ಇಬ್ಬರು ಕಳ್ಳರ ಬಂಧನ: ರು. 7 ಲಕ್ಷ ಬೆಲೆಯ ಚಿನ್ನಾಭರಣ ವಶ
ಚನ್ನರಾಯಪಟ್ಟಣ: ತಾಲೂಕಿನ ವಿವಿಧ ಕಡೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿ ಅವರಿಂದ 7 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ವಿವಿಧೆಡೆ ಮನೆಯ ಬೀಗ ಒಡೆದು ಮನೆಯಲ್ಲಿದ್ದ ವಸ್ತುಗಳು ಹಾಗೂ ಆಭರಣಗಳನ್ನು ಕಳವು ಮಾಡಿದ ಆರೋಪದ ಮೇಲೆ ಹಾಸನದ ಆಡುವಳ್ಳಿಯ ಸತೀಶ (28) ಬಂಧಿತ. ವಿಚಾರಣೆಯಲ್ಲಿ ತಾಲೂಕಿನಲ್ಲಿ ನಡೆದ 8 ಮನೆಗಳಲ್ಲಿ ಕಳವು ಮಾಡಿರುವುದಾಗಿ ಆರೋಪಿ ಸತೀಶ ಒಪ್ಪಿಕೊಂಡಿದ್ದಾನೆಂದು ಹೆಚ್ಚುವರಿ ಪೋಲಿಸ್ ಅಧಿಕಾರಿ ಜೆ.ಕೆ ರಶ್ಮಿ ತಿಳಿಸಿದರು. ಚನ್ನರಾಯಪಟ್ಟಣದಲ್ಲಿ 6 ಹಾಗೂ ನುಗ್ಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2 ಮನೆಗಳ್ಳತನ ಪ್ರಕರಣದಲ್ಲಿ ಬಂದಿಯಾಗಿರುವ ಸತೀಶ್ನಿಂದ 5.25ಲಕ್ಷ ಬೆಲೆ ಬಾಳುವ ಬಂಗಾರ ಹಾಗೂ ಬೆಳ್ಳಿ ಆಭರಣ, 2 ಸೋನಿ ಎಲ್ಸಿಡಿ ಟಿ.ವಿ, ಒಂದು ಬೈಕ್ ಹಾಗೂ ಗ್ಯಾಸ್ ಸಿಲಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಚನ್ನರಾಯಪಟ್ಟಣ ಹೊರತುಪಡಿಸಿ ಹಾಸನ ನಗರದಲ್ಲಿಯೂ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸತೀಶ್ ಭಾಗಿಯಾಗಿದ್ದಾನೆ. ಶ್ರವಣಬೆಳಗೊಳ ಯಾತ್ರಿ ನಿವಾಸದಲ್ಲಿ ರೂಮು ಪಡೆದು ಪಕ್ಕದ ರೂಮಿನಲ್ಲಿದ್ದ ಹೈದರಾಬಾದ್ನ ವೈದ್ಯರೊಬ್ಬರ ಚಿನ್ನದ ಬ್ರಾಸ್ಲೈಟ್ ಕಳವು ಮಾಡಿದ್ದ ತಾಲೂಕಿನ ನಾಗಯ್ಯನಕೊಪ್ಪಲಿನ ರಾಮೇಗೌಡ(21) ನನ್ನು ಬಂಧಿಸಿ ಆತನಿಂದ 50ಸಾವಿರ ಮೌಲ್ಯದ 22ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಬೇಧಿಸಿದ ಚನ್ನರಾಯಪ್ಪಟ್ಟಣ ಸಿಪಿಐ ಶೈಲೇಂದ್ರಕುಮಾರ್, ಎಸ್ಐ ರಾಜು, ಸುರೇಶ್, ಜಗದೀಶ್, ರವಿಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಯುವತಿ ನಾಪತ್ತೆ
ಹಾಸನ: ಚನ್ನರಾಯಪಟ್ಟಣ ತಾ. ನುಗ್ಗೇಹಳ್ಳಿ ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ರವಿ ರವರ ಪುತ್ರಿ ಹೇಮಾ (19) ಮನೆಯಿಂದ ಚನ್ನರಾಯಪಟ್ಟಣಕ್ಕೆ ಕಾಲೇಜಿಗೆ ಹೋಗುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಚಹರೆ 19 ವರ್ಷ, 5.4 ಅಡಿ ಎತ್ತರ, ಕನ್ನಡ ಮಾತನಾಡುತ್ತಾಳೆ. ತಾಯಿ ಭಾರತಿ ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಸಕಲೇಶಪುರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ವಿಷಸೇವಿಸಿ ಅತ್ಮಹತ್ಯೆಮಾಡಿಕೊಂಡ ಘಟನೆ ತಾಲೂಕಿನ ನಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ರಾಜು (60) ಮೃತಪಟ್ಟ ವ್ಯಕ್ತಿ. ಗುರುವಾರ ಸಂಜೆ ತನ್ನ ಮನೆಯಲ್ಲಿ ಮದ್ಯದೊಂದಿಗೆ ವಿಷ ಸೇರಿಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ.ಇದನ್ನು ಕಂಡ ಗ್ರಾಮಸ್ಥರು ಆತನನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದಾನೆ.
ಗುಂಡಿಗೆ ಬಿದ್ದು ಸಾವು
ಮೈಸೂರು:ಒಳಚರಂಡಿ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಬನ್ನೂರು- ರಾಜೀವನಗರ ವರ್ತುಲ ರಸ್ತೆಯಲ್ಲಿ ನಡೆದಿದೆ.ಅಶೋಕರಸ್ತೆ ನಿವಾಸಿ ರಜಾಕ್ ಪಾಷ (65) ಮೃತಪಟ್ಟವರು. ಗುರುವಾರ ರಾತ್ರಿ 8 ಗಂಟೆಯಲ್ಲಿ ತಮ್ಮ ಹೋಂಡಾ ಆಕ್ಟೀವಾ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಒಳಚರಂಡಿ ಕಾಮಗಾರಿಗಾಗಿ ತೆರಿದಿದ್ದ 15 ಅಡಿ ಆಳದ ಗುಂಡಿಯನ್ನು ಕಾಣದೆ ಬಿದ್ದಿದ್ದಾರೆ.ಶುಕ್ರವಾರ ಬೆಳಗ್ಗೆ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರತೆಗೆದರು.
ಕಾರು ಡಿಕ್ಕಿ: ಗ್ರಾಪಂ ಸದಸ್ಯ ಸಾವು
ಹಾಸನ: ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹೊಳೆನರಸೀಪುರ ತಾಲೂಕಿನ ಮಾವನೂರು ಗ್ರಾಮಪಂಚಾಯ್ತಿ ಸದಸ್ಯ ಕೃಷ್ಣೇಗೌಡ (45) ಸಾವನ್ನಪ್ಪಿದ್ದ ದುರ್ದೈವಿ. ಕೃಷ್ಣೇಗೌಡ ತಮ್ಮ ಟಿವಿಎಸ್ ಪೊಪೆಡ್ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಮಾರುತಿ ಕಾರು ಹಿಂಬದಿಯಿಂದ ಡಿಕ್ಕಿ ಮಾಡಿದ ಪರಿಣಾಮ ಕೃಷ್ಣೇಗೌಡ ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

