ದನದ ಕೊಟ್ಟಿಗೆಯಾಗಿರುವ ರಾಜೀವ ಗಾಂಧೀ ಸೇವಾ ಕೇಂದ್ರ!
- ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ಹಕ್ಕಿ-ಪಿಕ್ಕಿ ಜನಾಂಗ ಹಾಗೂ ಅಲೆಮಾರಿಗಳಿಗೆ 10 ಲಕ್ಷ ರು. ವೆಚ್ಚದಲ್ಲಿ ಸರ್ಕಾರಿ ಕಟ್ಟಡ, ಗ್ರಾಮದ ದನ-ಕರುಗಳನ್ನು ಕಟ್ಟಲು ಗ್ರಾಮದಲ್ಲಿ ಲಕ್ಷಾಂತರ ರು. ಮೌಲ್ಯದ ಸಮುದಾಯ ಭವನ.. ಇದಪ್ಪಾ ಛಾನ್ಸು ಅಂದ್ರೇ.. ಎಂದುಕೊಂಡು, ಸರ್ಕಾರ ಇದ್ಯಾವಾಗ ಇಂಥ ಯೋಜನೆ ಜಾರಿಗೆ ತಂದಿದೆ ಎಂದು ಅಚ್ಚರಿಯಿಂದ ಹುಬ್ಬೇರಿಸಬೇಡಿ.
ವಿಷಯ ಇಷ್ಟೇ... ಇದು ಜಿಪಂನಿಂದ ನಿರ್ಮಿಸಲಾಗುತ್ತಿರುವ ತಾಲೂಕಿನ ಜಕ್ಕವಳ್ಳಿ ಗ್ರಾಮದ ಸಮುದಾಯ ಭವನ ಹಾಗೂ ಮೂಡಲಹಿಪ್ಪೆ ಗ್ರಾಮದ ಭಾರತ್ ನಿರ್ಮಾಣ ರಾಜೀವ್ಗಾಂಧಿ ಸೇವಾ ಕೇಂದ್ರಗಳನ್ನು ನಿರ್ಮಿಸಿದ್ದರೂ ಅವುಗಳು ಇನ್ನೂ ಉದ್ಘಾಟನೆಯಾಗದೆ ಪಾಳುಬಿದ್ದಿರುವುದು ಒಂದು ಕಡೆಯಾದರೆ, ಹತ್ತಾರು ವರ್ಷಗಳಿಂದ ಕುಂಟುತ್ತಲೇ ಸಾಗಿರುವ ಈ ಕಟ್ಟಡಗಳ ಇಂದಿನ ಸ್ಥಿತಿ. ಇನ್ನೂ ಹೆಚ್ಚಿನ ಅಚ್ಚರಿಯ ವಿಷಯ ಅಂದ್ರೇ... ತಾಲೂಕಿನ 26 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ 23 ಭಾರತ್ ನಿರ್ಮಾಣ ರಾಜೀವ್ಗಾಂಧಿ ಸೇವಾ ಕೇಂದ್ರಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ತಾಲೂಕಿನಲ್ಲಿ ನಿರ್ಮಿಸಲಾಗುತ್ತಿರುವ ಬಹುತೇಕ ಸಮುದಾಯ ಭವನಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ವರ್ಷಗಳೇ ಕಳೆದಿದ್ದು, ಅರ್ಧಕ್ಕೆ ನಿಂತ ಸಮುದಾಯ ಭವನಗಳು ಊರಿನ ದನ-ಕರುಗಳನ್ನು ಕಟ್ಟುವ ಕೊಟ್ಟಿಗೆಗಳಾಗಿದ್ದರೆ, ಇನ್ನುಳಿದವು ಹಕ್ಕಿ ಪಿಕ್ಕಿ ಜನಾಂಗದವರ ವಾಸಸ್ಥಾನಗಳಾಗಿವೆ.
ನಿರ್ವಹಣೆಯಿಲ್ಲದೆ ಹಾಳು: ಇದರಲ್ಲಿ ಇಲಾಖೆಯದಷ್ಟೇ ತಪ್ಪಿಲ್ಲ. ಏಕೆಂದರೆ ಕ್ಷೇತ್ರ ಶಾಸಕರು ಯಾವುದೇ ಗ್ರಾಮಕ್ಕೆ ಹೋದಾಗಲೂ ಮೂಲಭೂತ ಸಮಸ್ಯೆಗಳಿದ್ದಲ್ಲಿ ಪರಿಹರಿಸುವಂತೆ ಒತ್ತಾಯಿಸುವ ಇಲ್ಲವೇ ಮನವಿ ಸಲ್ಲಿಸುವ ಗೋಜಿಗೆ ಹೋಗದ ಗ್ರಾಮೀಣ ಭಾಗದ ಕೆಲ ಮರಿ ಪುಡಾರಿಗಳು ಹಾಗೂ ಶಾಸಕರ ಹಿಂಬಾಲಕರು ಗ್ರಾಮದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಲುವಾಗಿ ವರ್ಷದಲ್ಲಿ ನಾಲ್ಕಾರು ಮದುವೆಗಳು ನಡೆದರೆ ಹೆಚ್ಚೆನ್ನುವ ಕಡೆಗಳಿಗೂ ಸಮುದಾಯ ಭವನಗಳನ್ನು, ಮನೆಯಲ್ಲಿಯೇ ದೇವರಿಗೆ ಸರಿಯಾಗಿ ದೀಪ ಹಚ್ಚದಿದ್ದರೂ ಗ್ರಾಮಕ್ಕೊಂದು ದೇವಸ್ಥಾನ ಕಟ್ಟಿಸಿಕೊಡುವಂತೆ ಶಾಸಕರಿಗೆ ದುಂಬಾಲು ಬೀಳುವ ಕಾರಣದಿಂದಾಗಿಯೇ ಇಂದು ಎಲ್ಲೆಂದರಲ್ಲಿ ಮಂಜೂರಾದ ಸಮುದಾಯ ಭವನಗಳು ನಿರ್ವಹಣೆಯಿಲ್ಲದೆ ಹಾಳು ಸುರಿಯುತ್ತಿವೆ. ಇಲ್ಲಿನ ಜಕ್ಕವಳ್ಳಿ ಗ್ರಾಮದಲ್ಲಿ ಕಳೆದ 13 ವರ್ಷಗಳ ಹಿಂದೆ ಆರಂಭಗೊಂಡ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳದೆ ತೆವಳುತ್ತಲೇ ಸಾಗಿದೆ. ಕಾರಣ ರಾಜಕಾರಣ ಅಷ್ಟೇ. ಈ ಗ್ರಾಮ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದಿರುವುದೇ ಹೆಚ್ಚು. ಆದ್ದರಿಂದಲೆ ಕಾಂಗ್ರೆಸ್ ಮುಖಂಡರಾಗಿದ್ದ ಜಿ.ಪುಟ್ಟಸ್ವಾಮಿಗೌಡರು 2001ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1.75 ಲಕ್ಷ ರು.ಗಳನ್ನು ನೀಡಿದ್ದರು.
ಈ ಅನುದಾನದಲ್ಲಿ ಕೇವಲ ಸಮುದಾಯ ಭವನದ ತಳಪಾಯವನ್ನಷ್ಟೇ ಹಾಕಿ ಅನುದಾನ ಸಾಲದ ಕಾರಣ ಕಾಮಗಾರಿ ನಿಲ್ಲಿಸಲಾಯಿತು. ನಂತರದ ವರ್ಷಗಳಲ್ಲಿ ಜೆಡಿಎಸ್ನ ಎಚ್.ಡಿ.ರೇವಣ್ಣ ಶಾಸಕ ಹಾಗೂ ಮಂತ್ರಿಗಳಾದ ಸಂದರ್ಭದಲ್ಲಿ ಹಿಂದಿನ ರಾಜಕೀಯವನ್ನೆಲ್ಲಾ ಬದಿಗಿರಿಸಿ ಕಟ್ಟಡದ ಕಾಮಗಾರಿಗೆ 1.50 ಲಕ್ಷ ರು. ಮಂಜೂರಾಯಿತು. ಈ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿ ಮತ್ತೆ ಮುಂದಿನ ಕೆಲಸ ನಿಂತಿತು. ಈಗ್ಗೆ ಕೆಲ ತಿಂಗಳುಗಳ ಹಿಂದೆ ಅರ್ಧಕ್ಕೆ ನಿಂತ ಇದೇ ಸಮುದಾಯ ಭವನದ ಆರ್.ಸಿ.ಸಿಗಾಗಿ 3 ಲಕ್ಷ ಮಂಜೂರಾಗಿ ಅದೂ ಮುಗಿದು ಮತ್ತೆ ಕಾಮಗಾರಿ ಅರ್ಧಾಂತಿಕವಾಗಿದೆ. ಮರೆಯಾದ ಮೂಲ ಉದ್ದೇಶ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ಸಮುದಾಯ ಭವನಗಳ ಸ್ಥಿತಿ ಇದಾದರೆ, ಇನ್ನು ಇತ್ತೀಚೆಗೆ ಜಿಪಂ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ರಾಜೀವಗಾಂಧಿ ಸೇವಾ ಕೇಂದ್ರಗಳ ಸ್ಥಿತಿ ಕೂಡಾ ಸಮುದಾಯ ಭವನಗಳಿಗಿಂತಲೂ ಭಿನ್ನವಾಗಿಲ್ಲ. ಈ ಕಟ್ಟಡಗಳನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿಯೂ ನಿರ್ಮಿಸಲು ಮುಂದಾಗಿ ವರ್ಷ ಕಳೆದರೂ ಅರ್ಧದಷ್ಟು ಕಟ್ಟಡಗಳ ಕಾಮಗಾರಿ ಕುಂಠಿತಗೊಂಡಿದೆ.
ನೀರಿನಲ್ಲಿ ಹೋಮವಾದ ಅನುದಾನ: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ರಾಜೀವ್ಗಾಂಧಿ ಸೇವಾ ಕೇಂದ್ರವನ್ನು ಅಂತಿಮ ಹಂತದ ಉಳಿದ ಸಣ್ಣ-ಪುಟ್ಟ ಕಾಮಗಾರಿಗಳನ್ನು ಪೂರೈಸಿಕೊಂಡು ತಮ್ಮ ಸುಪರ್ಧಿಗೆ ತೆಗೆದುಕೊಳ್ಳುವಲ್ಲೂ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಹಲವು ರಾಜೀವಗಾಂಧಿ ಸೇವಾ ಕೇಂದ್ರಗಳು ಇನ್ನೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ.
ಗ್ರಾಮ ಪಂಚಾಯ್ತಿ ಪಿಡಿಓಗಳಿಗೆ ಇವು ಬೇಕಿಲ್ಲ, ಇನ್ನು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಇವುಗಳನ್ನು ಪರಿಶೀಲಿಸಿ ಕಾರ್ಯಾರಂಭಗೊಳಿಸುವ ಚೈತನ್ಯ ಇಲ್ಲ. ಇದರಿಂದಾಗಿ ಸರ್ಕಾರ ಮಹತ್ವಾಕಾಂಕ್ಷೆಯಿಂದ ಆರಂಭಿಸಿ ಎಷ್ಟೋ ಯೋಜನೆಗಳು ಹೀಗೆಯೇ ಹಳ್ಳ ಹಿಡಿದು ಅನುದಾನಗಳು ಕೂಡಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

