ಹಾಸನ

ವಾಲ್ಮೀಕಿ ಭವನ ಕಾಮಗಾರಿ ಶೀಘ್ರ ಪೂರ್ಣಕ್ಕೆ ಸಂಘ ಆಗ್ರಹ

Published On :

ಮೈಸೂರು: ವಿಜಯನಗರದ 2ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನದ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸುವಂತೆ ವಿನಾಯಕನಗರದ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ಸುಮಾರು 4.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ಪ.ಪಂಗಡ ಕಲ್ಯಾಣ ಇಲಾಖೆಯು ಎಂಡಿಎಗೆ 2010 ನವೆಂಬರ್ 26ರಲ್ಲೆ 98 ಲಕ್ಷ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಹಾಗೂ ನಿರ್ಮಾಣ ಕಾರ್ಯ ಆರಂಭಿಸಿ ಎರಡು ವರ್ಷಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದರೂ ಸಹ, ಎಂಡಿಎ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಾಮಗಾರಿಯು ಮಂದಗತಿಯಿಂದ ಸಾಗುತ್ತಿರುವುದಕ್ಕೆ ಸಂಘದ ಕಾರ್ಯದರ್ಶಿ ಪಡುವಾರಹಳ್ಳಿ ಎಂ. ರಾಮಕೃಷ್ಣ ವಿಷಾದಿಸಿದ್ದಾರೆ.ಜಿಲ್ಲಾಡಳಿತವು ಕೂಡಲೆ ಭವನ ನಿರ್ಮಾಣ ಕಾರ್ಯದ ಬಗ್ಗೆ ಗಮನಹರಿಸಿ ಶೀಘ್ರವಾಗಿ ವಾಲ್ಮೀಕಿ ಭವನ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ಲೋಕಸಭೆ: ಮಲೆನಾಡಿನ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ
ಸಕಲೇಶಪುರ: ಬರುವ ಲೋಕಸಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಲೆನಾಡಿನ ವ್ಯಕ್ತಿಗೆ ಟಿಕೆಟ್‌ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಕೆ.ಬಿ. ಚಂದ್ರು ಆಗ್ರಹಿಸಿದ್ದಾರೆ.
 ರಾಜೀವ್‌ಗಾಂಧಿ ಘಟಕದ ವತಿಯಿಂದ ತಾಲೂಕಿನ ಬಿರಡಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾ ಮತ್ತು ತಾಲೂಕು ಹಿರಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಮಲೆನಾಡಿನ ವ್ಯಕ್ತಿಗೆ ಪಕ್ಷದ ವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡಿಲ್ಲ. ಪಕ್ಷದಿಂದ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಹೇಳಿದರು. ಮಲೆನಾಡಿನ ಸಮಸ್ಯೆಗಳು ಮಿತಿಮೀರಿವೆ, ಕಾಡಾನೆ, ಕಾಡುಪ್ರಾಣಿ ಹಾವಳಿ, ಬೆಳೆಗಾರರ ಸಮಸ್ಯೆ, ರಸ್ತೆ, ನೀರು, ವಿದ್ಯುತ್, ಸಾರಿಗೆ, ಅರೋಗ್ಯ ಸೇರಿದಂತೆ ಅನೇಕ ಪ್ರಮುಖ ಸಮಸ್ಯೆಗಳಿಂದ ಜನರು ತತ್ತರಿಸುತ್ತಿದ್ದಾರೆ, ಆದರೆ ಇಲ್ಲಿನ  ಸಮಸ್ಯೆಗಳು ಹಾಲಿ ಎಂಪಿ ಗಳಿಗೆ ಅರ್ಥವಾಗುತ್ತಿಲ್ಲ ಎಂದ ಅವರು,  ಈ ಭಾಗದ ಜನರ ಸಮಸ್ಯೆಗಳು ಪರಿಹಾರವಾಗಲು ಇಲ್ಲಿಯ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ಹೇಳಿದರು.  ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಸ್ ಎಂ ಆನಂದ್, ಶಾಸಕ ವೈ.ಎನ್. ರುದ್ರೇಶ್‌ಗೌಡ, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಸದಾಶಿವ ಭಂಡಾರಿ, ಎಚ್ .ಬಿ.ಕಾಂತರಾಜ್ ಇದ್ದರು.

30 ನೇ ವಾರ್ಡ್ ಕಸದ ಸಮಸ್ಯೆ ಕುರಿತು ಚರ್ಚೆ
ಹಾಸನ: ನಗರದ 30 ನೇ ವಾರ್ಡ್ ವಿಶ್ವನಾಥನಗರ ಸಮುದಾಯ ಭವನದಲ್ಲಿ ವಾರ್ಡ್ ಸಭೆ ನಡೆಸಿ   ಕಸದ ಸಮಸ್ಯೆ ಮತ್ತು ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.
  ಸಭೆಯಲ್ಲಿ ಮೂಲಭೂತ ಸೌಲಭ್ಯಗಳು, ಕಸ ಸಮಸ್ಯೆಗಳ ಬಗ್ಗೆ  ಚರ್ಚಿಸಿ ಮುಂದಿನ ದಿನಗಳಲ್ಲಿ  ನಗರಸಭೆ ಜತೆಗೂಡಿ ವಾರ್ಡಿನಲ್ಲಿ ಸ್ವಚ್ಛತಾ ಆಂದೋಲನ    ಹಮ್ಮಿಕೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.
  ನಗರಸಭೆ ಸದಸ್ಯೆ ಶುಭಾ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ  ಅಮೀರ್‌ಜಾನ್, ಕೆವೈಡಿಎಸ್‌ಎಸ್‌ಸಿ ಜಿಲ್ಲಾದ್ಯಕ್ಷ  ಸಿ.ಕ್ರಾಂತಿ  ಪ್ರಸಾದ್‌ತ್ಯಾಗಿ, ಮಾದಿಗ ದಂಡೋರ  ನಗರಾಧ್ಯಕ್ಷ ಸೋಮು, ವಾರ್ಡಿನ ಮುಖಂಡರು ಮತ್ತು ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.