ಹಾಸನ

ಸಮಸ್ಯೆಗಳ ಸುಳಿಯಲ್ಲಿ ಅರಸೀಕೆರೆ ಪಟ್ಟಣ

Published On :

ಕ.ಪ್ರ.ವಾರ್ತೆ ಅರಸೀಕೆರೆ ಅ.17
ಪಟ್ಟಣಾದ್ಯಂತ ಸಮಸ್ಯೆಗಳ ಮಹಾಪೂರವಿದ್ದು ಇವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪುರಸಭಾ ಆಡಳಿತ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಕೆ.ವಿ.ಹಿರಿಯಣ್ಣ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪಟ್ಟಣದ ಅವಿಭಾಜ್ಯ ಅಂಗವಾದ ಅಂಚೆಕೊಪ್ಪಲು ಮತ್ತು ಮಲ್ಲೇಶ್ವರ ನಗರಕ್ಕೆ ಸಂಪರ್ಕ ರಸ್ತೆಯಾಗಿದ್ದ ರೇಲ್ವೆ ಗೇಟ್ ಬಂದ್ ಮಾಡಿರುವ ಕಾರಣ ಪರ್ಯಾಯ ರಸ್ತೆ ವ್ಯವಸ್ಥೆಯಿಲ್ಲದೆ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಒಂದು ಕಿ.ಮೀ. ಸುತ್ತಿಕೊಂಡು ಸೇತುವೆ ಕೆಳಭಾಗದಲ್ಲಿ ಜನರು ಬರಬೇಕಾಗಿದೆ. ಜತೆಗೆ ರಸ್ತೆಯಲ್ಲಿ ಹೋಗುವಾಗ ಹಗಲು ಹೊತ್ತಿನಲ್ಲೇ ಕಳ್ಳ ಕಾಕರರ ಭಯವನ್ನು ನಾಗರಿಕರು ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇನ್ನೂ ರಾತ್ರಿ ವೇಳೆಯಲ್ಲಿಂತೂ ಸಂಚರಿಸುವುದು ದುಸ್ಸಾಹಸದ ಕೆಲಸವೇ ಸೈ. ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಪುರಸಭೆ ಆಡಳಿತ ಈ ಸೇತುವೆಯ ಎರಡು ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲದ ಕಾರಣ ರಸ್ತೆ ಕಗ್ಗತ್ತಲುಮಯವಾಗಿ ರೂಪುಗೊಂಡಿದೆ. ಅಂತೆಯೇ ರೈಲ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಫಲವಾಗಿ ಮೇಲು ಸೇತುವೆ ನಿರ್ಮಾಣ ಎಂಬುದು ಕನಸಿನ ಮಾತಾಗಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು ಹಾಗೂ ವಯೋವೃದ್ಧರಿಗೆ ಒಂದು ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ಈ ಪ್ರದೇಶಗಳಲ್ಲಿ ಹೆಚ್ಚಿನ ಪಹರೆಯನ್ನು ರಾತ್ರಿ ವೇಳೆಯಲ್ಲಿ ಹಾಕುವ ಮೂಲಕ ಸಮಾಜ ದ್ರೋಹಿಗಳ ಕಿರುಕುಳದಿಂದ ನಾಗರಿಕರನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಮೀಣಾ ಪ್ರದೇಶದ ರೈತರು ತೆಂಗಿನ ಮರಗಳಿಗೆ ಬಂದಿರುವ ಸುಳಿ ರೋಗದಿಂದ ಕಂಗಾಲಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಲೂಕಿನ ರೈತರ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಎಪಿಎಂಸಿಯಲ್ಲಿ ಸ್ಥಗಿತಗೊಂಡಿರುವ ಕೊಬ್ಬರಿ ಖರೀದಿಯ ನಾಪೆಡ್ ಕೇಂದ್ರವನ್ನು ಪುನರಾರಂಭಿಸುವ ಮೂಲಕ ನಿಗದಿತ ಬೆಂಬಲ ಬೆಲೆಯನ್ನು 6,500 ರಿಂದ 7,500 ರುಪಾಯಿಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ಮಾತನಾಡಿ ಕೇಂದ್ರದಲ್ಲಿನ ಯುಪಿಎ ಸರ್ಕಾರ ದಿನನಿತ್ಯದ ಅಗತ್ಯ ವಸ್ತುಗಳಾದ ಆಹಾರ ಪದಾರ್ಥ, ಹಾಲು, ಅಡುಗೆ ಅನಿಲ ಸೇರಿದಂತೆ ಇನ್ನಿತರ ಅಗತ್ಯ ವಸ್ತಗಳ ಬೆಲೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಕಳೆದ ಹದಿನೈದು ವರ್ಷಗಳಿಂದ ಏರಿಕೆಯಾಗದ ರೈಲ್ವೆ ಪ್ರಯಾಣ ದರವನ್ನು ಈ ಸರ್ಕಾರ ಏರಿಸಿದ್ದು ಶ್ರೀಸಾಮನ್ಯರ ಕಿಸೆಗೆ ಮತ್ತಷ್ಟು ಹೊರೆಯಾಗುವಂತೆ ಮಾಡಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಂತಹ ನಾಯಕರು ಅವಶ್ಯಕವಾಗಿದ್ದು, ಇವರನ್ನು ಭಾರತದ ಮುಂದಿನ ಪ್ರಧಾನಿ ಎಂದು ಬಿಂಬಿಸಿರುವ ಬಿಜೆಪಿ ಪಕ್ಷ ಕರೆಗೆ ಕಾರ್ಯಕರ್ತರು ಹೆಚ್ಚಿನ ಮಹತ್ವ ನೀಡಿ ಸಂಘಟರಾಗಿ ಹೋರಾಟ ಮಾಡಬೇಕು ಎಂದು ನುಡಿದರು.
ನಗರ ಕಾರ್ಯದರ್ಶಿ ಎನ್.ಎಲ್.ಕುಮಾರ್, ಸಹ ಕಾರ್ಯದರ್ಶಿ ಕೊಳಗುಂದ ಶ್ರೀಕಾಂತ್ ಹಾಗೂ ಈರಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.