ದಾಖಲಾತಿ ಪರಿಶೀಲಿಸಿ ನಿವೇಶನ ವಿತರಣೆ
ಚನ್ನರಾಯಪಟ್ಟಣ: ಪಟ್ಟಣ ಪುರಸಭೆ ವತಿಯಿಂದ ಬಡವರಿಗೆ ನೀಡಲು ಉದ್ದೇಶಿಸಿರುವ ನಿವೇಶನಗಳು ಕಳೆದ 15 ವರ್ಷಗಳಿಂದ ಹಂಚಿಕೆಯಾಗದೆ ನೆನೆಗುದಿಗೆ ಬಿದ್ದಿದ್ದು, ಅವುಗಳನ್ನು ತಕ್ಷಣವೇ ಬಗೆಹರಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ನಿವೃತ್ತ ನೌಕರರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೊರವಲಯದ ನಾಗಸಮುದ್ರ, ಕೆರೆ ಬೀದಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಕಳೆದ 15 ವರ್ಷಗಳ ಹಿಂದೆಯೇ ಗುರುತಿಸಿದ್ದು, ಅವುಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡದೆ ನೆನೆಗುದಿಗೆ ಬಿದ್ದಿವೆ.
ನಿವೇಶನದ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಅವರಿಗೆ ನಿವೇಶನದ ಖಾತೆ ಮಾಡಿಸಿ ಉಳಿದ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡುವಲ್ಲಿ ಮುಂದಾಗಲಾಗುವುದು ಎಂದು ತಿಳಿಸಿದರು.
ಹೊರಭಾಗದಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು 500 ಕ್ಕೂ ಹೆಚ್ಚು ನಿವೇಶನಗಳನ್ನಾಗಿ ಪರಿವರ್ತಿಸಿ ಬಡವರಿಗೆ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಮೂರು ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆದಿದೆ ಎಂದು ಹೇಳಿದರು.
ಪುರಸಭೆಯ ಆಡಳಿತವನ್ನು ಚುರುಕುಗೊಳಿಸಿದ್ದು, ಪುರಸಭೆಗೆ ಸಂದಾಯವಾಗಬೇಕಾಗಿದ್ದ ಒಂದು ಕೋಟಿ ತೆರಿಗೆ ಹಣವನ್ನು ವಸೂಲಿ ಮಾಡುವಂತೆ ಬಿಗಿ ಮಾಡಿರುವ ಹಿನ್ನಲೆಯಲ್ಲಿ ತೆರಿಗೆ ವಸೂಲಿಯಾಗಿದ್ದು, ಕೆಲ ಶ್ರೀಮಂತರು ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದ್ದು, ಅವರೇ ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ತೆರಿಗೆ ಸುಧಾರಣಾ ಸಮತಿ ರಚಿಸಲು ಮುಂದಾಗಿದೆ ಎಂದು ನುಡಿದರು.
ಪಟ್ಟಣದ ಪುರಸಭೆಯ ಹಳೆ ಕಚೇರಿಯನ್ನು ನೆಲಸಮಗೊಳಿಸಿ ಆ ಸ್ಥಳದಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಪ್ರಯಾಣಿಕರ ತಂಗುದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಪುರಸಭೆಯ ಎದುರಿನಲ್ಲಿರುವ ಪಶು ವೈದ್ಯ ಕಚೇರಿ ಮುಂಭಾಗ ಹಾಗೂ ಮೈಸೂರು ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗುವುದು.
ಶ್ರವಣಬೆಳಗೊಳದ ತಾಲೂಕು ಪಂಚಾಯಿತಿಯ ವ್ಯಾಪ್ತಿಯಲ್ಲಿನ ನಿವೇಶನದಲ್ಲಿ 30ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ನಗರಸಭೆಯಾಗಿ ಪರಿವರ್ತನೆ: ಪಟ್ಟಣದ ಪುರಸಭೆಗೆ ಸರ್ಕಾರದಿಂದ ಬರುತ್ತಿರುವ ಅನುದಾನದ ಕೊರತೆಯಿದ್ದು, ಪಟ್ಟಣದ ಜನಸಂಖ್ಯೆ 44 ಸಾವಿರ ಮೀರಿರುವುದರಿಂದ ಪಟ್ಟಣದ ಸೌಲಭ್ಯಗಳನ್ನು ಪಡೆಯುತ್ತಿರುವ ಗ್ರಾಮಗಳನ್ನು ಪುರಸಭೆಗೆ ಸೇರಿಸಿಕೊಂಡು ನಗಸಭೆಯಾಗಿ ಪರಿವರ್ತಿಸುವಂತೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಇದರ ಜತೆಗೆ ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಸಭೆಯಾಗಿ ಪರಿವರ್ತಿಸುವಂತೆ ಒತ್ತಾಯಿಸಿಲಾಗಿದೆ ಎಂದು ತಿಳಿಸಿದರು.
ನಿವೃತ್ತ ಅಪರ ಜಿಲ್ಲಾಧಿಕಾರಿ ನಾಗಪ್ಪ ಮಾತನಾಡಿ ನಿವೃತ್ತ ನೌಕರರಿಗೆ ಸಿಗುತ್ತಿರುವ ಪಿಂಚಣಿ ಅವರ ಹೊಟ್ಟೆ ಸಾಕಲು ಕಷ್ಠಕರವಾಗಿದೆ. 60ರ ಬಳಿಕ ಹಲವು ಖಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಸರ್ಕಾರ ಆರೋಗ್ಯ ಚಿಕಿತ್ಸಾ ನೆರವಿಗೆ ಶಾಶ್ವತ ಯೋಜನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂಚ.ಎಂ ಗೌಡಯ್ಯ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

