ಕಾನೂನು ಭಯವಿಲ್ಲ, ವಾಹನಗಳ ಅಡ್ಡಾದಿಡ್ಡಿ ಸಂಚಾರ
ಕ.ಪ್ರ.ವಾರ್ತೆ ಹೊಳೆನರಸೀಪುರ ಅ.14
ಪಟ್ಟಣದಾದ್ಯಂತ ಪೊಲೀಸರ ಹಾಗೂ ಕಾನೂನಿನ ಯಾವುದೇ ಭಯವೂ ಇಲ್ಲದ ಕಾರಣದಿಂದಾಗಿ ವಾಹನಗಳ ಅಡ್ಡಾದಿಡ್ಡಿ ಸಂಚಾರದ ಫಲವಾಗಿ ನಾಗರಿಕರ ಸುಗಮ ಓಡಾಟಕ್ಕೆ ಧಕ್ಕೆಯಾಗಿದ್ದು, ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಸುರಕ್ಷತೆಯಿಂದ ಓಡಾಡುವುದೇ ದುಸ್ತರವಾಗತೊಡಗಿದೆ.
ಪಟ್ಟಣದಾದ್ಯಂತ ಎಲ್ಲಿ ನೋಡಿದರೂ ಬೈಕ್ಗಳಲ್ಲಿ ಕನಿಷ್ಠ ಮೂರು ಜನ, ಆಟೋಗಳಲ್ಲಿ ಕುರಿಗಳನ್ನು ತುಂಬಿದಂತೆ ಜನರನ್ನು ತುಂಬಿಕೊಂಡು ಹೋಗುವ ದೃಶ್ಯ, ಟ್ಯಾಕ್ಸಿಗಳಲ್ಲಿಯಂತೂ ಕೇಳುವುದೇ ಬೇಡ. ಇನ್ನು ಸಾರಿಗೆ ಬಸ್ಗಳಂತೂ ರಸ್ತೆಯನ್ನೆಲ್ಲಾ ಆಕ್ರಮಿಸಿಕೊಂಡು ಎಲ್ಲೆಂದರಲ್ಲಿ ಬಸ್ಗಳನ್ನು ನಿಲ್ಲಿಸಿ ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸುವುದು ಇಲ್ಲಿನ ನಾಗರಿಕರಿಗೆ ನಿತ್ಯ ತಪ್ಪದ ಅನುಭವವಾಗಿದೆ.
ಪ್ರತಿದಿನವೂ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೈಕ್ ಹಾಗೂ ಇತರೇ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಲಿದ್ದರೂ ಈ ಕುರಿತು ಪೊಲೀಸರ ಕ್ರಮ ಮಾತ್ರ ಕೇಳುವಂತಿಲ್ಲ, ಹೇಳಿಕೊಳ್ಳುವಂತೆಯೂ ಇಲ್ಲ ಎಂದು ನಾಗರಿಕರು ದೂರುತ್ತಾರೆ.
ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸುಗಮವಾಗಿ ಓಡಾಡಬಹುದು. ಆದರೆ ಹೊಳೆನರಸೀಪುರದಲ್ಲಿ ಸುಗಮವಾಗಿ ಓಡಾಡುವುದು ಹಾಗೂ ವಾಹನಗಳನ್ನು ಚಲಾಯಿಸುವುದು ಸಾಧ್ಯವಿಲ್ಲದ ಮಾತು ಎನ್ನುವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿದ್ದರೂ ಪೊಲೀಸರು ಮಾತ್ರ ಇದಾವುದೂ ತಮಗೆ ಸಂಬಂಧಿಸಿಲ್ಲ ಎನ್ನುವಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಪಟ್ಟಣದಲ್ಲಿನ ಈ ಅವ್ಯವಸ್ಥೆ ಕುರಿತಂತೆ ಪೊಲೀಸರಲ್ಲಿ ಪ್ರಶ್ನಿಸಿದಲ್ಲಿ, ಪುರಸಭೆಯವರೆ ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ಗಾಗಿ ನಿಗಧಿತ ಸ್ಥಳವನ್ನು ಗುರುತಿಸಿಲ್ಲದ ಕಾರಣದಿಂದಾಗಿ ತಾವು ಎಷ್ಟೇ ಪ್ರಯತ್ನಿಸಿದರೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.
ಇದು ನಿಜ ಕೂಡ... ಹೊಳೆನರಸೀಪುರ ಪಟ್ಟಣವು ಮಳಿಗೆಗಳ ಪುರ ಎನಿಸುವಷ್ಟರ ಮಟ್ಟಿಗೆ ಇಲ್ಲಿ ಪುರಸಭೆಯ ವತಿಯಿಂದ ಖಾಲಿ ಜಾಗ ಎಲ್ಲಿಯೇ ಇದ್ದರೂ ಅಲ್ಲೆಲ್ಲಾ ಮಳಿಗೆಗಳನ್ನು ನಿರ್ಮಿಸಿ ಆದಷ್ಟೂ ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡಿ ಕೈತೊಳೆದುಕೊಳ್ಳುವ ಪುರಸಭೆಯು ಸದರಿ ಮಳಿಗೆಗಳ ಬಳಿಯಲ್ಲಿ ವಾಹನಗಳ ಪಾರ್ಕಿಂಗ್ಗೆ ಸ್ಥಳಾವಕಾಶವನ್ನು ಮಾತ್ರ ಎಲ್ಲಿಯೂ ಮಾಡಿಲ್ಲ. ನಾಗರಿಕರು ಮನೆಯನ್ನು ನಿರ್ಮಿಸಲು ಅಥವಾ ಮಳಿಗೆಗಳನ್ನು ನಿರ್ಮಿಸಲು ಪುರಸಭೆಯಿಂದ ಅನುಮತಿ ಪತ್ರವನ್ನು ಕೋರಿದ ಸಂದರ್ಭದಲ್ಲಿ ಅವರಿಗೆ ಮಾತ್ರ ಇಲ್ಲದ ಕಾನೂನುಗಳನ್ನು ಮುಂದಿಟ್ಟು, ಮನೆಗಾದರೆ ಅಕ್ಕ ಪಕ್ಕದಲ್ಲಿ ಇಂತಿಷ್ಟು ಜಾಗವನ್ನು ಖಾಲಿ ಬಿಡಬೇಕು. ವಾಣಿಜ್ಯ ಮಳಿಗೆಗಾದರೆ ಇಷ್ಟು ಜಾಗ ಕಡ್ಡಾಯವಾಗಿ ಖಾಲಿ ಬಿಡುವಂತೆ ಇನ್ನಿಲ್ಲದಂತೆ ಸತಾಯಿಸುವ ಪುರಸಭೆ, ತಾನು ಮಾತ್ರ ಮಳಿಗೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಇದ್ಯಾವುದೇ ಕಾನೂನುಗಳನ್ನೂ ಪಾಲಿಸದೇ ನಿಯಮಗಳನ್ನು ಗಾಳಿಗೆ ತೂರಿ ಮಳಿಗೆಗಳನ್ನು ನಿರ್ಮಿಸುತ್ತಿದೆ. ಆದರೂ ಕಾನೂನು ಸುವ್ಯವಸ್ಥೆಯನ್ನು ಇನ್ನೊಬ್ಬರ ಮೇಲೆ ಜಾರಿಸಿ ನುಣುಚಿಕೊಳ್ಳುವುದು ಪೊಲೀಸ್ ಇಲಾಖೆಗೆ ಇಂದು ನಿನ್ನೆಯ ವರಸೆಯಲ್ಲಿ ಎಂಬಂತೆ, ಈಗೀಗ ಪೊಲೀಸರ ಕೊರತೆಯ ಕಾರಣ ಮುಂದಿಟ್ಟುಕೊಂಡು ಗೃಹರಕ್ಷಕದಳದವರನ್ನೂ ಎರವಲು ಸೇವೆಯಾಗಿ ಪಡೆದಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ ಎಂಬುದು ಸಾರ್ವಜನಿಕರ ಅನಿಸಿಕೆ. ಪೊಲೀಸರ ಮುಂದೆಯೇ ಬೈಕ್ಗಳಲ್ಲಿ ತ್ರಿಬ್ಬಲ್ ರೈಡಿಂಗ್ನಲ್ಲಿ ಹೋಗುತ್ತಿದ್ದರೂ ಇಲ್ಲಿನ ಪೊಲೀಸರು ಏನನ್ನೂ ನೋಡದವರಂತೆ ಸುಮ್ಮನಿರುವುದು ಸಾಮಾನ್ಯದ ಸಂಗತಿಯಾಗಿದೆ.
ಪಟ್ಟಣದ ಹಾಸನದ ರಸ್ತೆ, ಹಳ್ಳಿಮೈಸೂರು ಕಡೆಗಿನ ವಾಹನಗಳ ಸಾಲು, ಗಾಂಧಿ ವೃತ್ತದಿಂದ ಅರಕಲಗೂಡು ರಸ್ತೆಗಳಲ್ಲಿಯಂತೂ ವಾಹನಗಳನ್ನು ರಸ್ತೆಯ ಮೇಲೆಯೇ ಬೇಕಾಬಿಟ್ಟಿಯಾಗಿ ನಿಲ್ಲಿಸಿಕೊಂಡಿದ್ದರೂ ಪೊಲೀಸರು ನೋಡುವುದಿಲ್ಲ, ಖಾಸಗಿ ವಾಹನಗವರೂ ಕೂಡ ಪೊಲೀಸರನ್ನು ಕಂಡರೆ ಕ್ಯಾರೇ ಎನ್ನುವುದಿಲ್ಲ ಹೀಗಾಗಿದೆ ಸ್ಥಿತಿ.
ಉತ್ತಮ ಆಡಳಿತ ನೀಡುವ ಭರವಸೆ ನೀಡಿರುವ ಜಿಲ್ಲಾ ಎಸ್ಪಿ ಜಿಲ್ಲೆಯ ನಾನಾ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ನಡೆಸಿ ಕಾನೂನಿನ ಅರಿವನ್ನು ನಾಗರಿಕರಿಗೆ ಹಾಗೂ ಅದಕ್ಕಿಂತಲೂ ಮೊದಲಿಗೆ ಪೊಲೀಸರಿಗೆ ಚುರುಕು ಮುಟ್ಟಿಸಿ ಆಡಳಿತದಲ್ಲಿ ಬಿಗಿ ತರುವ ಯತ್ನ ಮಾಡುತ್ತಿದ್ದರೂ ಇದುವರೆವಿಗೂ ತಾಲೂಕಿಗೆ ಮಾತ್ರ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಕೇಳದೇ ಇರುವುದರ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಿಚುಂಚನಗಿರಿ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ
ಚನ್ನರಾಯಪಟ್ಟಣ: ಪಟ್ಟಣದ ಆದಿಚುಂಚನಗಿರಿ ಕಾಲೇಜಿನಲ್ಲಿ ಜಯಪ್ರಕಾಶನಾರಾಯಣ ಗ್ರಾಮೀಣ ಸಂಸ್ಥೆ ಹಾಗೂ ಆರಕ್ಷಕ ಇಲಾಖೆ ಸಹಯೋಗದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ಟಿ. ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿ, ಸಹಚಾರವೇ ಧರ್ಮ, ಜ್ಞಾನಕ್ಕೆ ಸರಿಸಮಾನವಾದ್ದು ಯಾವುದೂ ಇಲ್ಲ. ಸ್ವಪ್ರಯತ್ನದಿಂದ ಸನ್ಮಾರ್ಗದಲ್ಲಿ ನಡೆದು ಮುಂದೆ ಬರಬೇಕು. ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಪ್ಪು ಚುಕ್ಕಿ ಬೇಡ, ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ ಎಂದು ಹೇಳಿದರು. ಡಿವೈಎಸ್ಪಿ ವಿನಾಯಕ ಪಾಟೀಲ್ ಡೋಲು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಹಸಿಲ್ದಾರ್ ಡಾ.ನಾಗರಾಜ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಹಾಳಾಗಲು ಶೇ.75ರಷ್ಟು ವಿದ್ಯಾವಂತರೇ ಕ್ರಿಮಿನಲ್ನಲ್ಲಿ ಭಾಗಿಯಾಗಿದ್ದಾರೆ. ಶಿಕ್ಷಣ ಮನುಷ್ಯನನ್ನು ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ದಾರಿ ತಪ್ಪಿದ ಯುವಕರನ್ನು ಸರಿದಾರಿಗೆ ತರಲು ಮಹಾತ್ಮರ ಚಿಂತನೆ ಅಗತ್ಯವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

