ಪೊಲೀಸರಿಗೆ ಶೀಘ್ರವೇ 'ಕ್ಯಾಂಟೀನ್ ಭಾಗ್ಯ'
-ದಯಾಶಂಕರ ಮೈಲಿ
ಹಾಸನ: ಬಡವರಿಗೆ ಅನ್ನಭಾಗ್ಯ, ಮಕ್ಕಳಿಗೆ ಕ್ಷೀರಭಾಗ್ಯ ಒದಗಿಸಿರುವ ರಾಜ್ಯ ಸರ್ಕಾರ ಈಗ ರಾಜ್ಯದ ಪೊಲೀಸ್ ಕುಟುಂಬಗಳಿಗೆ ಕಡಿಮೆ ದರದಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸಲು ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಪೊಲೀಸ್ ಕ್ಯಾಂಟೀನ್ ಆರಂಭಿಸಲು ಸಜ್ಜಾಗಿದೆ. ಇದಕ್ಕೆ ಬೇಕಾದ ಅಗತ್ಯ ಮಾಹಿತಿ ಒದಗಿಸುವಂತೆ ಎಲ್ಲ ಎಸ್ಪಿಗಳಿಗೆ ಲಿಖಿತ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ಹಾಗೂ ಇತರೆ ದಾಖಲೆಗಳನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ. ಕ್ಯಾಂಟೀನ್ ದೊರೆಯುವ ತೆರಿಗೆ ರಹಿತ ದಿನಸಿಯನ್ನು ಕಾನ್ಸ್ಟೇಬಲ್ಗಳಿಂದ ಹಿಡಿದು ಪೊಲೀಸ್ ಮಹಾ ನಿರ್ದೇಶಕರು ಕೊಳ್ಳಬಹುದು.
ಸದ್ಯ ಕಾನ್ಸ್ಟೇಬಲ್ಗಳಿಂದ ಹಿಡಿದು ಸಬ್ ಇನ್ಸ್ಪೆಕ್ಟರ್ವರೆಗಿನ ಸಿಬ್ಬಂದಿಗೆ ಮಾತ್ರ ಪ್ರತಿ ತಿಂಗಳು ತಲಾ 15 ಕೆ.ಜಿ. ಅಕ್ಕಿ, 3 ಕೆ.ಜಿ. ಗೋದಿ ನೀಡಲಾಗುತ್ತಿದೆ. ಅದು ಕೂಡ ಸರಿಯಾಗಿ ದೊರೆಯುತ್ತಿಲ್ಲ. 2 ಕೆ.ಜಿ. ಸಕ್ಕರೆ ನೀಡುತ್ತಿರುವುದನ್ನು ನಿಲ್ಲಿಸಿ ಹಲವು ವರ್ಷಗಳೇ ಆಗಿವೆ. ಈ ಅವ್ಯವಸ್ಥೆ ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಯಾರ್ಯಾರಿಗೆ ಸೌಲಭ್ಯ: ರಾಜ್ಯ ಮೀಸಲು ಪಡೆ (ಕೆಎಸ್ಆರ್ಪಿ), ಜಿಲ್ಲಾ ಸಶಸ್ತ್ರ ಪಡೆ (ಡಿಎಆರ್), ಸಿವಿಲ್ ಪೊಲೀಸರು, ವೈರ್ಲೆಸ್ ಸಿಬ್ಬಂದಿ, ಬೆರಳಚ್ಚು ತಜ್ಞರ ಘಟಕಗಳ ಸಿಬ್ಬಂದಿ ಸೇರಿದಂತೆ ಎಲ್ಲ ಮಟ್ಟದ ಐಪಿಎಸ್ ಮತ್ತು ಕೆಎಸ್ಪಿಎಸ್ ಅಧಿಕಾರಿಗಳು ಕ್ಯಾಂಟೀನ್ನಲ್ಲಿ ದಿನಸಿ ಪದಾರ್ಥಗಳನ್ನು ಖರೀದಿಸಬಹುದು. ರಾಜ್ಯಾದ್ಯಂತ 32,658 ಸಿವಿಲ್ ಕಾನ್ಸ್ಟೇಬಲ್ಗಳು, ಜಿಲ್ಲಾ ಸಶಸ್ತ್ರ ಪಡೆಯ 12,488 ಕಾನ್ಸ್ಟೇಬಲ್ಗಳು, ಕೆಎಸ್ಆರ್ಪಿಯ 6139 ಕಾನ್ಸ್ಟೇಬಲ್ಗಳು, ಬೆರಳಚ್ಚು ಘಟಕದ 96 ಕಾನ್ಸ್ಟೇಬಲ್ಗಳು, 11, 916 ಮುಖ್ಯ ಕಾನ್ಸ್ಟೇಬಲ್ಗಳು, 3140 ಡಿಎಆರ್, 2121 ಕೆಎಸ್ಆರ್ಪಿ, 2072 ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳು, 116 ಕೆಎಸ್ಆರ್ಪಿ, ಡಿಎಆರ್ನ 234, ಬೆರಳಚ್ಚು ಘಟಕದ 19, ವೈರ್ಲೆಸ್ನ 92 ಎಸ್ಐಗಳು, 2913 ಸಿವಿಲ್ ಎಸ್ಐ, ಡಿಎಆರ್ನ 481, ಕೆಎಸ್ ಆರ್ಪಿಯ 92ಮತ್ತು ವೈರ್ಲೆಸ್ನ 302 ಎಎಸ್ಐಗಳು, 887 ಸಿವಿಲ್ ಇನ್ಸ್ಪೆಕ್ಟರ್ಗಳು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಈ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಧರ್ಮವೀರ ಆಯೋಗದ ಪ್ರಕಾರ 1 ಸಾವಿರ ನಾಗರಿಕರಿಗೆ 5 ಕಾನ್ಸ್ಟೇಬಲ್ಗಳು ಇರಬೇಕು. ಈಗ ಇರುವುದು ಇಬ್ಬರು ಕಾನ್ಸ್ಟೇಬಲ್ಗಳು ಮಾತ್ರ. ಹಾಗಾಗಿ ಕಾರ್ಯದೊತ್ತಡ ಹೆಚ್ಚಾಗುವುದಲ್ಲದೇ ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬರುವ ಸಂಬಳದಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಪೊಲೀಸ್ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಕಡಿಮೆ ಬೆಲೆಗೆ ಅಗತ್ಯ ವಸ್ತುಗಳು ಸಿಗುವುದರಿಂದ ಕುಟುಂಬ ನಿರ್ವಹಣೆ ವೆಚ್ಚ ತಗ್ಗುತ್ತದೆ. ಇದರಿಂದ ಪೊಲೀಸರಿಗೆ ಕೆಲಸ ಮಾಡಲು ಉತ್ಸಾಹ ಸಿಗುತ್ತದೆ. ಬಹಳಷ್ಟು ಪೊಲೀಸರಿಗೆ ವಸತಿ ಸೌಲಭ್ಯ ಇಲ್ಲ. ಅದನ್ನು ಕಲ್ಪಿಸುವತ್ತ ಗಮನಹರಿಸುವುದು ಸೂಕ್ತ.
-ರವಿ ದ್ಯಾಮಪ್ಪ ಚನ್ನಣ್ಣನವರ, ಹಾಸನ ಜಿಲ್ಲಾ ಎಸ್ಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

