ಹಾಸನ

ಜಿಲ್ಲೆಯಲ್ಲಿ ಸಂಭ್ರಮದ ವಿಜಯದಶಮಿ

Published On :

ಕನ್ನಡಪ್ರಭ ವಾರ್ತೆ ಹಾಸನ ಅ. 24
ಶರನ್ನವರಾತ್ರಿಯ 9ನೇ ದಿನವಾದ ವಿಜಯ ದಶಮಿಯನ್ನು ಜಿಲ್ಲಾದ್ಯಂತ ಬಹಳ ಸಂಭ್ರಮ, ಸಡಗರದಿಂದ ಸೋಮವಾರ ಬನ್ನಿ ಮರ ಕಡಿಯುವ ಮೂಲಕ ಆಚರಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಿದ್ದೇಶ್ವರಸ್ವಾಮಿ, ವಿರೂಪಾಕ್ಷಸ್ವಾಮಿ, ಚನ್ನಕೇಶಸ್ವಾಮಿ, ನೀರುವಾಗಿಲು ಆಂಜನೇಯ, ಮೈಲಾರಲಿಂಗೇಶ್ವರ ಸ್ವಾಮಿ ಮೂರ್ತಿಗಳ ಮೆರವಣಿಗೆ ನಡೆಸಿ, ಸಾಲಗಾಮೆ ರಸ್ತೆಯಲ್ಲಿರುವ ಬನ್ನಿ ಮಂಟಪಕ್ಕೆ ದೇವರ ಮೂರ್ತಿಗಳನ್ನು ವಿಜೃಂಭಣಿಯಂದ ಕರೆ ತರಲಾಯಿತು.
ನಾನಾ ದೇವರ ಮೂರ್ತಿಗಳನ್ನು ವಿಶೇಷವಾಗಿ ಅಲಂಕಾರಗೊಳಿಸಿ, ಮೂರ್ತಿಯನ್ನು ಹೊತ್ತು ತಂದು ಬನ್ನಿ ಮಂಟಪದ ಸುತ್ತ ಪ್ರದಕ್ಷಿಣೆ ಹಾಕಿ, ನಂತರ ಸಿದ್ದೇಶ್ವರ ಸ್ವಾಮಿ, ವಿರೂಪಾಕ್ಷಸ್ವಾಮಿ, ಚನ್ನಕೇಶಸ್ವಾಮಿ, ನೀರುವಾಗಿಲು ಅಂಜನೇಯ ಮತ್ತು ಮೈಲಾರಲಿಂಗೇಶ್ವರ ಸ್ವಾಮಿಯ ಮೂರ್ತಿಗಳನ್ನು ಬನ್ನಿಮಂಟಪದಲ್ಲಿ ಪ್ರತಿಷ್ಠಾಪಿಸಿ, ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಬನ್ನಿ ಮುಡಿಯಲಾಯಿತು.
ಹಲವು ವರ್ಷಗಳಿಂದ ವಂಶ ಪಾರಂಪರ್ಯವಾಗಿ ಬನ್ನಿ ಕಡಿಯುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ನರಸಿಂಹರಾಜು ಅರಸು ಅವರು ಈ ವರ್ಷವೂ ಅವರೇ ಬನ್ನಿ ಕಡಿದರು. ಇವರು ಕಳೆದ 23 ವರ್ಷಗಳಿಂದ ಬನ್ನಿಯನ್ನು ಕಡಿಯುವ ಮೂಲಕ ಸಂಪ್ರದಾಯವನ್ನು ಯಥಾರೀತಿಯಲ್ಲಿ ಮುಂದುವರೆಸಿದ್ದಾರೆ.
ಆಲೂರಿನಲ್ಲಿ ಆಚರಣೆ: ಭಕ್ತಿ ಶ್ರದ್ಧೆ ಮತ್ತು ಸಂಭ್ರಮ ಸಡಗರದಿಂದ ಆಲೂರು ಪಟ್ಟಣದಲ್ಲಿ ದಸರಾ ಉತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಬನ್ನಿ ಮಂಟಪದಲ್ಲಿ ಬನ್ನಿ ಮುಡಿದು ಪರಸ್ಪರ ಗೌರವ ಸಲ್ಲಿಸುವ ಮೂಲಕ ವಿಜಯದಶಮಿ ಹಬ್ಬವನ್ನು ಆಚರಿಸಲಾಯಿತು. ಪಾರಂಪರಗತವಾಗಿ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆದವು. ಕಳೆದ 9 ದಿನಗಳಿಂದ ನಿರಂತರವಾಗಿ ಪೂಜೆ ಪುರಸ್ಕಾರಗಳು ನಡೆದು, ಹಬ್ಬದ ಕೊನೆಯ ದಿನವಾದ ಸೋಮವಾರ ತುಸು ವಿಶ್ರಾಂತಿ ನೀಡಿದ ನಂತರ, ಊಟದ ನಂತರ ಮತ್ತೆ ಚಾಲನೆ ಪಡೆದು ವಿಜಯದಶಮಿಗೆ ಮೆರಗು ದೊರೆಯಿತು.
ಪಟ್ಟಣದ ನಾನಾ ದೇವಾಲಯಗಳಲ್ಲಿ ಬೆಳಗ್ಗೆ ಭಕ್ತಿಪೂರ್ವ ಪೂಜೆಗಳು ನಡೆದು, ದಸರಾವನ್ನು ಆಚರಿಸಿದರು. ಪಟ್ಟಣದ ಹಳೇ ಆಲೂರು ಬಡಾವಣೆಯ ರಂಗನಾಥಸ್ವಾಮಿ, ಮರಸು ಬಡಾವಣೆಯ ತಿರುಮಲರಂಗನಾಥಸ್ವಾಮಿ, ಅಂಬೇಡ್ಕರ್ ಬಡಾವಣೆಯ ಸುಂಕದಮ್ಮ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮಾರ್ನವಮಿ ಮಂಟಪದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ವಿಶೇಷಪೂಜೆ, ತೀರ್ಥ ಪ್ರಸಾದ ವಿನಿಯೋಗ ನಂತರ ಭಕ್ತರು ಪೊಜೆ ಸಲ್ಲಿಸಿದರು.
ಹಳೇ ಆಲೂರು ಗ್ರಾಮದ ಅಲಂಕೃತಗೊಂಡಿದ್ದ ರಂಗನಾಥಸ್ವಾಮಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಬನ್ನಿ ಮಂಟಪಕ್ಕೆ ತಂದು ಭಕ್ತಾಧಿಕಗಳ ಸಮ್ಮುಖದಲ್ಲಿ ಮಂಟಪದ ಸುತ್ತ ಪ್ರದಕ್ಷಿಣೆ ನಡೆಸಿ ಬಾಳೆಗಿಡ ಮತ್ತು ಬನ್ನಿಗಿಡಗಳನ್ನು ಉತ್ಸವ ಮೂರ್ತಿಯ ಮುಂದೆ ನಿಲ್ಲಿಸಿ ಬಿಲ್ಲು ಬಾಣದ ಮೂಲಕ ನಾಲ್ಕು ದಿಕ್ಕುಗಳಿಗೂ ಬಾಣ ಬಿಟ್ಟು, ನಂತರ ಬಂದೂಕು ಹಾಗೂ ಬಾಣದಿಂದ ಬನ್ನೀ ಮುಡಿಯಲಾಯಿತು. ನಂತರ ಹಳೇ ಆಲೂರು, ಹಳೇ ಆಲೂರು ಕಾಲೋನಿ, ಕೊನೆಪೇಟೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿವಿಡೀ ಮೆರವಣಿಗೆ ನಡೆಸಲಾಯಿತು.
9 ದಿನಗಳ ಪಟ್ಟಾಭಿಷೇಕ: ಮರಸು ಗ್ರಾಮ ಬಡಾವಣೆಯಲ್ಲಿಯೂ ಸಹ 9 ದಿನಗಳ ಕಾಲ ಪಟ್ಟಾಭಿಷೇಕ ನಡೆಸಿದ್ದ ತಿರುಮಲರಂಗನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಬನ್ನೀಮಂಟಕ್ಕೆ ತಂದು, ಬನ್ನಿ ಮುರಿದ ನಂತರ ಮೂಲ ದೇವಸ್ಥಾನಕ್ಕೆ ತಂದು ಬೆಳ್ಳಿ ಅಲಂಕಾರ ನಡೆಸಿ ಮರಸು ಹಾಗೂ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಪಟೇಲ್ ವಂಶಸ್ಥರು ಬಾಣದ ಮೂಲಕ, ವಿಶ್ವಕರ್ಮ ಜನಾಂಗದವರು ಬಂದೂಕಿನ ಮೂಲಕ ಬನ್ನಿ ಮುಡಿದರು.
ಇದೇ ಗ್ರಾಮದ ವಿಜಯದುರ್ಗ ಕ್ಷೇತ್ರದ ಶ್ರೀ ಅರಸಮ್ಮ ದೇವಸ್ಥಾನದಲ್ಲಿ ಎಲ್ಲಾ ದೇವರಿಗೂ ಬೆಳಗ್ಗೆ ಅಭಿಷೇಕ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿಸಲಾಗಿತು. ಕಳೆದ ಅ.5ರಿಂದ ಅರಸಮ್ಮ ದೇವಿಗೆ ಹಸಿರು ಸೀರೆ ಅಲಂಕಾರ, ಭಾನುವಾರ ಅರಿಶಿಲ ನೀರೆ ಅಲಂಕಾರ, ಸೋಮವಾರ ಬಣ್ಣದ ಅಲಂಕಾರ, ಮಂಗಳವಾರ ಕುಂಕುಮದ ಅಲಂಕಾರ, ಬುಧವಾರ ಬಾದಾಮಿ ಅಲಂಕಾರ, ಗುರುವಾರ ಮುತ್ತಿನ ಅಲಂಕಾರ, ಶುಕ್ರವಾರ ಹೂವಿನ ಅಲಂಕಾರ, ಶನಿವಾರ ಚರಿ ಮತ್ತು ದ್ರಾಕ್ಷಿ ಅಲಂಕಾರ, ಭಾನುವಾರ ತರಕಾರಿ ಅಲಂಕಾರ ಮತ್ತು ಸೋಮವಾರ ಕವಚಾಲಂಕಾರಗಳನ್ನು ಮಾಡಲಾಗಿದ್ದು, ಸಂಜೆ 6ಕ್ಕೆ ಭರತನಾಟ್ಯ ಕಲಾವಿದೆ ಸ್ವಾಮಿ ಪಿ.ಭಾರದ್ವಾಜ್ ಹಾಗೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಾವಿರಾರು ಭಕ್ತಾಧಿಗಳು ದೇವಿಯ ದರ್ಶನ ಪಡೆದು, ಪುನೀತರಾದರು.

ಕನ್ನಿಕಾ ಪರಮೇಶ್ವರಿಗೆ ನಾನಾ ಅಲಂಕಾರ
ಅರಸೀಕೆರೆ: ಪಟ್ಟಣದ ಪೇಟೆಬೀದಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಕನ್ನಿಕಾ ಪರಮೇಶ್ವರಿ ಮಾತೆಗೆ ಅರಿಶಿಣ ಕುಂಕುಮ ಅಲಂಕಾರ, ಗಾಯಿತ್ರಿ ದೇವಿ ಅಲಂಕಾರ, ಸಿಂಧೂರ ಬಳೆ ಅಲಂಕಾರ, ಶ್ರೀಗಂಧ ಅಲಂಕಾರ, ಕೊಬ್ಬರಿ ಅಲಂಕಾರ, ಮುತ್ತಿನ ಮಣಿಗಳ ಅಲಂಕಾರ, ಚಾಮುಂಡೇಶ್ವರಿ ಅಲಂಕಾರ ಮತ್ತು ಇಂದ್ರಾಣಿ ಅಲಂಕಾರಗಳನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಪ್ರತಿ ವರ್ಷದಂತೆ ನವರಾತ್ರಿ ಹಬ್ಬದ ಒಂಬತ್ತು ದಿನಗಳ ಕಾಲ ಮಾಡುವ ಧಾರ್ಮಿಕ ವಿಶೇಷ ಪೂಜಾ ಕೈಕಂರ್ಯಗಳನ್ನು ಶ್ರದ್ಧಾ ಭಕ್ತಿಗಳಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ. ಸಭಾ ಮಂಟಪದಲ್ಲಿ ಲಲಿತಾ ಸಂಘದ ಪದಾಧಿಕಾರಿಗಳು, ಮಹಿಳೆಯರು ಮತ್ತು ಪುರುಷರು ದೇವಿಯನ್ನು ಬಿಂಬಿಸುವ ಕಥೆ, ಸಾಂಸ್ಕತಿಕ ಕಾರ್ಯಕ್ರಮಗಳು ಸೇರಿದಂತೆ ಗಾನ ಸುಧೆಯನ್ನು ಪ್ರತಿ ನಿತ್ಯ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಆರ್ಯ ವೈಶ್ಯ ಸಂಘದ ಗೌರವಾಧ್ಯಕ್ಷ ಕೆ.ಎನ್.ದುರ್ಗಪ್ಪಶೆಟ್ಟಿ, ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಕೆ.ಎಸ್.ಪ್ರಸನ್ನ ಕುಮಾರ್, ದೇವಸ್ಥಾನದ ಚೇರ್ಮನ್ ಆಶೋಕ್ಕುಮಾರ್, ಪುರಸಭಾ ಸದಸ್ಯ ಪಾರ್ಥಸಾರಥಿ ಮತ್ತು ಅರ್ಚಕ ನಾಗಾರ್ಜುನ ಆಚಾರ್ಯ ಇತರರರು ಪಾಲ್ಗೊಂಡಿದ್ದರು.

ಧಾರ್ಮಿಕ ಆಚರಣೆಯಿಂದ ನಾಡು ಸಮೃದ್ಧ: ಶಾಸಕ
ಅರಸೀಕೆರೆ: ವಿಜಯದಶಮಿ ಅಂಗವಾಗಿ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಸೋಮವಾರ ಗ್ರಾಮದೇವತೆ ಕರಿಯಮ್ಮ, ಹಾಗೂ ಮಲ್ಲಿಗೆಮ್ಮನವರ ಸಮ್ಮುಖದಲ್ಲಿ ಬನ್ನಿಮರಕ್ಕೆ ಪೂಜೆ ನೆರವೇರಿಸಿ ಬಾಳೆಕಂದನ್ನು ಕಡಿಯುವ ಮೂಲಕ ಅಂಬನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ ಶಿವಲಿಂಗೇಗೌಡ, ಸನಾತನ ಕಾಲದಿಂದ ನಡೆಸಿಕೊಂಡು ಬಂದಿರುವ ಈ ಧಾರ್ಮಿಕ ಆಚರಣೆಗಳನ್ನು ನಡೆಸಿದಾಗ ಮಾತ್ರ ನಾಡು ಸಮೃದ್ಧವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಪ್ರತಿಯೊಂದು ಆಚರಣೆಗಳಲ್ಲೂ ವೈಜ್ಞಾನಿಕ ಕಾರಣಗಳಿದ್ದು ಅವರ ಮುಂದಾಲೋಚನೆಯ ಬಗ್ಗೆ ನಿಜಕ್ಕೂ ಅಚ್ಚರಿ ಎನಿಸುತ್ತದೆ. ಆದ್ದರಿಂದ ಇಂದಿನ ಎಲ್ಲಾ ಆಚರಣೆಗಳಲ್ಲಿ ಅನುಸರಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಮುಂದಿನ ವರ್ಷ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಅರಸೀಕೆರೆಯಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿಯಾಗಿದ್ದು ಇದನ್ನು ವೈಭವಪೂರ್ಣವಾಗಿ ನೆರವೇರಿಸಲು ಜಾತಿ ಮತ ಬೇಧಗಳಿಲ್ಲದೆ ಎಲ್ಲರೂ ಸಹಕಾರ  ನೀಡಬೇಕೆಂದು ಮನವಿ ಮಾಡಿದರು.
ಉದ್ಯಮಿ ಅರುಣಕುಮಾರ್, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಭಕ್ತ ಮಂಡಳಿ ಕಾರ್ಯದರ್ಶಿ ಶಾಂತವೀರಪ್ಪ, ನಾಗಭೂಷಣ, ರಾಜಣ್ಣ, ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.