ಹಾಸನ

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

Published On :

ಕನ್ನಡಪ್ರಭವಾರ್ತೆ ಆಲೂರು ಅ.15
ಪಟ್ಟಣದಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನವಾಗಿದ್ದು ಲಕ್ಷಾಂತರ ರು. ಮೌಲ್ಯದ ಹಣ ಆಭರಣಗಳನ್ನು ಕಳ್ಳರು ದೋಚಿದ್ದು, ಪಟ್ಟಣದ ಜನತೆ ಆತಂಕಗೊಂಡಿದ್ದಾರೆ.ಆಲೂರು ಮೆಡಿಕಲ್ಸ್ ಬಳಿ ಇರುವ ರಾಜೇಗೌಡ ಬಿಲ್ಡಿಂಗ್‌ನಲ್ಲಿ ಬಾಡಿಗೆಗೆ ಇರುವ ಗ್ರಾಮಲೆಕ್ಕಿಗ ಲೋಕೇಶ್ ಎಂಬವರ ಮನೆಯಲ್ಲಿ ಹಾಗೂ ರಾಜಪ್ಪ ಬಡಾವಣೆಯಲ್ಲಿರುವ ಶಿಕ್ಷಕ ರವಿ ಹಾಗು ಶಿಕ್ಷಕ ಶ್ರೀನಿವಾಸ್ ಮನೆಗಳಲ್ಲಿ ಕಳ್ಳತನವಾಗಿದೆ. ಇವರೆಲ್ಲರೂ ಹಬ್ಬಕ್ಕೆಂದು ಊರಿಗೆ ಹಾಗೂ ದಸರಾ ನೋಡಲು ಮೈಸೂರಿಗೆ ಹೋಗಿದ್ದು, ಕಳೆದ ಎರಡು ಮೂರು ದಿನಗಳಿಂದ ಬಾಗಿಲು ಹಾಕಿದ್ದಂತಹ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳರು ಕಳ್ಳತನ ನಡೆಸಿದ್ದಾರೆ. ಒಂದೇ ತಂಡದ ಶಂಕೆ: ಲೋಕೇಶ್ ಮನೆಯಲ್ಲಿ ರು. 45 ಸಾವಿರ ನಗದು,1 ಜತೆ ಚಿನ್ನದ ಓಲೆ ಹಾಗೂ ಬೆಳ್ಳಿಯ ಪೂಜಾ ಸಾಮಗ್ರಿಗಳು, ರವಿಯವರ ಮನೆಯಲ್ಲಿ 110 ಗ್ರಾಂನ 2 ಚಿನ್ನದ ಸರಗಳು,1 ಕಿಲೋ ಬೆಳ್ಳಿಯ ಪದಾರ್ಥಗಳು ಹಾಗೂ ರು. 5 ಸಾವಿರ ನಗದು, ಶ್ರೀನಿವಾಸ್ ಮನೆಯಲ್ಲಿ ಏನೂ ಸಿಗದೆ ಕಳ್ಳರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಈ 3 ಮನೆಗಳಲ್ಲಿ ನಡೆದಿರುವ ಕಳ್ಳತನಗಳಲ್ಲಿ ಒಂದೆ ರೀತಿಯಲ್ಲಿ ಬಾಗಿಲುಗಳನ್ನು ಮುರಿದಿದ್ದು, ಒಂದೇ ತಂಡ ಈ ಕಳ್ಳತನಗಳನ್ನು ನಡೆಸಿರಬಹುದೆಂದು ಶಂಕಿಸಲಾಗಿದೆ.
ಶ್ವಾನದಳ: ಬೆಳಗ್ಗೆ ವಿಷಯ ತಿಳಿದ ನೆರೆಹೊರೆಯವರು ಮನೆಯವರಿಗೆ ಹಾಗೂ  ಪೊಲೀಸರಿಗೆ ವಿಷಯ ಮುಟ್ಟಿಸಿದ್ದು   ಪೊಲೀಸರಿಗೆ ಕಳುವಾಗಿರುವುದಾಗಿ ದೂರು ನೀಡಿದ್ದು, ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್, ಪಿಎಸ್‌ಐ ತಿಮ್ಮಶೆಟ್ಟಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು ಶ್ವಾನವು ದಡದಹಳ್ಳಿ ರಸ್ತೆವರೆಗೆ ಹೋಗಿ ವಾಪಸಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. .ಚನ್ನಣ್ಣನವರ್ ಕಳೆದ ತಿಂಗಳು ಪಟ್ಟಣದ ಇದೇ ಬಡಾವಣೆಯಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ರಾತ್ರಿ ಪಟ್ಟಣದ ಕೊನೆ ಪೇಟೆ ಹಾಗೂ ಕೆಇಬಿ ಎರಡೂ ಕಡೆಗಳಲ್ಲಿ ಗಸ್ತು ಪಾಯಿಂಟ್ ನಿರ್ಮಿಸಿ, ಪೋಲಿಸರು ರಾತ್ರಿಯಿಡೀ ಪಟ್ಟಣದಲ್ಲಿ ಗಸ್ತು ನಡೆಸುವ ಭರವಸೆ ನೀಡಿದ್ದರು.
ಆದರೆ ಇದು ಭರವಸೆಯಾಗಿಯೇ ಉಳಿದ ಪರಿಣಾಮ ಈ ರೀತಿಯ ಕಳ್ಳತನಗಳು ಹೆಚ್ಚಾಗಲು ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.