೂಕನ್ನು ಬರಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಮುಖಂಡರು ಶಾಸಕರನ್ನು ದೂರುವುದನ್ನು ಬಿಟ್ಟು ಈ ಅನ್ಯಾಯವನ್ನು ಸರಪಡಿಸಲು ಹೋರಾಟ ನಡೆಸುವ ಅಗತ್ಯವಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ನಡೆಸಿದ ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದರು. ಇದೇ ಸಭೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಆದರೂ ತಾಲೂಕಿಗೆ ಅನ್ಯಾಯವಾಗಿದ್ದು ಯಾರಿಂದ ಎಂಬುದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಂಗಾರು ಹಂಗಾಮಿನಿಂದಲೂ ಉತ್ತಮ ಮಳೆ ಬೀಳುತ್ತಿರುವ ಪ್ರದೇಶಗಳನ್ನು ಬರಪೀಡಿತವೆಂದು ಘೋಷಿಸಿ ನೈಜವಾಗಿ ಬರವನ್ನು ಎದುರಿಸುತ್ತಿರುವ ತಾಲೂಕನ್ನು ಪಟ್ಟಿಯಿಂದ ಕೈಬಿಟ್ಟಿರುವುದು, ಸರ್ಕಾರ ತಾಲೂಕಿನ ರೈತ ಸಮುದಾಯಕ್ಕೆ ಮಾಡಿದ ಘೋರ ಅಪಚಾರವಾಗಿದೆ. ಇದನ್ನು ಸರಿಪಡಿಸಲು ಪಕ್ಷಬೇಧ ಮರೆತು ಜನಪ್ರತಿನಿಧಿಗಳು ಹಾಗೂ ಎಲ್ಲಾ ಪಕ್ಷದ ಮುಖಂಡರು ಧ್ವನಿ ಎತ್ತಿ ಹೋರಾಡುವ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

