ಹಾಸನ

ಜಾತ್ರೆಗೆ ಸೌಲಭ್ಯ ಕೊರತೆ; ರಾಸುಗಳ ಸಂಖ್ಯೆ ಕ್ಷೀಣ

Published On :

ಅರಕಲಗೂಡು: ತಾಲೂಕಿನ ದಕ್ಷಿಣ ಕಾಶಿ, ದೇವಾಲಯಗಳ ಬೀಡು ಎಂದೇ ಖ್ಯಾತವಾಗಿರುವ ರಾಮನಾಥಪುರದ ಐತಿಹಾಸಿಕ ದನಗಳ ಜಾತ್ರೆಗೆ ರಾಸುಗಳ ಆಗಮನ ಆರಂಭಗೊಂಡಿದೆ.
ಕಳೆದ ವರ್ಷದಂತೆ ಈ ವರ್ಷವೂ ರಾಮನಾಥಪುರದ ಶಿರದನಹಳ್ಳಿಗೆ ಹೊಂದಿಕೊಂಡಂತಿರುವ ಕಾಲುವೆ ಅಮ್ಮ ದೇವಾಲಯದ ಪಕ್ಕದಲ್ಲಿ ದನಗಳ ಜಾತ್ರೆ ನಡೆಸಲು ಪಪಂ ಅವಕಾಶ ಕಲ್ಪಿಸಿದೆ. ಇಲ್ಲಿನ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಯವರ ಮಹಾರಥೋತ್ಸವ ಡಿ.8ರಂದು ನಡೆಯಲಿದ್ದು, ಈ ಸಂಬಂಧ ದನಗಳ ಜಾತ್ರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಸುಮಾರು 10 ಸಾವಿರಕ್ಕೂ ಅಧಿಕ ರಾಸುಗಳು ಜಾತ್ರೆಗೆ ಬರುವ ನಿರೀಕ್ಷೆ ಇದೆ. ಈ ಹಿಂದೆ ಇದಕ್ಕೂ ಹೆಚ್ಚಿನ ರಾಸುಗಳು ಜಾತ್ರೆಗೆ ಬರುತ್ತಿದ್ದುವು. ಆದರೆ ಜಾತ್ರೆ ವೇಳೆ ಬರುವ ರಾಸುಗಳು ಮತ್ತು ರೈತರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ಜಾತ್ರೆಗೆ ಬರುವ ರಾಸುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ರಾಸುಗಳನ್ನು ಕರೆ ತರುವ ರೈತರಿಗೆ ಜಾತ್ರೆ ನಡೆಯುವ ಸ್ಥಳದಲ್ಲಿ ಅಗತ್ಯ ಸೌಲಭ್ಯವನ್ನು ಇಲ್ಲಿನ ಗ್ರಾಪಂ ಒದಗಿಸದಿರುವುದೂ ಇದಕ್ಕೆ ಕಾರಣ. ತಿಂಗಳ ಮುಂಚೆಯಿಂದಲೇ ಜಾತ್ರೆಗೆ ರಾಸುಗಳು ಬರುತ್ತಿದ್ದುವು. ತಮ್ಮ ಕೃಷಿ ಚಟುವಟಿಕೆ ಸೇರಿದಂತೆ ವ್ಯಾಪಾರಕ್ಕಾಗಿ ರಾಸುಗಳನ್ನು ಖರೀದಿಸುವವರ ಸಂಖ್ಯೆಯೂ ಅಧಿಕವಾಗಿ ಇರುತ್ತಿತ್ತು.
ಸುಮಾರು ಒಂದರಿಂದ ಒಂದೂವರೆ ಲಕ್ಷ ರು.ಗಳವರೆಗೂ ರಾಸುಗಳು ಮಾರಾಟವಾಗಿರುವ ಉದಾಹರಣಗಳಿವೆ. ಬತ್ತದ ಕಣಜ ಎನಿಸಿರುವ ಪಕ್ಕದ ಕೆ.ಆರ್.ನಗರ, ಪಿರಿಯಾಪಟ್ಟಣ, ಕೊಡಗು ಪ್ರದೇಶಗಳಿಂದಲೂ ರಾಸುಗಳು ಜಾತ್ರೆಗೆ ಬರುತ್ತವೆ. ಮಂಡ್ಯ ಇನ್ನಿತರೆ ಕಡೆಗಳಿಂದ ಬರುವ ರೈತರು ಅವುಗಳನ್ನು ಖರೀದಿಸುವುದುಂಟು. ಹೊರ ಊರುಗಳಿಂದ ಬರುವ ರೈತರು ಉಳಿಯಲು ಬೇಕಾದ ಸೌಲಭ್ಯಗಳಿಲ್ಲದಿರುವುದು, ಉತ್ತಮವಾದ ಹೊಟೇಲ್‌ಗಳು ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಾತ್ರೆಯಿಂದಾಗಿ ಪ್ರತಿ ವರ್ಷ ಲಕ್ಷಾಂತರ ರು. ಆದಾಯ ಗಳಿಸುವ ಇಲ್ಲಿನ ಗ್ರಾಪಂ, ಜಾತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸದಿರುವುದು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.