'ಎಲ್ಲರೂ ಆಯಾ ಪ್ರತಿಭೆಯ ಯಜಮಾನರು'
ಹಾಸನ: ಪ್ರತಿಯೊಬ್ಬರೂ ಭಿನ್ನ ಭಿನ್ನವಾದ ಪ್ರತಿಭೆ ಹೊಂದಿರುತ್ತಾರೆ. ಎಲ್ಲರೂ ಆಯಾ ಪ್ರತಿಭೆಯ ಯಜಮಾನರಾಗಿರುತ್ತಾರೆ ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಎಸ್.ಭಟ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ಪ್ರಥಮ ಎಂ.ಎ. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಮಗ್ರ ಗುಣಮಟ್ಟ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಂಪನ್ಮೂಲ ಪ್ರತಿಭೆ ಎಂಬುದು ಇರುತ್ತದೆ ಎಂದು ತಿಳಿಸಿದರು.
ಇದನ್ನು ಗುರುತಿಸಿಕೊಳ್ಳಲಾಗದಿದ್ದರೆ ಪ್ರತಿಭೆ ಕಮರಿಹೋಗುತ್ತದೆ ಎಂದ ಅವರು ಕಸ್ತೂರಿ ಮೃಗ ತನ್ನ ಹೊಟ್ಟೆಯಲ್ಲಿ ಕಸ್ತೂರಿ ಇಟ್ಟು ಕೊಂಡು ತಾನೆ ಸುವಾಸನೆ ಹೊರಗೆಡುವುತ್ತೇನೆಂಬುದರ ಅರಿವೆ ಇಲ್ಲದೆ ಸುವಾಸನೆಗಾಗಿಯೇ ಹುಡುಕುತ್ತಾ ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತದೆ. ಅಂತೆಯೇ ವಿದ್ಯಾರ್ಥಿಗಳು ಪ್ರತಿಭೆ ಗುರುತಿಸಿ ಕೊಂಡು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಪ್ರತಿಭೆಯನ್ನು ಕಂಡುಕೊಳ್ಳಲು ಅವಶ್ಯಕವಾದ ಕೌಶಲ್ಯ ಇಚ್ಚಾಶಕ್ತಿ ಮತ್ತು ತರಬೇತಿ ಬೇಕು. ಇವುಗಳನ್ನು ನೀಡುವಲ್ಲಿ ಸಮಗ್ರ ಗುಣಮಟ್ಟ ತರಬೇತಿ ಪಾತ್ರ ಅಮೂಲ್ಯವಾದದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ಮಾತನಾಡಿ, ಸಮಗ್ರ ಗುಣಮಟ್ಟ ಎಂಬುದು ಉತ್ಪಾದನೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಅನುಷ್ಠಾನಗೊಂಡ ಒಂದು ಪರಿಕಲ್ಪನೆ. ಪ್ರಸ್ತುತ ಶೈಕ್ಷಣಿಕ ಕ್ಷೇತ್ರ ತೀವ್ರ ಸ್ಪರ್ಧೆ ಎದುರಿಸುತ್ತಿರುವುದರಿಂದ ಈ ಪರಿಕಲ್ಪನೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸುವುದು ಅನಿವಾರ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೊ.ಡಿ.ಜಿ.ಕೃಷ್ಣೇಗೌಡ ಯಾವುದೂ ಅಸಾಧ್ಯವಲ್ಲ, ಎಲ್ಲವೂ ಸಾಧ್ಯ. ಆದರೆ ಮನೋ ಭಾವನೆಯ ಬದಲಾವಣೆ ಅವಶ್ಯಕ ಎಂದರು. ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕದಲ್ಲಿ ಕಾರ್ಯ ನಿರ್ವಹಿಸಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ ಪ್ರೊ. ಕೆ.ಡಿ. ಮುರುಳೀಧರ್ ಅವರನ್ನು ಸನ್ಮಾನಿಸಲಾಯಿತು. ಶ್ವೇತಾ ಪ್ರಾರ್ಥಿಸಿದರು. ರಕ್ಷಿತ್ ಸ್ವಾಗತಿಸಿದರು. ಮಾಲತಿ ವಂದಿಸಿದರು. ಪ್ರೀತಿ ನಿರೂಪಿಸಿದರು.
ಇಂದಿನ ಸಭೆ ಮುಂದೂಡಿಕೆ
ರಾಮನಾಥಪುರ: ಅರಕಲಗೂಡು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅ. 20ರಂದು ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಕರೆದಿದ್ದ ರಾಮನಾಥಪುರ ಹೋಬಳಿ ಮಟ್ಟದ ಸಭೆಯನ್ನು ಮುಂದೂಡಲಾಗಿದೆ. ಅ.20 ರಂದೇ ರಾಜ್ಯ ಮಟ್ಟದ ಸಭೆಯನ್ನು ಕರೆದಿರುವುದರಿಂದ ರಾಮನಾಥಪುರದಲ್ಲಿ ಮಾಡಬೇಕಾದ ಸಭೆಯನ್ನು ಮುಂದೂಡಲ್ಪಟ್ಟಿದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸೋಮ ಶೇಖರ್ ತಿಳಿಸಿದ್ದಾರೆ.
ಫ್ಯಾಷನ್ ಡಿಸೈನಿಂಗ್ ಉಚಿತ ತರಬೇತಿ
ಹಾಸನ: ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಫ್ಯಾಷನ್ ಡಿಸೈನಿಂಗ್ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 18 ರಿಂದ 35 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳಿಗೆ (ಪುರುಷ ಹಾಗೂ ಮಹಿಳೆಯರಿಗೆ) ತರಬೇತಿಯನ್ನು ಪ್ರೇಮ ಜ್ಯೋತಿ ಸೋಷಿಯಲ್ ಸರ್ವೀಸ್ ಸೆಂಟರ್ನಲ್ಲಿ ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ 2000 ವಿದ್ಯಾರ್ಥಿ ವೇತನ ನೀಡಲಾಗುವುದು ಹಾಗೂ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತದೆ. ಆಸಕ್ತರು ಪ್ರೇಮ ಜ್ಯೋತಿ ಸೋಷಿಯಲ್ ಸರ್ವೀಸ್ ಸೆಂಟರ್, ಸವಿತಾ ಸಮಾಜ ಸಮುದಾಯ ಭವನ, ಎಂ.ಜಿ.ರಸ್ತೆ, ರವೀಂದ್ರನಗರ, ಹಾಸನ ಭೇಟಿ ಮಾಡ ಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 7846992957, 08172-268915,9620435280 ಸಂಪರ್ಕಿಸಬಹುದು.
ಪ್ರವಾಸಿಗರ ಸೋಗಿನಲ್ಲಿ ಕಳವು: ವೃದ್ಧೆ ಬಂಧನ
ಹಾಸನ: ಪ್ರವಾಸಿಗರ ಸೋಗಿನಲ್ಲಿ ಯುವತಿಯ ಬ್ಯಾಗ್ನಿಂದ ಹಣ ಅಪರಿಸುತ್ತಿದ್ದ ವೃದ್ಧೆಯನ್ನು ಶನಿವಾರ ಬಂಧಿಸಲಾಗಿದೆ. ವಿಶ್ವವಿಖ್ಯಾತ ಚನ್ನಕೇಶವ ದೇಗುಲದಲ್ಲಿ ಮಧ್ಯಾಹ್ನ ಶೃಂಗೇರಿಯಿಂದ ಪ್ರವಾಸಕ್ಕೆ ಬಂದಿದ್ದ ಮಹಿತಾ ಎಂಬ ಯುವತಿ ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತಿದ್ದರು. ಈ ಯುವತಿಯ ಹಿಂದೆ ನಿಂತಿದ್ದ ಗದಗ ಮೂಲದ ರತ್ನವ್ವ ಎಂಬ ವೃದ್ಧೆ ಹಾಗೂ ಮತ್ತೊಬ್ಬ ಮಹಿಳೆ ಕಮಲ ಎಂಬುವರು ಬ್ಯಾಗ್ ಜಿಪ್ ತೆಗೆದು 600 ರು.ಗಳನ್ನು ಕಳವು ಮಾಡಿದ್ದಾರೆ. ಇದರಿಂದ ಯುವತಿ ಕಿರುಚಿಕೊಂಡಿದ್ದು, ಈ ಸಂದರ್ಭದಲ್ಲಿ ಮಹಿಳೆ ಪರಾರಿಯಾಗಿದ್ದು, ವೃದ್ಧೆಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆ ಅಮೆರಿಕಾ ಮಹಿಳೆಯೊಬ್ಬರ ಬ್ಯಾಗ್ನಿಂದ ನಾಲ್ಕೈದು ಜನರ ಗುಂಪು 10 ಸಾವಿರ ರು. ಕಳವು ಮಾಡಿದ್ದರು. ಈ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬೇಲೂರು ಪೊಲೀಸರು ವೃದ್ಧೆಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

