ಹಾಸನ

ಗಿಡ ನೆಟ್ಟು ಹೆದ್ದಾರಿ ಬಂದ್

Published On :

ಸಕಲೇಶಪುರ: ಶಿರಾಡಿ ಘಾಟ್ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಗುರುವಾರ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ನಾನಾ ಸಂಘ ಸಂಸ್ಥೆಗಳು ಹೆದ್ದಾರಿಯಲ್ಲಿ ಗಿಡ ನೆಟ್ಟು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
 ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪ ಎಪಿಎಂಸಿ ಯಾರ್ಡ್ ಮುಂಭಾಗ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 48 ರ ಶಿರಾಡಿ ರಸ್ತೆಯ ಸುಮಾರು 30 ಕಿ.ಮೀ. ರಸ್ತೆಯನ್ನು ದುರಸ್ಥಿಮಾಡಲಾಗಿಲ್ಲ. ಇದರಿಂದ ಶಿರಾಡಿ ಘಾಟ್
ರಸ್ತೆ ಹೊಂಡಗಳಿಂದ ಕೂಡಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ.
 ಅಲ್ಲದೆ ಅಧಿಕಾರಿಗಳ ನಿರ್ಲಕ್ಷದಿಂದ ದಿನನಿತ್ಯ ನೂರಾರು ಮರಳು ಲಾರಿಗಳು ನಿಯಮ ಬಾಹಿರವಾಗಿ ಮರಳು ಸಾಗಿಸುತ್ತಿದ್ದರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಇದರಿಂದ ಘಾಟ್‌ನಲ್ಲಿ ದಿನನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಿದ್ದು ಲಘುವಾಹನಗಳು ಸಂಚರಿಸುವುದು ತುಂಬಾ ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
 ಅತಿಶೀಘ್ರವಾಗಿ ಹೆದ್ದಾರಿ ದುರಸ್ತಿ ನಡೆಸದಿದ್ದರೆ 2009 ರಲ್ಲಿ ಹೆದ್ದಾರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮಾದರಿಯಲ್ಲೆ ಈ ಬಾರಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
 ಪ್ರತಿಭಟನೆ ನೇತೃತ್ವವನ್ನು ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜೀತ್‌ಶೆಟ್ಟಿ ರೈತಸಂಘದ ಅಧ್ಯಕ್ಷ ಸಾ.ಸು. ವಿಶ್ವನಾಥ್, ಕರವೇ ಅಧ್ಯಕ್ಷ ಮಾಗೇರಿ ಸುರೇಶ್‌ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ.ಮಂಜುನಾಥ್, ಸಕಲೇಶ್ವರಸ್ವಾಮಿ ದೇವಸ್ಥಾನ ಮಂಡಳಿಯ ನಂದಿ ಕೃಪರಾಜು, ಲಯನ್ಸ್ ಅಧ್ಯಕ್ಷ ನರೇಶ್, ರೋಟರಿ ಸಂಸ್ಥೆ ಅಧ್ಯಕ್ಷ ಡಾ.ರವಿಕಿರಣ್, ನಾಗರಿಕ ಸಂರಕ್ಷಣ ಸಮಿತಿಯ ರವಿಕುಮಾರ್ ಮುಂತಾದವರು ವಹಿಸಿದ್ದರು.
ಪ್ರತಿಭಟನೆ ವೇಳೆ ದುರಸ್ತಿಕಂಡ ಉಬ್ಬರಸ್ತೆ
ಪಟ್ಟಣದ ಹೊಸಬಸ್ ನಿಲ್ದಾಣ ಸಮೀಪ ಅವೈಜ್ಞಾನಿಕವಾಗಿ ಹಾಕಲಾಗಿರುವ ಹಂಪ್ಸ್‌ಗಳಿಂದ ದಿನನಿತ್ಯ ವಾಹನಗಳು ಕೆಟ್ಟು ನಿಲ್ಲುವುದು ಸರ್ವೇ ಸಾಮಾನ್ಯ. ಇದನ್ನರಿತ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜೀತ್‌ಶೆಟ್ಟಿ ಹಂಪ್ಸ್‌ಗಳಿಗೆ ಕಲ್ಲಿನ ಪುಡಿ ಹಾಕಿ ತುಂಬಿಸಿದ್ದರಿಂದ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.