ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಸರ್ಕಾರ
ಕ.ಪ್ರ. ವಾರ್ತೆ ಹಾಸನ ಅ. 20
ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಮುಖ್ಯಮಂತ್ರಿಗಳು ಇನ್ನು ಮುಂದೆ ವರ್ಗಾವಣೆ ಇಲ್ಲ ಎಂದು ಹೇಳಿದ ಬೆನ್ನಲ್ಲೆ ಶಿಕ್ಷಣ ಇಲಾಖೆ 220 ಬಿಇಓಗಳನ್ನು ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಮೀನಿನ ಮಾರುಕಟ್ಟೆಯಲ್ಲಿ ಮೀನುಗಳನ್ನು ಹರಾಜು ಹಾಕುವ ರೀತಿಯಲ್ಲಿ ಸರ್ಕಾರಿ ಹುದ್ದೆಗಳನ್ನು ಲಕ್ಷಾಂತರ ರು.ಗಳಿಗೆ ಹರಾಜು ಮಾಡಲಾಗುತ್ತಿದೆ. ವರ್ಗಾವಣೆ ಮಾಡಿಸಲು ಏಜೆಂಟರು ಭಾರಿ ಸಂಖ್ಯೆಯಲ್ಲಿ ಹುಟ್ಟಿಕೊಂಡಿದ್ದಾರೆ.
2 ತಿಂಗಳಿನಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತಮ್ಮ ಇಲಾಖೆ ಅಧಿಕಾರಿಗಳ ವರ್ಗಾವಣೆ ಕಡತವನ್ನು ಇಟ್ಟುಕೊಂಡು ಈಗ ಸಹಿ ಹಾಕಿ, ಆದೇಶ ಹೊರಡಿಸಿದ್ದಾರೆ. ಹೀಗೆ ವಿಳಂಬ ಮಾಡಿದ್ದ ಉದ್ದೇಶ ಹಣ ವಸೂಲಿ ಮಾಡುವುದೇ ಆಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.
ಸೂಕ್ತ ಸೌಲಭ್ಯಗಳು ಇಲ್ಲದೇ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಮಾದರಿ ಶಾಲೆಗಳಿಗೆ ಶಿಕ್ಷಕರೇ ಇಲ್ಲ. ಇಂಥಹ ಗಂಭೀರ ಸಮಸ್ಯೆಗಳತ್ತ ಗಮನಹರಿಸದ ಪ್ರಾಥಮಿಕ ಶಿಕ್ಷಣ ಸಚಿವರು, ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಮಾರ್ಕಂಡಿದ್ರೆ ಏನ್‌ತಪ್ಪು ಎಂದು ಹೇಳಿಕೆ ನೀಡುತ್ತಿರುವುದಲ್ಲದೇ, ವರ್ಗಾವಣೆಯನ್ನು ದಂಧೆಯನ್ನಾಗಿ ಪರಿವರ್ತಿಸಿದ್ದಾರೆ. ಇದು ಅತ್ಯಂತ ನಾಚಿಗೇಡಿನ ಸಂಗತಿ. ಕೂಡಲೇ ಮುಖ್ಯಮಂತ್ರಿಗಳು ವರ್ಗಾವಣೆ ದಂಧೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಲ್ಲಿ ಇಲಾಖೆಗಳಿಗೆ ಅಭಿವೃದ್ಧಿಗೆಂದು ನಯಾಪೈಸೆ ನೀಡಿಲ್ಲ. ಆದರೆ ವರ್ಗಾವಣೆ ಕೆಲಸದಲ್ಲಿ ಮಾತ್ರ ನಿರತವಾಗಿದೆ. ಆಡಳಿತ ಯಂತ್ರ ಚುರುಕುಗೊಳಿಸಲು ಸರ್ಕಾರ ಬಂದ ಹೊಸತರಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಆದರೆ ಅದನ್ನೇ ದಂಧೆಯನ್ನಾಗಿ ಮಾಡಿಕೊಂಡರೇ ಹೇಗೆ ಎಂದು ಪ್ರಶ್ನಿಸಿದರು.
ಗಣಿಗಾರಿಕೆ ಬಗ್ಗೆಯೂ ಸಿಬಿಐ ತನಿಖೆ: 2006 ರ ನಂತರ ನಡೆದ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಯನ್ನು ವಹಿಸುವ ಬದಲು 2000 ದಿಂದ 2013 ರವರೆಗೆ ರಾಜ್ಯಾದ್ಯಂತ ನಡೆದಿರುವ ಅಕ್ರಮಗಳ ಬಗ್ಗೆಯೂ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ಬಗ್ಗೆ ದಾಖಲೆಗಳನ್ನು ನೀಡಿದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ ಸಿಎಂ ಈಗ ಸಮಾಜ ಸೇವಾಕರ್ತ ಹಿರೇಮಠ್ ನೀಡಿರುವ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಎಲ್ಲರಿಗೂ ಕ್ಲೀನ್ ಚಿಟ್ ನೀಡುವುದು ಉತ್ತಮ ಎಂದು ರೇವಣ್ಣ ವ್ಯಂಗ್ಯವಾಡಿದರು.
ಸೊನ್ನೆ ಎಂದು ಸಮೀಕ್ಷೆ ಹೇಳಿಲ್ವಾಲ್ಲಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸದ್ಯ ಜೆಡಿಎಸ್‌ಗೆ ಸೊನ್ನೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಿಲ್ವಾಲ್ಲಾ. ಜನತೆ ಯಾರಿಗೆ ಮತ ಹಾಕುತ್ತಾರೆ.
ಯಾರನ್ನು ತಿರಸ್ಕರಿಸುತ್ತಾರೆ ಎಂಬುದನ್ನು ಕಾದು ನೋಡಿ ಎಂದ ರೇವಣ್ಣ, ತಮ್ಮ ನಾದಿನಿ ವಿವಾಹದ ಆಹ್ವಾನ ಪತ್ರಿಕೆ ನೀಡಲು ಜಮೀರ್ ಅವರು, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ನಡೆಸುತ್ತಿದ್ದ ಸಭೆಗೆ ಹೋಗಿದ್ದರು. ಎಲ್ಲರೂ ಒಂದೇ ಕಡೆ ಸಿಗುತ್ತಾರೆ ಎಂಬ ಕಾರಣದಿಂದ ಅಲ್ಲಿಗೆ ಜಮೀರ್ ಹೋಗಿದ್ದರೇ ಹೊರತು ಬೇರೆ ಉದ್ದೇಶದಿಂದಲ್ಲ ಎಂದು ರೇವಣ್ಣ ಸ್ಟಷ್ಟನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

