ಹಾಸನ

ಬೆಂಕಿ ಹಚ್ಚಿ ಹೇಳಿಕೆಗೆ ಕಾಂಗ್ರೆಸ್ ಖಂಡನೆ

Published On :

ಕ.ಪ್ರ.ವಾರ್ತೆ ಹಾಸನ ನ.25
ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚುವಂತೆ ಹೇಳುವ ಮೂಲಕ ಜೆಡಿಎಸ್ ಮುಖಂಡರು ಮರಳು ಮತ್ತು ಜಲ್ಲಿ ದಂಧೆಕೋರರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಂ. ಜಗನ್ನಾಥ್ ಮಾತನಾಡಿ, ಇತ್ತೀಚೆಗೆ ಲೋಕಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಸಭೆ ನಡೆಸಿ ಮರಳು ಮತ್ತು ಜಲ್ಲಿ ಸಾಗಾಣಿಕೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಭೆಯನ್ನು ಮಾಡಿದ್ದಾರೆ. ಸಭೆಯಲ್ಲಿ ರೇವಣ್ಣನವರು ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚುವಂತೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದರು.
ಕೆಲವು ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಲ್ಲಿ ಕಟ್ಟಡ ಕಟ್ಟಲು ಬೇಕಾಗುವ ಈ ಅವಶ್ಯಕ ವಸ್ತುಗಳು ದುಬಾರಿಯಾಗಿ ಸಾಮಾನ್ಯರು ತೊಂದರೆ ಪಡುವಂತಾಗಿದೆ. ಜನರಿಗೆ ಇದರಿಂದ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಹೊಸ ಮರಳು ನೀತಿಯನ್ನು ಸರ್ಕಾರ ನಿರ್ಧಾರ ತೆಗೆದುಕೊಂಡ ನಂತರ ಈ ಪಟ್ಟಭದ್ರ ಹಿತಾಶಕ್ತಿಗಳ ಪರವಾಗಿ ಜೆಡಿಎಸ್ ಮುಖಂಡರು ನಿಂತಿದ್ದಾರೆ. ಮರಳು ಮತ್ತು ಜಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸಭೆಯನ್ನು ನಡೆಸುವುದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅಕ್ರಮವಾಗಿ ಮರಳು ಸಾಗಿಸುವವರ ಪರ ಇವರು ವಕಾಲತು ವಹಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಅಕ್ರಮವಾಗಿ ಮರಳು ದಂಧೆ ನಡೆಸುವವರ ಪರ ಮಾಜಿ ಪ್ರಧಾನಿ ದೇವೇಗೌಡ ವಕಾಲತು ವಹಿಸಿರುವುದು ಸರಿಯಲ್ಲ. ಕಾಡಾನೆ ದಾಳಿಗೆ ರೈತ ಸಾವು ಹಾಗೂ ಬೆಳೆ ಹಾನಿಯಾದಾಗ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಉಂಟಾದ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲಲಿಲ್ಲ. ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಭಾಗವಹಿಸಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಬೆಲೆ ಕುಸಿತ, ಮಳೆಹಾನಿ ಮತ್ತಿತ್ತರ ಸಮಸ್ಯೆಗಳಲ್ಲಿ ತೊಳಲಾಡುತ್ತಿರುವ ಕಾಫಿ ಬೆಳೆಗಾರರಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ದೇವೇಗೌಡ ಅವರು ಗೈರು ಹಾಜರಾಗಿದ್ದರು. ಆದರೆ ಈಗ ಮರಳು ಮತ್ತು ಜಲ್ಲಿಯವರ ಪರ ನಿಂತಿರುವುದು ಸರಿಯಲ್ಲ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಮಾತನಾಡಿ, ಜಿಪಿಎಸ್ ಅವಳಡಿಸಿದಂತಹ ಲಾರಿಗಳು ಅದನ್ನು ತೆಗೆದಿಟ್ಟು ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರ ಪರವಾಗಿ ದೇವೇಗೌಡ ಹಾಗೂ ಅವರ ಪುತ್ರ ನಿಂತು, ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚುವಂತೆ ಹೇಳುವ ಮೂಲಕ ಪ್ರಚೋದನೆ ನೀಡಿದ್ದಾರೆ. ರೇವಣ್ಣನವರ ಬಾಯಿಂದ ಈ ಮಾತುಗಳು ಬಂದಾಗಲೂ ಸಹ ದೇವೇಗೌಡ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ ಹಾಗೂ ಜಿಲ್ಲಾಧಿಕಾರಿ ಸಹ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿ ಈ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಸನ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಅವರು ಒಂದು ದಿನ ಕೂಡ ಅಧಿಕಾರಿಗಳ ಸಭೆಯನ್ನು ನಡೆಸಲಿಲ್ಲ. ಕ್ಷೇತ್ರದ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. ಹೇಮಾವತಿ ಡ್ಯಾಂನಿಂದ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವಂತಹ 400 ಕೋಟಿ ಯೋಜನೆ ಆಗಿದೆ. ಆದರೆ ಅದು ಕಾರ್ಯಗತಗೊಳ್ಳುವಂತೆ ಶಾಸಕರು ಕೆಲಸವನ್ನು ಮಾಡಬೇಕು. ಅಧಿವೇಶನಗಳಲ್ಲಿ ಈ ರೀತಿಯ ವಿಚಾರಗಳನ್ನು ಚರ್ಚೆಗೆ ಒಳಪಡಿಸಿದರೆ ಕೆಲಸಗಳು ವೇಗವಾಗಿ ನಡೆಯುತ್ತವೆ. ಆದರೆ ಆ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.