ಶ್ರೀರಾಮ್ ಚಿಟ್ಸ್ ಯಾರಿಗೂ ಮೋಸ ಮಾಡಿಲ್ಲ
ಬೆಂಗಳೂರು: ಶ್ರೀರಾಮ್ ಚಿಟ್ಸ್ ಸಂಸ್ಥೆ ಚೀಟಿ ಹಣ ನೀಡದೆ ಮೋಸ ಮಾಡುತ್ತಿದೆ ಎಂದು ಸುಳ್ಳು ಆರೋಪ ಮಾಡಿ, ಹಾಸನ ಶಾಖೆಯಲ್ಲಿ ನಡೆದ ಗಲಾಟೆಗೆ ಸಂಸ್ಥೆ ವಜಾಗೊಳಿಸಿದ ಸಿಬ್ಬಂದಿಯೇ ಕಾರಣ ಎಂದು ಶ್ರೀರಾಮ್ ಚಿಟ್ಸ್ ಪ್ರಧಾನ ವ್ಯವಸ್ಥಾಪಕ ಎನ್.ಲಕ್ಷ್ಮೀನಾರಾಯಣ ಹೇಳಿದ್ದಾರೆ.
ಶ್ರೀರಾಮ್ ಚಿಟ್ಸ್ ಕಳೆದ 30 ವರ್ಷಗಳಿಂದ ಕಾನೂನುಪ್ರಕಾರ ಚೀಟಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು, ಲಕ್ಷಾಂತರ ಜನ ಇದರ ಲಾಭ ಪಡೆದು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡಿದ್ದು, ಸಂಸ್ಥೆ ಮೋಸ ಮಾಡುತ್ತಿದೆ ಎಂಬುದು ಸುಳ್ಳು.
ಆದರೂ, ಸಾರ್ವಜನಿಕರಿಂದ ಚೀಟಿ ಹಣ ಹಾಕಿಸಿಕೊಂಡು ಹಣ ನೀಡದೆ ಮೋಸ ಮಾಡಲಾಗಿದೆ ಎಂದು ಕಾವಲು ಪಡೆ ಕಾರ್ಯಕರ್ತರು ಮಂಗಳವಾರ ಹಾಸನ ಶಾಖೆಗೆ ನುಗ್ಗಿ ಗಲಾಟೆ ಮಾಡಿದ್ದು, ಆ ಗುಂಪಿನಲ್ಲಿ ಸಂಸ್ಥೆಯ ಮಾಜಿ ನೌಕರ ಬಿ.ಎಸ್.ನವೀನ್ಕುಮಾರ್ ಇದ್ದರು.
ನವೀನ್ ಅವರು ಸಂಸ್ಥೆಯಲ್ಲಿ ವಸೂಲಿ ಸಹಾಯಕರಾಗಿದ್ದು ಆಡಳಿತಾತ್ಮಕ ಕಾರಣಕ್ಕೆ ಅವರನ್ನು ಹಾಸನದಿಂದ ಕಾರವಾರಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಕಾರವಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಅವರನ್ನು 2010ರ ಜು.17ರಂದು ಕೆಲಸದಿಂದ ವಜಾ ಮಾಡಲಾಗಿತ್ತು. ಆದ್ದರಿಂದ ಅವರೇ ಈ ಘಟನಾವಳಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಾಗೆಯೇ, ಮೋಹನ್ ಮತ್ತು ದೀಪಿಕಾ ಎಂಬವರು 4 ತಿಂಗಳ ಹಿಂದೆಯೇ ಚೀಟಿ ಕೂಗಿದ್ದರೂ ಅವರಿಗೆ ಹಣ ನೀಡಿಲ್ಲ ಮತ್ತು ಸಂಸ್ಥೆಯವರು ಉಡಾಫೆ ಉತ್ತರ ನೀಡುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಘಟನೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಆದರೆ, ಮೋಹನ್ ಮತ್ತು ದೀಪಿಕಾ ಅವರು ತಿಂಗಳ ಕಂತನ್ನು ಸರಿಯಾಗಿ ಪಾವತಿಸದಿದ್ದರೂ ಅವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಿ ಅ. 15ರಂದು ಇಬ್ಬರಿಗೂ ಚೆಕ್ ಮೂಲಕ ಹಣ ನೀಡಲಾಗಿದೆ.
ಅದಕ್ಕಾಗಿ ಭದ್ರತೆ ಹಾಗೂ ಇತರ ದಾಖಲೆ ಪರಿಶೀಲನೆಗೆ ಸಮಯಾವಕಾಶ ಪಡೆಯಲಾಗಿತ್ತು ವಿನಃ ಮೋಸ ಆಗಿಲ್ಲ ಎಂದು ಲಕ್ಷ್ಮೀನಾರಾಯಣ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಸಂಸ್ಥೆಯ ಯಾವುದೇ ನೌಕರರು ಸಾರ್ವಜನಿಕರಿಗೆ ಉಡಾಫೆ ಉತ್ತರ ನೀಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

