ಹಾಸನ

'ಜನತಾ ಕೋರ್ಟ್: ವ್ಯಾಜ್ಯಗಳ ಶೀಘ್ರ ಪರಿಹಾರ ಸಾಧ್ಯ'

Published On :

ಚನ್ನರಾಯಪಟ್ಟಣ: ಕಾನೂನು ಸಮಸ್ಯೆ ತಲೆದೋರಿದಾಗ ದೂರು ನೀಡಿದರೆ ಸಮಸ್ಯೆ ಬಗೆಹರಿಸಲು ಉಭಯೇತರರು ಒಪ್ಪಿದರೆ ಜನತಾ ನ್ಯಾಯಾಲಯದಿಂದ ಅನುಕೂಲವಾಗುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ವೈ.ಕೆ. ಪುಟ್ಟಸ್ವಾಮೀಗೌಡ ತಿಳಿಸಿದರು.ತಾಲೂಕಿನ ಬಾಗೂರು ಗ್ರಾಮಪಂಚಾಯ್ತಿ ಆವರಣದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಸಿ.ಎನ್. ಗಂಗಪ್ಪ ಮಾತನಾಡಿ, ಸರ್ಕಾರದ ಹಲವಾರು ಕಾರ್ಯಕ್ರಮಗಳಿದ್ದು ಮಹಿಳೆಯರು ಮುಂದಾಗಿ ಯೋಜನೆಯ ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್. ಸಿ. ಶಂಕರಲಿಂಗೇಗೌಡ ಮಾತನಾಡಿದರು.

21ರಂದು ವಸತಿ ಶಾಲೆ ನೌಕರರ ಜಿಲ್ಲಾ ಸಮಾವೇಶ
ಹಾಸನ:
ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಹಾಸ್ಟೆಲ್ ಹಾಗೂ ವಸತಿ ಶಾಲೆ ನೌಕರರ ಜಿಲ್ಲಾ ಸಮಾವೇಶವನ್ನು ಅ. 21ರಂದು ಬೆಳಗ್ಗೆ 10.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಸಲಾಗುವುದು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ತಿಳಿಸಿದ್ದಾರೆ. ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ದಿನಗೂಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ನಿಗದಿತ ಕನಿಷ್ಠ ವೇತನ, ಭವಿಷ್ಯ ನಿಧಿ, ಕೆಲಸ, ಭದ್ರತೆ, ಕಾಯಂ ಹಾಗೂ ಇನ್ನಿತರೆ ಸೇವಾ ಸೌಲಭ್ಯಗಳಿಗೆ ಆಗ್ರಹಿಸಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಕಾರ್ಮಿಕರಿಗೆ ಶಾಸನ ಬದ್ಧ ನಿಗದಿತ ಕನಿಷ್ಠ ವೇತನ, ಭವಿಷ್ಯ ನಿಧಿ, ಕೆಲಸದ ಭದ್ರತೆ ಹಾಗೂ ಯಾವುದೇ ಸೇವಾ ಸೌಲಭ್ಯಗಳನ್ನು ನೀಡದೆ ಅತಿ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಇವರಿಗೆ ನಿಗಧಿತ ಕೆಲಸದ ವೇಳೆಯಿಲ್ಲದೆ, ಹಗಲೂ-ರಾತ್ರಿ ಕೆಲಸ ಮಾಡಿಸಲಾಗುತ್ತಿದೆ. ನೌಕರರನ್ನು ಸಂಘಟಿಸಿ, ಅವರ ಶಾಸನ ಬದ್ಧ ಹಕ್ಕುಗಳಿಗಾಗಿ ಹಾಗೂ ಅವರನ್ನು ಖಾಯಂ ಮಾಡುವಂತೆ ಆಗ್ರಹಿಸಿ, ಸಂಘಟಿತ ಹೋರಾಟ ನಡೆಸಲು ಸಿಐಟಿಯು ನಿರ್ಧರಿಸಿದೆ.  ಈ ಹಿನ್ನೆಲೆಯಲ್ಲಿ ಅ.21 ರಂದು ಹಾಸನ ಜಿಲ್ಲಾ ವಸತಿ ಶಾಲೆ ನೌಕರರ ಜಿಲ್ಲಾ ಸಮಾವೇಶ ನಡೆಯಲಿದೆ.  ಸಮಾವೇಶವನ್ನು ಹಿರಿಯ ಕಾರ್ಮಿಕ ಮುಖಂಡರು ಹಾಗೂ ಸಿಐಟಿಯುವಿನ ರಾಜ್ಯ ಉಪಾಧ್ಯಕ್ಷ  ವಿ.ಸುಕುಮಾರ್ ಉದ್ಘಾಟಿಸುವರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಅಧಿಕಾರಿ ಸಿ.ಕೆ.ಜಗದೀಶ್ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ದಿನಗೂಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು  ಸಮಾವೇಶದಲ್ಲಿ ಭಾಗವಹಿಸುವಂತೆ ಧರ್ಮೇಶ್ ಕೋರಿದ್ದಾರೆ.

'ಶ್ರೀರಾಮಸೇನೆ ಸಂಘ ಪರಿವಾರಕ್ಕೆ ಸಂಬಂಧಿಸಿದ್ದಲ್ಲ'
ಹಾಸನ:
ಸಂಘ ಪರಿವಾರದ ಹೆಸರಿನಲ್ಲಿ ದಬ್ಬಾಳಿಕೆ ಮಾಡಿ ಕೇಳಿದರೆ ಸಾರ್ವಜನಿಕರು ಹಣ ಕೊಡಬಾರದು ಎಂದು   ಹಾಸನ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಚಿ ಅಂದಾನಿಗೌಡ ಹೇಳಿದ್ದಾರೆ. ಶ್ರೀರಾಮ ಸೇನೆ ಕೂಡಾ ಒಂದು ಉತ್ತಮ ಹಿಂದೂ ಸಂಘಟನೆಯಾಗಿದೆ. ಆದರೆ ಶ್ರೀ ರಾಮಸೇನೆ ಸಂಘ  ಪರಿವಾರಕ್ಕೆ ಸಂಬಂಧಪಟ್ಟಿಲ್ಲ. ಸೇನೆ ಸಹ ಹಿಂದೂ ಧಾರ್ಮಿಕ ವಿಚಾರಗಳಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಾ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಾಸನ ಘಟಕದ ಪದಾಧಿಕಾರಿಗಳು ಸಂಘ ಪರಿವಾರದ ಹೆಸರಿನಲ್ಲಿ  ನಗರ ಜನತೆಯಲ್ಲಿ ಶ್ರೀರಾಮಸೇನೆ ಸಂಘ ಪರಿವಾರಕ್ಕೆ ಸೇರಿದ್ದು ಎಂದು ಹೇಳುತ್ತಾ ಸಾಕಷ್ಟು ಹಣವನ್ನು  ಸಂಗ್ರಹಿಸುತ್ತಿದೆ. ಇದಕ್ಕೆ ಎಲ್‌ಐಸಿ ರಂಗನಾಥ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.