ಅರಕಲಗೂಡು ತಾ.ನಲ್ಲಿ ಧಾರಾಕಾರ ಮಳೆ
ಕ.ಪ್ರ. ವಾರ್ತೆ ಅರಕಲಗೂಡು ಅ.20
ತಾಲೂಕಿನ ದೊಡ್ಡಮಗ್ಗೆ ಹೋಬಳಿಯಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವಾರು ಕೆರೆಗಳು ಕೋಡಿ ಬಿದ್ದಿದ್ದರೆ, ಮತ್ತೆ ಕೆಲವು ಕೆರೆಗಳು ಒಡೆದಿವೆ. ತೋಟ, ಜಮೀನುಗಳು ಜಲಾವೃತಗೊಂಡು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಇದೇ ವೇಳೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ಕೋಡಿ ಬಿದ್ದಿದ್ದು ಕೆರೆ ದಾಟಲು ಹೋದ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆತನ ಪತ್ತೆಗೆ ತೀವ್ರ ಹುಡುಗಾಟ ನಡೆಸಲಾಗಿತ್ತು. ಆದರೆ ಭಾನುವಾರ ಸಂಜೆ ಆತನ ಶವ ಪತ್ತೆಯಾಗಿದೆ.
ಶನಿವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಆರಂಭಗೊಂಡ ಮಳೆ ರಾತ್ರಿ 12 ಗಂಟೆಯವರೆಗೂ ಎಡಬಿಡದೆ ಸುರಿಯಿತು. ಅಷ್ಟಕ್ಕೆ ನಿಲ್ಲದ ವರುಣನ ಆರ್ಭಟ ಮತ್ತೆ ಮುಂದುವರಿದು ಬೆಳಗಿನ ಜಾವ 6 ಗಂಟೆವರೆಗೂ ಎಡಬಿಡದೇ ಧಾರಾಕಾರ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಹಾನಿಗೆ ಕಾರಣವಾಯಿತು.
ತಾಲೂಕಿನ ಬೆಳವಾಡಿ ಗ್ರಾಮದ ಹಿರೇಕೆರೆ ಅತಿಯಾದ ಮಳೆಯಿಂದ ಕೋಡಿ ಬಿದ್ದಿದೆ. ಪರಿಣಾಮ ಈ ಕೆರೆಯ ನೀರು ಮುಂದಿನ ಕೆರೆಗಳಿಗೂ ಹರಿದು ಹಾನಗಲ್ಲು ಗ್ರಾಮದ ಹಾನಗಲ್ಲಮ್ಮನ ಕೆರೆ ಕೋಡಿ ಬಿದ್ದಿದೆ. ಇದರಿಂದ ಭಾರೀ ಪ್ರಮಾಣದ ನೀರು ಜಲಧಾರೆಯಾಗಿ ಭೋರ್ಗರೆಯುತ್ತಾ ಹರಿಯಿತು.
ಸುಮಾರು 192 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ಈ ಕೆರೆ ಪೈಕಿ ಸುಮಾರು 38 ಎಕರೆ ಪ್ರದೇಶ ನಾಲೆಯಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಉಳಿದಂತೆ ತಾಲೂಕಿನ ಅತಿ ದೊಡ್ಡ ಕೆರೆಗಳ ಪೈಕಿ ಇದೂ ಒಂದು.
ಹಾನುಗಲ್ಲಮ್ಮನ ಕೆರೆ ಕೋಡಿ ಬಿದ್ದು ಎಲ್ಲೆಂದರಲ್ಲಿ ನೀರು ವ್ಯಾಪಕವಾಗಿ ಹರಿದಿರುವುದರಿಂದ ಅಪಾರ ಪ್ರಮಾಣದ ತೋಟದ ಬೆಳೆಗಳು ಹಾನಿಗೊಳಗಾಗಿದೆ. ಅಡಕೆ, ತೆಂಗು ಮತ್ತು ಬಾಳೆ ತೋಟಗಳು ಸಂಪೂರ್ಣ ಹಾನಿಗೊಳಗಾಗಿದೆ. ತೋಟದ ಮಣ್ಣು ಉರುಳಿದ್ದು, ರೈತರು ಕೃಷಿ ಮಾಡಿದ ಸಾವಿರಾರು ಎಕರೆ ತೋಟಗಳು ಹಾನಿಗೊಳಗಾಗಿವೆ. ಭಾರೀ ಪ್ರಮಾಣದ ವಿಳ್ಳೇದೆಲೆ ಹಂಬುಗಳು ನೆಲ ಕಚ್ಚಿವೆ.
ರಸ್ತೆಯಲ್ಲಿ ಹರಿದ ನೀರು: ಹಾನುಗಲ್ಲಮ್ಮನ ಕೆರೆ ಕೋಡಿ ಬಿದ್ದ ಪರಿಣಾಮ ಮುಂದಿನ ಜಿಟ್ಟೇನಹಳ್ಳಿ , ಕಾಳೇನಹಳ್ಳಿ ಕೆರೆಗಳೂ ಕೋಡಿ ಬಿದ್ದಿದ್ದು, ಕೆರೆಗಳು ಒಡೆಯುವ ಸಾಧ್ಯತೆ ಇದ್ದು, ಅಪಾಯದ ಅಂಚಿನಲ್ಲಿವೆ. ಕೇರಳಾಪುರದಿಂದ ರಾಮನಾಥಪುರಕ್ಕೆ ತೆರಳುವ ಮಾರ್ಗ ಮಧ್ಯೆ ಕಾಳೇನಹಳ್ಳಿ ಬಳಿ ಮುಖ್ಯ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಹರಿದಿದ್ದು, ನೀರಿನ ಪ್ರಮಾಣ ಇನ್ನೂ ಹೆಚ್ಚಾದರೆ ಸೇತುವೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.
ಬೈಕಿನೊಂದಿಗೆ ಕೊಚ್ಚಿ ಹೋದ ಯುವಕ: ತಾಲೂಕಿನ ದೊಡ್ಡ ಗ್ರಾಮ ಹಾನಗಲ್ನಲ್ಲಿ 1300 ಕುಟುಂಬಗಳು ವಾಸವಿದೆ. ಈ ಗ್ರಾಮದಲ್ಲಿ ಅಗತ್ಯ ಡೈರಿ ಇಲ್ಲ.
ಪ್ರತಿದಿನದಂತೆ ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಡೈರಿಗೆ ಹಾಲು ಹಾಕಲು ರಾಘವೇಂದ್ರ (32) ಎಂಬ ಯುವಕ ತನ್ನ ಡಿಸ್ಕವರಿ ಬೈಕಿಗೆ ಹಾಲಿನ ಕ್ಯಾನ್ ನೇತು ಹಾಕಿಕೊಂಡು ಪಕ್ಕದ ಬೇಡಿಗನಹಳ್ಳಿ ಗ್ರಾಮಕ್ಕೆ ಹೊರಟಿದ್ದ. ಅದೇ ಗ್ರಾಮದ ಸುರೇಂದ್ರ ಮತ್ತು ರಾಘವೇಂದ್ರ ಕೆರೆ ಕೋಡಿ ಬಿದ್ದಿದ್ದರೂ ಕೆರೆ ದಾಟಲು ದುಸ್ಸಾಹಸಕ್ಕೆ ಮುಂದಾಗಿದ್ದರು.
ಮುಂದಿನ ಬೈಕಿನಲ್ಲಿ ತೆರಳಿದ ಸುರೇಂದ್ರ ಆಚಿನ ದಡ ಸೇರಿ ಹಿಂದಿರುಗಿ ನೋಡುವಷ್ಟರಲ್ಲಿ ರಾಘವೇಂದ್ರ ನೀರಿನಲ್ಲಿ ಬೈಕಿನೊಂದಿಗೇ ಆಯಾ ತಪ್ಪಿ ಬಿದ್ದು ಕೊಚ್ಚಿ ಹೋಗುತ್ತಿದ್ದ. ಹಿಂದೆಯೇ ಬರುತ್ತಿದ್ದ ರಾಜೇಗೌಡ ಮತ್ತು ರಂಗಪ್ಪ ಗಾಬರಿಯಿಂದ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದುದು ಬಿಟ್ಟರೆ ಮತ್ತೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ನೋಡ್ತಾ ನೋಡ್ತಾ ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಕೊಣನೂರು ಪಿ.ಎಸ್.ಐ ರಾಜು, ಅರಕಲಗೂಡು ಅಗ್ನಿಶಾಮಕ ದಳದ ಅಧಿಕಾರಿ ಜ್ಞಾನಮೂರ್ತಿ ಮತ್ತು ಸಿಬ್ಬಂದಿ ಪಾತಾಳಗರಡಿ ಹಾಕುವ ಮೂಲಕ ರಾಘವೇಂದ್ರನ ಶವ ಮತ್ತು ಬೈಕನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ನೀರು ಕಡಿಮೆಯಾಗುವವರೆಗೂ ಪತ್ತೆ ಕಾರ್ಯ ಅಸಾಧ್ಯವೆಂದು ಸುಮ್ಮನಾದರು. ಆಸುಪಾಸಿನ ಗ್ರಾಮಸ್ಥರೂ ಹುಡುಕಾಟದಲ್ಲಿ ತೊಡಗಿದರು. ಮೃತ ಯುವಕ ರಾಘವೇಂದ್ರನಿಗೆ ವಯೋವೃದ್ಧ ತಂದೆ ತಾಯಿ ಇದ್ದಾರೆ. ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದು 8 ತಿಂಗಳ ಮಗುವಿದೆ.
ಕೊಚ್ಚಿ ಹೋದ ಮೀನಿನ ಮರಿಗಳು: ಬೆಳವಾಡಿ ಗ್ರಾಮದ ಹಿರೇಕೆರೆ ಕೆರೆ ಒಡೆದ ಪರಿಣಾಮ ಕೆರೆಗೆ ಬಿಡಲಾಗಿದ್ದ 2 ಲಕ್ಷ ರು. ಮೊತ್ತದ ಸುಮಾರು 5 ಲಕ್ಷ ಮೀನಿನ ಮರಿಗಳು ಕೊಚ್ಚಿ ಹೋಗಿವೆ ಎಂದು ಬೆಳವಾಡಿ ಗ್ರಾಮದ ದಿನೇಶ್ ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಸಂಭವಿಸಿರುವ ಹಾನಿ ಪ್ರದೇಶಗಳಿಗೆ ಭಾನುವಾರ ತಹಸೀಲ್ದಾರ್ ಈಶ್ವರಪ್ಪ, ಕಂದಾಯ ನಿರೀಕ್ಷಕ ಬಸವರಾಜು ಭೇಟಿ ನೀಡಿ ಪರಿಶೀಲಿಸಿದರು.
ಯುವಕನ ಶವ ಪತ್ತೆ
ಅರಕಲಗೂಡು: ತಾಲೂಕಿನ ಹಾನಗಲ್ಲು ಗ್ರಾಮ ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ರಾಘವೇಂದ್ರನ ಶವ ಭಾನುವಾರ ಸಂಜೆ 4 ಗಂಟೆ ವೇಳೆಯಲ್ಲಿ ದೊರಕಿದೆ. ರಾಘವೇಂದ್ರನ ಶವದ ಪತ್ತೆಗಾಗಿ ಬೆಳಗಿನಿಂದಲೇ ಪೊಲೀಸರು, ಸಾರ್ವಜನಿಕರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಹರ ಸಾಹಸ ಪಟ್ಟಿದ್ದರು. ನೀರು ಕಡಿಮೆಯಾಗದೇ ಶವ ಪತ್ತೆ ಮಾಡುವುದು ಸಾಧ್ಯವಿಲ್ಲವೆಂದು ಅಗ್ನಿ ಶಾಮಕ ದಳದವರೂ ಅಸಹಾಯಕತೆ ವ್ಯಕ್ತಪಡಿಸಿ ಸುಮ್ಮನಾಗಿದ್ದರು. ಆದರೆ ಗ್ರಾಮದ ಜನತೆ ಶವ ಪತ್ತೆಗಾಗಿ ನಡೆಸಿದ ಪ್ರಯತ್ನ ಸಂಜೆ ವೇಳೆಗೆ ಫಲಿಸಿತು.
ನೀರಿನಿಂದ ಶವ ಹೊರತೆಗೆಯಲಾಗಿದ್ದು,ಪೊಲೀಸರ ವಶಕ್ಕೆ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ನೀಡಲಾಗುವುದು ಎಂದು ಕೊಣನೂರು ಪಿಎಸ್ಐ ರಾಜು ತಿಳಿಸಿದ್ದಾರೆ. ಪರಿಹಾರ ಕ್ರಮಕ್ಕೆ ಸೂಚನೆ ಹಾನುಗಲ್ಲು ಗ್ರಾಮದಲ್ಲಿ ಸಂಬವಿಸಿರುವ ಬೆಳೆ ಹಾನಿ ಮತ್ತು ಯುವಕನ ಮರಣಕ್ಕೆ ಸಂಬಂಧಿಸಿದಂತೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಎ.ಮಂಜು ತಿಳಿಸಿದ್ದಾರೆ. ಮೃತನ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಲಾಗುವುದು ಎಂದು ಗ್ರೇಡ್ 2 ತಹಸೀಲ್ದಾರ್ ಜಗದೀಶ್ ತಿಳಿಸಿದ್ದಾರೆ.
ತಪ್ಪಿದ ಮತ್ತಷ್ಟು ಅಪಾಯ
ಬೆಳವಾಡಿಕೆರೆ, ಹಾನುಗಲ್ಲಮ್ಮನಕೆರೆ ಇವುಗಳಿಗೆ ಹಾರಂಗಿ ಮತ್ತು ಹೇಮಾವತಿ ಬಲ ಮೇಲ್ದಂಡೆ ನಾಲೆಗಳಿಂದಲೂ ನೀರು ಹರಿಸಲಾಗುತ್ತದೆ. ಆದರೆ ಕಳೆದ ನಾಲ್ಕು ದಿನಗಳಿಂದ ನಾಲೆಗಳಲ್ಲಿ ನೀರು ಹರಿಸುವುದುದನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ನೀರಿನ ಪ್ರಮಾಣ ಇಳಿಮುಖವಾಗಿತ್ತು. ಇಲ್ಲವಾಗಿದ್ದಲ್ಲಿ ಇನ್ನೂ ಅಪಾರ ಹಾನಿ ಸಂಭವಿಸುತ್ತಿತ್ತು.
ಬೆಳವಾಡಿ ಗ್ರಾಮದ ಹಿರೇಕೆರೆ ಒಡೆದ ಪರಿಣಾಮ ಗ್ರಾಮದ ಸುಮಾರು 50 ಎಕರೆಗೂ ಹೆಚ್ಚು ಅಡಿಕೆ ಮತ್ತು ಇನ್ನಿತರೆ ಬೆಳೆ ಬೆಳೆದಿದ್ದ ತೋಟಗಳು ಜಲಾವೃತಗೊಂಡಿದೆ. ಬೆಳವಾಡಿಯಿಂದ ಸೀಬಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಕಡಿದು ಹೋಗಿದೆ. ಅದೇ ರೀತಿ ಹಾನಿಗಲ್ಲು ಗ್ರಾಮದಿಂದ ಬೇಡಿಗನಹಳ್ಳಿಗೆ ತೆರಳುವ ಮಾರ್ಗ ಕಡಿದು ಹೋಗಿದ್ದು, ಬೇಡಿಗನಹಳ್ಳಿ ಗ್ರಾಮ ದ್ವೀಪವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

