ಹಾಸನ

ಅಭಿವೃದ್ಧಿ ವಿರೋಧಿ ರಾಜ್ಯ ಸರ್ಕಾರ: ಎಚ್‌ಡಿಕೆ ಟೀಕೆ

Published On :

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿರೋಧಿಯಾಗಿದ್ದ್ದು, ಇಲ್ಲಿಯವರೆಗೆ ಜನಪರವಾಗಿರುವಂಥಹ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿಲ್ಲ ಎಂದು ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.
ಅಧಿಕಾರಕ್ಕೆ ಬಂದು 5 ತಿಂಗಳಾಗುತ್ತಿದ್ದರೂ ಒಂದಾದರೂ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಲ್ಲ. ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರು ಇಟ್ಟ ಹೆಜ್ಜೆಯಲ್ಲೇ ಸರ್ಕಾರ ಸಾಗುತ್ತಿದೆ.  ಶಾಸಕರ ನಿಧಿಗೆ ಹಣ ಕೊಡದೆ ಇರುವುದು ಇರಲಿ, ರೋಗ ತಗುಲಿದ ಕಾರಣ ತೆಂಗು ಮತ್ತು ಅಡಿಕೆ ಬೆಳೆಯನ್ನು ಕಳೆದುಕೊಂಡ ರೈತರಿಗೆ ಇಲ್ಲಿಯವರೆಗೆ ನಯಪೈಸೆ ಪರಿಹಾರ ನೀಡಿಲ್ಲ. ತೆಂಗು ಬೆಳೆಗಾರರಿಗೆ ಪರಿಹಾರ ನೀಡಲು 581 ಕೋಟಿ ರು. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ ಅಷ್ಟೇ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಷಾದಿಸಿದರು.
ಹಾಗೆಯೇ ಅಡಿಕೆ ಬೆಳೆಗಾರರಿಗೂ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಊರ ತುಂಬಾ ಡಂಗುರ ಸಾರಿಕೊಂಡು  ಬರುತ್ತಿದ್ದಾರೆ. ಕೇಂದ್ರದಲ್ಲಿ ಇವರದ್ದೇ ಆದ ಸರ್ಕಾರವಿದೆ. ಕೂಡಲೇ ಹಣ ಬಿಡುಗಡೆ ಮಾಡಿಸಿ ಪರಿಹಾರ ನೀಡದೇ ಭಾಷಣ ಬಿಗಿಯುವ ಮೂಲಕ ಜನ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.
ಕಾಲು, ಬಾಯಿ ಜ್ವರದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 5 ರಿಂದ 6 ಕೋಟಿ ರು. ಸಾಕು.   ಅದನ್ನು ಸರ್ಕಾರ ನೀಡುತ್ತಿಲ್ಲ. ಆದರೆ ಜೆಡಿಎಸ್ 1.15 ಕೋಟಿ ರು. ಪರಿಹಾರ ನೀಡಿದೆ. 1.72 ಲಕ್ಷ ಕೋಟಿ ರು. ಬಜೆಟಟ್ಘೋಷಣೆ ಮಾಡಿರುವ ಸರ್ಕಾರಕ್ಕೆ ಕೇವಲ 6 ಕೋಟಿ ರು. ಗಳನ್ನು ನೀಡಲು ಸಾಧ್ಯವಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ಪ್ರತಿಪಕ್ಷದ ನಾಯಕರಾಗಿ ಸರ್ಕಾರ ತಪ್ಪುನೆಪ್ಪುಗಳನ್ನು ಎತ್ತಿ ಹಿಡಿಯಲು ಹೋದರೆ ವಿರೋಧ ಪಕ್ಷದ ನಾಯಕರಿಗೆ ಬಂದಿರುವ ಬಾಯಿ ಜ್ವರ ಲಸಿಕೆ ಇಲ್ಲ ಎಂಬ ಉದ್ಧಟತನ ಹೇಳಿಕೆಯನ್ನು ಸಂಬಂಧಪಟ್ಟ ಸಚಿವರು ನೀಡುತ್ತಾರೆ ಎಂದು ಖಂಡಿಸಿದರು.  
ಸಮೀಕ್ಷೆ ಸರಿಯಿಲ್ಲ: ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸುತ್ತವೆ ಎಂಬುದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಿಳಿಯುತ್ತದೆ. ಆದರೆ ದೇಶವನ್ನು ಲೂಟಿ ಹೊಡೆದ ಕಾಂಗ್ರೆಸ್ ರಾಜ್ಯದಲ್ಲಿ 13 ಮತ್ತು ರಾಜ್ಯವನ್ನು ಕೊಳ್ಳೆ ಹೊಡೆದ ಬಿಜೆಪಿಗೆ 12 ಸ್ಥಾನಗಳನ್ನು ಬರುತ್ತವೆ. ಆದರೆ ಜನಪರವಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ಜೆಡಿಎಸ್‌ಗೆ 3 ಸ್ಥಾನ ಮಾತ್ರ ಎಂದು ಸಮೀಕ್ಷೆ ಮಾಡಿರುವುದು ಒಪ್ಪುವ ವಿಚಾರವಲ್ಲ.
ದೇವೇಗೌಡರು ಸಿಎಂ ಮತ್ತು ಪ್ರಧಾನಿಯಾಗಿದ್ದಾಗ ಕಳಸ ಭಾಗದ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆ ಮಾಡಿ, ನಂತರ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯನ್ನು ಒಪ್ಪಿಗೆಯನ್ನು ಪಡೆಯಲಾಗಿದೆ. ಆದರೆ ಈಗ 1980 ರ ಅರಣ್ಯ ಕಾಯ್ದೆ ನೆಪಮೊಡ್ಡಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಕಾಂಗ್ರೆಸ್‌ನ ರೈತ ವಿರೋಧಿಗೆ ಸಾಚಾ ನಿರ್ದಶನವಾಗಿದೆ ಎಂದರು.
ರಾಮನಗರಕ್ಕೆ ಸಿಎಂ ಬಂದ್ರೆ ಹೋಗಲ್ಲ: ರಾಮನಗರ ಜಿಲ್ಲೆಯ  ಪ್ರಗತಿ ಪರಿಶೀಲನೆ ಸಭೆಗೆ ಸಿಎಂ ಬಂದರೂ ನಾನು ಹೋಗಲ್ಲ. ಏಕೆಂದರೆ ಬರುವ ಉದ್ದೇಶ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಲ್ಲ. ಬದಲಿಗೆ ಕುಮಾರಸ್ವಾಮಿ ಅವರ ವಿರುದ್ಧ ರಾಜಕೀಯ ಮಾಡಲು ಬರುವುದು ಎಂಬುದು ತಿಳಿಯದೇ ಇರಲಾರದು. ಮಾಜಿ ಪಿಎಂ ದೇವೇಗೌಡರ ಭದ್ರಕೋಟೆ ಹಾಸನವನ್ನು ಛಿದ್ರ ಮಾಡುತ್ತವೆ ಎಂದು ಬಂದ ಮುಖ್ಯಮಂತ್ರಿಗಳು, ಆಲೂಗಡ್ಡೆ ಮತ್ತಿತರ ಬೆಳೆಗಳನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಲಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಘೋಷಿಸಲಿಲ್ಲ. ಬದಲಿಗೆ ಕೆಲ ಮುಖಂಡರ ಮನೆಯಲ್ಲಿ 3 ಗಂಟೆಗೂ ಹೆಚ್ಚು ಕಾಲ ಕುಳಿದು ದೇವೇಗೌಡರನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿದರು. ಇಷ್ಟು ಸಮಯವನ್ನು ಜನತಾದರ್ಶನ ಮತ್ತು ಪ್ರಗತಿ ಪರಿಶೀಲನಾ ಸಭೆಗೆ ವ್ಯಯಿಸಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ಶಾಸಕ ಪಟೇಲ್ ಶಿವರಾಂ, ಎಚ್.ಎಸ್. ಪ್ರಕಾಶ್ ಇದ್ದರು.

ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ವ್ಯವಸ್ಥಿತ ಸಂಚು: ಕುಮಾರಸ್ವಾಮಿ
ಹಾಸನ: ಒಂದು ವರ್ಷದ ಹಿಂದೆ ನಡೆದ ಪ್ರಕರಣವನ್ನು ಈಗ ಕೆದಕುವ ಮೂಲಕ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರವೊಂದು ಘಟನೆ ನಡೆದ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಂಡಿದ್ದರೆ ಯಾವುದೇ ವಿವಾದ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಈಗ ಕ್ಕಮ ಜರುಗಿಸಲು ಹೊರಟು ಧಾರ್ಮಿಕ ಕ್ಷೇತ್ರದ ಬಗ್ಗೆ ಅನುಮಾನಗಳು ಉಂಟು ಮಾಡುತ್ತಿರುವುದು ಯಾರಿಗೂ ಶೋಭೆ ತರುವಂಥ ಸಂಗತಿಯಲ್ಲ.
ಇದನ್ನು ಗಮನಿಸಿದರೇ ಧರ್ಮಾಧಿಕಾರಿಗಳ ಕುಟುಂಬಕ್ಕೆ ಕಳಂಕ ತರುವ ಯತ್ನ, ಸಂಚು ನಡೆಯುತ್ತಿದೆ ಎಂಬುದು ತಿಳಿಯುತ್ತದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಧರ್ಮಾಧಿಕಾರಿ ಹೆಗ್ಗಡೆ ಅವರು, ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐ ವಹಿಸಿ ಎಂದು ಆಗ್ರಹಿಸಿರುವುದಲ್ಲದೇ, ತಪ್ಪು ಮಾಡಿದವರಿಗೆ ಮಂಜುನಾಥರೇ ಶಿಕ್ಷೆ ಕೊಡುತ್ತಾರೆ ಎಂದು ಹೇಳಿದ್ದಾರೆ. ಆದರೂ ಕೊಲೆ ಪ್ರಕರಣವನ್ನು ಹೆಗ್ಗಡೆ ಕುಟುಂಬಕ್ಕೆ ತಾಳೆ ಹಾಕುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ನಾಳೆ ಜೆಡಿಎಸ್ ಮೌನ ಪ್ರತಿಭಟನೆ
ಹಾಸನ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ಮಾಡಿರುವ ಆರೋಪ ಖಂಡಿಸಿ ಅ.19 ರಂದು ಮೌನ ಪ್ರತಿಭಟನೆ ನಡೆಸಲು ಜೆಡಿಎಸ್ ನಿರ್ಧರಿಸಿದೆ. ನಗರದಲ್ಲಿ  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎಚ್.ಎಸ್. ಪ್ರಕಾಶ್ ಅವರು,  ಧರ್ಮಾಧಿಕಾರಿ ಕುಟುಂಬದ ಮೇಲೆ ಧರ್ಮಸ್ಥಳದಲ್ಲಿ ಇಟ್ಟಿರುವ ನಂಬಿಕೆ ಸಹಿಸಲಾರದೆ ಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು. ಜೈನ ಸಮಾಜದ ಎಚ್.ಪಿ. ಸುದರ್ಶನ್, ಎಸ್.ಡಿ. ಜಿನ್ನರಾಜ್, ನಾಗೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.