ನಾಳೆ ವರಿಷ್ಠರ ತೀರ್ಮಾನ
ಕ.ಪ್ರ.ವಾರ್ತೆ ಅರಸೀಕೆರೆ ಅ. 19
ಕೆಜೆಪಿ ಮುಖಂಡ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬಿಜೆಪಿ ಸೇರ್ಪಡೆಗೆ ಯಾವುದೇ ನಾಯಕರ ವಿರೋಧವಿಲ್ಲ.
ಅ.21-22 ರಂದು ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಯಡಿಯೂರಪ್ಪ ಹಾಗೂ ಅನಂತ್ಕುಮಾರ್ ಮಾತುಕತೆ ನಡೆಸಲಿದ್ದು ಈ ತಿಂಗಳ ಅಂತ್ಯದೊಳಗೆ ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ತಾಲೂಕಿನ ಸುಕ್ಷೇತ್ರ ಕೋಡಿಮಠಕ್ಕೆ ಶನಿವಾರ ಭೇಟಿ ನೀಡಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಅನುಭವಿ ರಾಜಕಾರಣಿ. ರಾಜಕಾರಣದ ಎಲ್ಲಾ ಪಟ್ಟುಗಳನ್ನು ಬಲ್ಲವರು. ರಾಜಕಾರಣದಲ್ಲಿ ಎಡರು ತೊಡರುಗಳು ಸಹಜ ಎಂದು ಸೋಮಣ್ಣ ತಿಳಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಾಗಿದ್ದು, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಲಕ್ಷಾಂತರ ಕೋಟಿ ರು.ಹಗರಣಗಳು, ಬ್ರಹ್ಮಾಂಡ ಬ್ರಷ್ಚಚಾರದಿಂದ ದೇಶದ ಆರ್ಥಿಕ ಸ್ಥಿತಿ ಪತನವಾಗಿದೆ. ದೇಶ ಕಾಯುವ ಯೋಧನ ಜೀವಕ್ಕೆ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯಂತಹ ಧೀಮಂತ ನಾಯಕರು ಈ ದೇಶಕ್ಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿರುವ ಆಡಳಿತ ಹಾಗೂ ವಿರೋಧ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ಆಡಳಿತ ಪಕ್ಷ ತಪ್ಪು ಹೆಜ್ಜೆಗಳನ್ನು ಇಟ್ಟಾಗ ಹೋರಾಟದ ಮೂಲಕ ಅದನ್ನು ಎಚ್ಚರಿಸುವ ಕಾರ್ಯ ವಿರೋಧಪಕ್ಷದವರಾಗಿದ್ದು ಅದಕ್ಕೆ ಮಣಿಯದಿದ್ದರೆ ಮುಂದಿನ ತೀರ್ಮಾನವನ್ನು ಪಕ್ಷ ತೆಗೆದುಕೊಳ್ಳಲಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ರಮ ಗಣಿಗಾರಿಕೆ ಮಾಡಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿ ಆಡಳಿತ ವೈಫಲ್ಯ ಕಂಡಿದೆ. ಪಡಿತರ ವ್ಯವಸ್ಥೆಯಲ್ಲಿ ಲೋಪದೋಷ, ಜಾನುವಾರುಗಳಿಗೆ ಮಹಾಮಾರಿಯಂತೆ ಕಾಡುತ್ತಿರುವ ಕಾಲುಬಾಯಿ ಜ್ವರ ನಿವಾರಣೆಯತ್ತ ಗಮನ ಹರಿಸಿಲ್ಲ. ಈ ಬಗ್ಗೆ ಪಕ್ಷದ ನಾಯಕರು ಪ್ರವಾಸ ಮಾಡಿ ಜನರ ಅಹವಾಲು ಆಲಿಸುತ್ತಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ದೇಶಕ್ಕೆ ನರೇಂದ್ರ ಮೋದಿಯಂತಹ ನಾಯಕರ ನಾಯಕತ್ವ ಅವಶ್ಯಕತೆಯಿದ್ದು ಬಹುತೇಕ ಯುವಕರು ಮೋದಿಯವರ ಬೆಂಬಲಕ್ಕೆ ನಿಂತಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಎಚ್.ಡಿ.ದೇವೇಗೌಡರು ಅನುಭವಿ ರಾಜಕಾರಣಿಯಾಗಿದ್ದು ನಾವುಗಳು ಸಹ ಅವರ ಗರಡಿಯಲ್ಲಿ ಬೆಳೆದು ಬಂದವರೆ. ಆ ಸಂದರ್ಭಕ್ಕೆ ತಕ್ಕಂತೆ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್, ಎಂ.ಆರ್. ರವಿ, ಹಿರಿಯ ಮುಖಂಡ ವಕೀಲ ಎನ್.ಡಿ.ಪ್ರಸಾದ್, ನಗರಾಧ್ಯಕ್ಷ ಹಾಗೂ ವಕೀಲ ಹಿರಿಯಣ್ಣ, ಜಿಲ್ಲಾ ಸಹಕಾರ್ಯದರ್ಶಿ ಗಂಜಿಗೆರೆ ಬಸವರಾಜ್, ಎಪಿಎಂಸಿ ಸದಸ್ಯ ಡಿ.ಬಿ.ಗಂಗಾಧರ್, ನಗರ ವಕ್ತಾರ ದೇವರಾಜ್, ಜಿ.ಜಿ.ಲೋಕೇಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

