ಪ್ರಜೆಯ ಭಾವನೆಗೆ ಸ್ಪಂದನೆ ಮುಖ್ಯ
ಕ.ಪ್ರ.ವಾರ್ತೆ ಹಾಸನ ಅ. 20
ದೇಶ ಹಾಗೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಯ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಭಾನುವಾರ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿ ಅವರು, ದೇಶದಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ಮಾತನಾಡುತ್ತೇವೆ. ಆದರೆ ಈ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಕಾಣಬೇಕಾದರೆ ರಾಜಕೀಯೇತರವಾಗಿ ಎಲ್ಲರು ಒಟ್ಟಾಗಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ ಎಂದು ಹೇಳಿದರು.
ವಾಲ್ಮೀಕಿ ರಾಮಾಯಣ ಎಲ್ಲಾ ಯುಗಗಳಲ್ಲಿಯೂ 4 ವೇದಗಳಿಗಿಂತ ಶ್ರೇಷ್ಠವಾಗಿದೆ ಎಂದ ಅವರು, ರಾಮಾಯಣದಲ್ಲಿ ಒಬ್ಬ ಅಗಸ ಸೀತೆಯ ಸೂಕ್ಷ್ಮತೆಯ ಬಗ್ಗೆ ಮಾತನಾಡಿದ್ದರಿಂದ ಅದನ್ನು ಪರಿಗಣಿಸಿ ರಾಮ ಸೀತೆಯನ್ನು ವನವಾಸಕ್ಕೆ ಕಳುಹಿಸಿದ. ಹೀಗೆ ದೇಶ ಹಾಗೂ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಯ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿ ಆಡಳಿತ ನಡೆಸಬೇಕು ಎಂದರು.
ಶೇ.23ರಷ್ಟು ಮೀಸಲಾತಿ: ವಾಲ್ಮೀಕಿ ನಾಯಕ ಸಮಾಜಕ್ಕೆ ಲೋಕೋಪಯೋಗಿ ಇಲಾಖೆಯ ನೇರ ನೇಮಕಾತಿಯಲ್ಲಿ ಶೇ.23ರಷ್ಟು ಮೀಸಲಾತಿ ನಾನು ನೀಡಿದೆ. ಇಂಥ ತೀರ್ಮಾನವನ್ನು ಈ ಹಿಂದೆ ಯಾರೂ ಕೈಗೊಂಡಿಲ್ಲ ಹಾಗೂ ಮುಂದೆ ಯಾರಿಂದಲೂ ಕೈಗೊಳ್ಳಲಾಗದು. ಇದೇ ಮೊದಲು ಹಾಗೂ ಇದೇ ಕೊನೆ ಎಂದು ದೇವೇಗೌಡರು ನುಡಿದರು.
ನಾನು ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಇಂಥ ಮಹತ್ವದ ತೀರ್ಮಾನ ಕೈಗೊಂಡಿದ್ದೆ ಎಂದ ಅವರು, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಎಸ್ಸಿ ಸಮುದಾಯಕ್ಕೆ ಶೇ.15ರಷ್ಟು ಮತ್ತು ಎಸ್ಟಿ ಸಮುದಾಯಕ್ಕೆ ಶೇ.3ರಷ್ಟು ಮೀಸಲಾತಿ ನೀಡಿದ್ದಾರೆ. ಅಂಬೇಡ್ಕರ್ ಸಂವಿಧಾನ ನಮಗೆ ಬೈಬಲ್, ಖುರಾನ್ ಹಾಗೂ ಭಗವದ್ಗೀತೆ ಇದ್ದಂತೆ. ಈ ಬಗ್ಗೆ ಸಮಾಜದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಗ್ರಪ್ಪ ಮತ್ತು ತಿಪ್ಪೇಸ್ವಾಮಿಯವರನ್ನು ನೆನೆಯಬೇಕು. ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ನನಗೆ ಮಂತ್ರಿಗಿರಿ ನೀಡುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ಇವರಿಬ್ಬರು ಈ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದಿದ್ದಕ್ಕೆ ಈ ಸಮಾಜದ ಪರವಾಗಿ ನಿಂತೆ. ಅದಕ್ಕೆ ಚಂದ್ರಶೇಖರ್ ಅವರು ನನ್ನ ಮನವಿಗೆ ಸೂಕ್ತವಾಗಿ ಸ್ಪಂದಿಸಿದರು. ಈ ಹಿನ್ನೆಲೆಯಲ್ಲಿ ಉಗ್ರಪ್ಪ ಮತ್ತು ತಿಪ್ಪೇಸ್ವಾಮಿಯವರನ್ನು ನಾನು ಮರೆಯುವಂತಿಲ್ಲ ಎಂದರು.
ವಾಲ್ಮೀಕಿ ಭವನಕ್ಕೆ ನಿವೇಶನಕ್ಕೆ ಮನವಿ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾಲ್ಮೀಕಿ ಸಮುದಾಯ ಭವನ ಹಾಗೂ ಹಾಸ್ಟೆಲ್ಗಳ ನಿರ್ಮಾಣಕ್ಕೆ ಅಬಕಾರಿ ಸಚಿವ ಹಾಗೂ ವಾಲ್ಮೀಕಿ ಸಮಾಜದ ನಾಯಕ ಸತೀಶ್ ಜಾರಕಿಹೊಳಿ ಅವರು ಸರ್ಕಾರದಿಂದ ನಿವೇಶನ ಕೊಡಿಸಬೇಕು. ಭವನ ಹಾಗೂ ಹಾಸ್ಟೆಲ್ಗಳ ನಿರ್ಮಾಣ ಕಾರ್ಯಕ್ಕೆ ನಮ್ಮಿಂದ ಬೇಕಾದಂತಹ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿಕೆ: ಅಬಕಾರಿ ಸಚಿವ ಹಾಗೂ ವಾಲ್ಮೀಕಿ ಸಮಾಜದ ನಾಯಕ ಸತೀಶ್ ಜಾರಕಿಹೊಳಿ ಮಾತನಾಡಿ, ವಾಲ್ಮೀಕಿ ಸಮಾಜವು ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಾಕಷ್ಟು ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿದೆ. ವಾಲ್ಮೀಕಿ ಸಮುದಾಯದವರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ, ಬ್ರಿಟಿಷರ ವಿರುದ್ಧ ಹೋರಾಟ ಹಾಗೂ ನಾನಾ ಸಂದರ್ಭಗಳಲ್ಲಿ ಸಮಾಜದವರು ಅನೇಕ ಕೊಡುಗೆ ನೀಡಿದ್ದಾರೆ. ಇಂತಹ ಸಮಾಜವು ಮೀಸಲಾತಿ, ಎಸ್ಟಿ ಸಚಿವಾಲಯ, ವಿಶ್ವವಿದ್ಯಾನಿಲಯದ ಸಮಸ್ಯೆಗಳು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಯಡಿಯೂರಪ್ಪನವರು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅದೇ ರೀತಿ ಸಿದ್ದರಾಮಯ್ಯ ಸಹ ಸಮಾಜದವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳು ಸಮಾಜದ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪುವಂತಾಗಬೇಕು. ಆಗ ಮಾತ್ರ ಇತರೆ ಸಮುದಾಯದಂತೆ ವಾಲ್ಮೀಕಿ ಸಮುದಾಯವು ಸಮಾನತೆಯಿಂದ ಬಾಳಲು ಸಾಧ್ಯ ಎಂದು ಹೇಳಿದರು.
ಶೇ.10ಕ್ಕೆ ಏರಿಕೆಯಾಗಲಿ: ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಈ ಸಮಾಜದ ಮೀಸಲಾತಿಯು ಶೇ.3ರಷ್ಟಿದ್ದು, ಅದು ಶೇ.10ಕ್ಕೆ ಏರಿಕೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದ ಒತ್ತಾಯಿಸಿದ ಅವರು, ದೇವೇಗೌಡರು ಈ ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವುದಕ್ಕೆ ಸಾಕಷ್ಟು ಹೋರಾಟ ಮಾಡಿದ್ದಾರೆ. ದೇವೇಗೌಡರ ಹೋರಾಟದ ಫಲವಾಗಿ ಮಾಜಿ ಪ್ರಧಾನಿ ದಿ. ಚಂದ್ರಶೇಖರ್ ಈ ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವುದಕ್ಕೆ ಒಪ್ಪಿಗೆ ನೀಡಿದರು ಎಂದು ತಿಳಿಸಿದರು.
ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಮುಖಂಡ ಚನ್ನವೀರಪ್ಪ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಪ್ರಕಾಶ್, ಗೌರವಾಧ್ಯಕ್ಷ ಮಹಾಂತಪ್ಪ, ಸಂಚಾಲಕ ಶೇಖರಪ್ಪ ಹಾಗೂ ಇತರರು ಇದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ವಾಲ್ಮೀಕಿ ನಾಯಕ ಸಂಘದ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಭಾವ ಚಿತ್ರದ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ನೆರವೇರಿತು.
ಸಚಿವ ಜಾರಕಿಹೊಳಿ - ದೇವೇಗೌಡ ಮಾತುಕತೆ
ಹಾಸನ: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ರಾಜ್ಯ ಅಬ್ಕಾರಿ ಸಚಿವ ಜಾರಕಿಹೊಳಿ ಭಾನುವಾರ ಬೆಳಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪರಸ್ಪರ ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದರು.
ನಗರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಬೇಕಿತ್ತು. ದೇವೇಗೌಡರು ಬರುವ ಮೊದಲು ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಾರಕಿಹೊಳಿ, ಕೆಲ ಸಮಯ ಅಬ್ಕಾರಿ ಇಲಾಖೆ ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದರು. ಈ ಕಾಲಕ್ಕೆ ದೇವೇಗೌಡರು ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಕೂಡಲೇ ದೇವೇಗೌಡರು ಇರುವ ಕೊಠಡಿಗೆ ಧಾವಿಸಿದ ಜಾರಕಿಹೊಳಿ, 11 ನಿಮಿಷ ಪ್ರತ್ಯೇಕ ಮಾತುಕತೆ ನಡೆಸಿದರು. ಇದು ಆಕಸ್ಮಿಕ ಭೇಟಿಯಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಜಾರಕಿಹೊಳಿ ಹೇಳಿ, ಕಾರ್ಯಕ್ರಮಕ್ಕೆ ತೆರಳಿದರು. ಆದರೆ ಇದು ಅಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ತೀವ್ರ ಅಚ್ಚರಿ ಉಂಟು ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

