ಹಾಸನ

ಕಾನೂನು ಪಾಲನೆಯಿಂದ ನೆಮ್ಮದಿ

Published On :

ಕಾನೂನು ಕುರಿತು ಸಮಾಜದ ಪ್ರತಿಯೊಬ್ಬರಲ್ಲೂ ಅರಿವು ಉಂಟಾದಾಗ ಮಾತ್ರ ಅಪರಾಧಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಅರಕಲಗೂಡು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಕಂಬೇಗೌಡ ತಿಳಿಸಿದರು.
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ವಿಶೇಷ ಶಿಬಿರದಲ್ಲಿ    ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನಿನ ಬಗ್ಗೆ ತಿಳಿದುಕೊಳ್ಳುವುದಷ್ಟೆ ಅಲ್ಲ, ಅದನ್ನು ಕಡ್ಡಾಯವಾಗಿ ಪಾಲನೆ ಮಾಡಿದಾಗ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಕಾನೂನಿನ ಅರಿವು ತುಂಬಾ ಅವಶ್ಯಕ. ಮಾನವನಿಗೆ ಬೆಳಕು, ವಸತಿ, ಆಹಾರಗಳ ಅವಶ್ಯಕತೆಯಂತೆ ಕಾನೂನಿನ ಬಗ್ಗೆ ಅರಿವು ಹೊಂದಿ ಸಮಾಜದಲ್ಲಿ ನೆಮ್ಮದಿಯಿಂದ ಬಾಳ್ವೆ ಮಾಡಲು ಕಾನೂನಿನ ಅಗತ್ಯವಿದೆ ಎಂದು ಹೇಳಿದರು.
ಕಾನೂನು ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ನಾವು  ಭೂಮಿ ತಾಯಿಯ ಮೇಲೆ ಜನ್ಮ ತಾಳಿದ ತಕ್ಷಣ ಕಾನೂನು ಬಂಧನಕ್ಕೆ ಒಳಗಾಗುತ್ತೇವೆ. ಅದ್ದರಿಂದ ಕಾನೂನಿನ ತಿಳಿವಳಿಕೆ ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯವಾಗಿದೆ ಎಂದು ತಿಳಿಸಿದರು. ಇಂದು ಗ್ರಾಮೀಣ ಪ್ರದೇಶದ ಜನ ಸರಿಯಾಗಿ ತಮ್ಮ ಹಕ್ಕುಗಳ ಕಾನೂನಿನ ಅರಿವಿಲ್ಲದೆ ಜನನ ಮತ್ತು ಮರಣ ಪ್ರಮಾಣ ಪತ್ರದಂತ ಸಾಮಾನ್ಯ ವಿಷಯಗಳಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧುನಿಕ ಸಮಾಜದಲ್ಲಿ ಮನುಷ್ಯ ಹುಟ್ಟಿನಿಂದ ಸಾವಿನವರೆವಿಗೂ ಕಾನೂನಿನ ಜತೆ ವ್ಯವಹರಿಸಬೇಕಿದೆ. ಪ್ರತಿ ವ್ಯಕ್ತಿಯೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ನುಡಿದರು.  
ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಉಪನ್ಯಾಸ ಏರ್ಪಡಿಸಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಶಿಬಿರಾತ್ರಿಗಳು ಹಾಗೂ ಗ್ರಾಮೀಣ ಜನರು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಮನಾಥಪುರ ಸ.ಪ.ಪೂ. ಕಾಲೇಜು  ಉಪನ್ಯಾಸಕ ಡೆಲ್ವಿಕುಮಾರ್ ಕಾನೂನಿನ ಬಗ್ಗೆ ತಿಳಿದು ಕೊಳ್ಳುವುದಷ್ಟೆ ಅಲ್ಲ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡಿದಾಗ ಸಮಾಜದಲ್ಲಿ ಶಾಂತಿ ನೆಮ್ಮದಿ ಸುವ್ಯವಸ್ಥೆ ನೆಲೆಸಲು ಸಾಧ್ಯ ಎಂದರು.  
ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ರಾಜೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಜನತೆಯಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲು ಉಪಯೋಗವಾಗುತ್ತದೆ ಎಂದರು.ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಮಹಿಳಾ ದೌರ್ಜನ್ಯದ ಕಾಯ್ದೆ 2005ರ ಬಗ್ಗೆ ತಿಳಿಸಿದ ಅವರು ಮಹಿಳೆಯರು ಗ್ರಾಮಗಳಲ್ಲಿ ಜನರಲ್ಲಿ ಬೆರೆತು ಜಾಗೃತಿ ಉಂಟು ಮಾಡುವುದರಿಂದ ಸಮಾಜದ ಬದಲಾವಣೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕನ್ನಡ ಉಪನ್ಯಾಸಕ ಎಂ.ಸಿ. ಜಯದೇವ್, ಭೌತಶಾಸ್ತ್ರ ಉಪನ್ಯಾಸಕ ಡೆಲ್ವಿಕುಮಾರ್, ರಾಜ್ಯಶಾಸ್ತ್ರ ಉಪನ್ಯಾಸಕ ಐ.ಡಿ. ಸ್ವಾಮಿ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀಕೃಷ್ಣ, ಗ್ರಾಮದ ಮುಖಂಡ ಕೃಷ್ಣಪ್ಪ, ಸ್ವಾಮೀಗೌಡ, ರವೀಶ್, ನಂದೀಶ್ ಗಂಗೂರು ಮಂಜಣ್ಣ ಮುಂತಾದವರು ಭಾಗವಹಿಸಿದ್ದರು.  ಉಪನ್ಯಾಸಕಿ ಕುಮಾರಿ ಲಕ್ಷ್ಮಿ ಸ್ವಾಗತಿಸಿದರು. ಪ್ರದೀಪ್ ನಿರೂಪಿಸಿದರು. ಪ್ರಸಾದ್ ವಂದಿಸಿದರು.

ಬಾಳೆ ಗಿಡಗಳು ಮಾರಾಟಕ್ಕೆ ಲಭ್ಯ
ಹಾಸನ:
ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಲಭ್ಯವಾಗುವಂತೆ ಉತ್ತಮ ಗುಣಮಟ್ಟದ ಅಂಗಾಂಶ ಕೃಷಿ ಬಾಳೆ ಗಿಡಗಳು ಲಭ್ಯವಿರುತ್ತವೆ. ಈ-9 ತಳಿಯ ಒಟ್ಟು 2,00,000 ಅಂಗಾಂಶ ಕೃಷಿ ಬಾಳೆ ಗಿಡಗಳು ಲಭ್ಯವಿದ್ದು, ಒಂದು ಗಿಡಕ್ಕೆ ರು. 9ರಂತೆ ಮಾರಾಟ ಮಾಡಲಾಗುತ್ತಿದೆ.  
ಆಸಕ್ತ ರೈತರು ಬಯೋಸೆಂಟರ್, ತೋಟಗಾರಿಕೆ ಇಲಾಖೆ, ಹುಳಿಮಾವು ಬೆಂಗಳೂರು ಇವರನ್ನು ಸಂಪರ್ಕಿಸಿ ಗಿಡಗಳನ್ನು ಖರೀದಿಸಬಹುದಾಗಿದೆ. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು(ಅಂಗಾಂಶ ಕೃಷಿ) ಹುಳಿಮಾವು, ಮೊಬೈಲ್ ಸಂಖ್ಯೆ 9480885811, ಕಚೇರಿ ದೂರವಾಣಿ ಸಂಖ್ಯೆ 080-26582784ಗೆ ಸಂಪರ್ಕಿಸುವಂತೆ ಹಾಸನ, ತೋಟಗಾರಿಕೆ ಉಪನಿರ್ದೇಶಕ ಶಕೀಲ್ ಅಹಮದ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.