ಹಾಸನ

18 ಪ್ರಕರಣಗಳ ಆರೋಪಿ ಬಂಧನ

Published On :

ಹಾಸನ: ಮನೆ ಮತ್ತು ಸರಗಳ್ಳತನ ಮುಂತಾಗ 18 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದು, ಆತನಿಂದ 18 ಲಕ್ಷ ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿ ಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಣ್ಣನವರ್ ತಿಳಿಸಿದರು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಆಡುವಳ್ಳಿ ಬಡಾವಣೆಯ ವಿಜಯಕುಮಾರ್ (29)ನನ್ನು ಬಂಧಿಸಿದ್ದು, ಈತ ನಗರದ ನಾನಾ ಬಡಾವಣೆಗಳಲ್ಲಿ ಮನೆ ಹಾಗೂ ಮಹಿಳೆಯರಿಂದ ಸರ ಕಸಿದುಕೊಳ್ಳುವ ಪ್ರಕರಣಗಳಲ್ಲೂ ಭಾಗಿಯಾಗಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.  ಈತನ ಸಹಚರ ತಲೆಮರೆಸಿಕೊಂಡಿದ್ದು, ಸದ್ಯದಲ್ಲೇ ಬಂಧಿಸಲಾಗುವುದು. ಆರೋಪಿ ಕಳ್ಳತನಕ್ಕೆ ಬಳಸುತ್ತಿದ್ದ ಟಿವಿಎಸ್ ಮೊಪೆಡ್, ಕಬ್ಬಿಣದ ರಾಡು ಹಾಗೂ ಸ್ಕ್ರೂಡ್ರೈವರ್ ವಶಕ್ಕೆ ಪಡೆಯಲಾಗಿದೆ ಎಂದರಲ್ಲದೇ, ಪತ್ತೆಹಚ್ಚಲು ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದರು. ಡಿವೈಎಸ್‌ಪಿ ಪರಮೇಶ್, ಎಚ್.ಭೀಮಕ್ಕನವರ್ ಇದ್ದರು.

ಲೋಕಕಲ್ಯಾಣಾರ್ಥ ಗಣಹೋಮ
ಹಾಸನ: ಪಟ್ಟಣದ ಪ್ರಸನ್ನ ಗಣಪತಿ ಮಂಟಪದಲ್ಲಿ 72 ನೇ ವರ್ಷದ ಮಹೋತ್ಸವದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಗಣಪತಿ ಹೋಮ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿವಿಧ ಮಂತ್ರ ಘೋಷಗಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಂಡಿತು. ಮೋದಕ ಪ್ರಿಯ ಗಣಪತಿಗೆ ಅಷ್ಟಾವಧಾನ ಸೇವೆ ಮತ್ತು ಮಹಾ ಮಂಗಳಾರತಿ ನಡೆಯಿತು. ನೂರಾರು  ಋತ್ವಿಕರು ವೇದಘೋಷಗಳನ್ನು ಪಠಿಸಿ ಕಾರ್ಯಕ್ರಮಕ್ಕೆ ಕಳೆಗಟ್ಟಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಪುರಸಭಾ ಅಧ್ಯಕ್ಷ ಮನೋಜಕುಮಾರ್, ಮಂಡಳಿ ಅಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ಶಾಂತವೀರಪ್ಪ, ಉದ್ಯಮಿ ಅರುಣಕುಮಾರ್, ರಂಗನಾಥ್ ಹೆಬ್ಬಾರ್, ಚಲನಚಿತ್ರ ನಟ ದೊಡ್ಡಣ್ಣ, ರಾಜಣ್ಣ, ಅಶೋಕ್,  ನಾಗಭೂಷಣ, ವಿಪ್ರ ಮಂಜು, ಪಾರ್ಥಸಾರಥಿ, ಶೈಲೇಂದ್ರ, ವಿದ್ಯಾಧರ ಇನ್ನಿತರರು ಇದ್ದರು.

ಇಂದಿನಿಂದ ಶಿಕ್ಷಣ ಅದಾಲತ್
ಹಾಸನ: ಅಕ್ಟೋಬರ್ 22 ರಿಂದ  26 ರ ವರೆಗೆ ತಾಲೂಕುವಾರು ಶಿಕ್ಷಣ ಅದಾಲತ್ ಕಾರ್ಯಕ್ರಮದ ಅಡಿಯಲ್ಲಿ ಬಕಾಕಿ ಇರುವ ಕಡತಗಳ ವಿಲೇವಾರಿಗೆ ನಿಗದಿತ ದಿನಗಳಂದು ತಾಲೂಕುವಾರು  ಶಿಕ್ಷಣ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಶಿಕ್ಷಕರು ಕಚೇರಿಗಳಲ್ಲಿ  ಯಾವುದೇ  ಕೆಲಸಗಳು ಬಾಕಿ ಉಳಿದಿದ್ದಲ್ಲಿ ನಿಮ್ಮ ಅಹವಾಲನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ  ನಿಗದಿತ ದಿನಾಂಕದಒಳಗಾಗಿ ಸಲ್ಲಿಸುವಂತೆ ತಿಳಿಸಿದೆ. ಶಿಕ್ಷಣ ಅದಾಲತ್ ಅ.22 ರಂದು ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ, ಅ.23 ರಂದು ಅರಕಲಗೂಡು, ಅ.24 ರಂದು ಅರಸೀಕೆರೆ ಮತ್ತು  ಬೇಲೂರು, ಅ.25 ರಂದು ಚನ್ನರಾಯಪಟ್ಟಣ ಮತ್ತು ಸಕಲೇಶಪುರ, ಅ.26 ರಂದು ಆಲೂರು ಮತ್ತು  ಹೊಳೆನರಸೀಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ.

ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ
ಹಾಸನ: ಜಿಲ್ಲಾ ನೆಹರು ಯುವ ಕೇಂದ್ರ ಪ್ರಸಕ್ತ ಸಾಲಿನ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಆಲೂರು ತಾಲೂಕಿನಲ್ಲಿ ಅ. 21 ರಿಂದ ಪ್ರಾರಂಭಿಸಿದ್ದು, 25 ರವರೆಗೆ ವ್ಯವಸ್ಥ್ಥೆಗೊಳಿಸಲಾಗಿದೆ. ಸಂಯೋಜಿಸಲ್ಪಟ್ಟಿರುವ ಸಂಘ, ಮಂಡಳಿಗಳಿಗೆ ಭೇಟಿ ನೀಡಿ ಅವುಗಳ ಕಾರ್ಯಚಟುವಟಿಕೆ ಸಾಮಾಜಿಕ ಸಮಸ್ಯೆ, ಅಭಿವೃದ್ಧಿ ಕುರಿತಾದ ವಿಷಯಗಳ ಬಗ್ಗೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಕೊನೆಯ ದಿನದಂದು ಯುವ ಜನರ ಸಭೆಯನ್ನು  ತಾಲೂಕು ಹಾಗೂ ಹೋಬಳಿ ಕೇಂದ್ರ ಸ್ಥಾನದಲ್ಲಿ ನಡೆಸಲಿದ್ದಾರೆ.

ಇಂದು ಮಹಿಳಾ ಕಬಡ್ಡಿ ಪಂದ್ಯಾವಳಿ
ಹಾಸನ: ಗೊರೂರು ಎಎನ್‌ಪುರದ ರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಅ. 22 ರಂದು ಬೆಳಗ್ಗೆ 9ಕ್ಕೆ   ಮೈಸೂರು ವಿಶ್ವವಿದ್ಯಾಲಯದ ಮಲೆನಾಡು ವಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ಎ.ಎನ್.ವಿ. ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಯೋಗ ನರಸಿಂಹಸ್ವಾಮಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎ.ಜಿ. ರಾಮನಾಥ್ ಪಂದ್ಯಾವಳಿ ಉದ್ಘಾಟಿಸುವರು. ಹೇಮಾವತಿ ಪವರ್ ಅಂಡ್ ಟೈಟ್ಲ್ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ.ಎ. ವೇಣುಗೋಪಾಲ್, ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಎಸ್. ಜೋಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಾಂಶುಪಾಲ ಡಾ.ಎಂ.ಆರ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು.

ವಿದ್ಯಾರ್ಥಿ ನಿಲಯಕ್ಕೆ ಸಹಾಯಧನ
ಹಾಸನ: ನಗರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದವರು ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ  ಮೈಸೂರಿನ ಕೆ.ಎಂ. ಶೇಷಣ್ಣ 30 ಸಾವಿರ ರು. ದಾನ ಕೊಟ್ಟಿರುವುದಾಗಿ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ತಿಳಿಸಿದ್ದಾರೆ.

ಪೌಷ್ಟಿಕ ಆಹಾರ ಕಾರ್ಯಕ್ರಮ
ಹಾಸನ: ನಗರದ ಯತೀಂದ್ರ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಚಾರ್ಯ ಎ.ಕೆ. ಕೆಂಚಪ್ಪ ಪೌಷ್ಟಿಕ ಆಹಾರ ಪ್ರಾಮುಖ್ಯತೆ ಹಾಗೂ ಅಪೌಷ್ಟಿಕತೆ ತಡೆಯುವಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ತಿಳಿಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಕೆ.ಎಸ್. ನಾರಾಯಣ ಮಾತನಾಡಿದರು.

ವಿವಿಧ ತರಬೇತಿ
ಮೈಸೂರು: ಚಾಮರಾಜ ಮೊಹಲ್ಲಾದಲ್ಲಿರುವ ನವೋದಯ ಫೌಂಡೇಷನ್‌ನಲ್ಲಿ ಎಂಬಿಎ, ಸಿ- ಮ್ಯಾಟ್- 2014ರ ಪ್ರವೇಶ ಪರೀಕ್ಷೆಗೆ ತಾರ್ಕಿಕ ಗಣಿತ, ಅರ್ಥಶಾಸ್ತ್ರ, ಮಾರ್ಕೆಟಿಂಗ್, ಕಂಪ್ಯೂಟರ್, ಇಂಗ್ಲಿಷ್ ಮತ್ತು ಸಾಮಾನ್ಯ ವಿಷಯಗಳ ಬಗ್ಗೆ 50 ದಿನಗಳ ತರಬೇತಿ ನೀಡಲಿದ್ದು, ಆಸಕ್ತರು ಅ.22ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 97418 69722 ಸಂಪರ್ಕಿಸಬಹುದು.
ದತ್ತನಗರದಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅ.24ರಿಂದ 27ರವರೆಗೆ ಇಂಗ್ಲಿಷ್ ಮಾಧ್ಯಮಕ್ಕೆ ಬೆಳಗ್ಗೆ 6.30ಕ್ಕೆ, ಕನ್ನಡ ಮಾಧ್ಯಮಕ್ಕೆ ಸಂಜೆ 6ಕ್ಕೆ ದತ್ತ ಕ್ರಿಯಾ ಯೋಗದ ತರಗತಿ ನಡೆಸಲಿದ್ದು, ಆಸಕ್ತರು ಮೊ. 96805 96457 ಸಂಪರ್ಕಿಸಬಹುದು. ದಿ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯಿಂದ ಕರಿಯರ್ ಇನ್ ಸಾಫ್ಟ್‌ವೇರ್ ಟೆಸ್ಟಿಂಗ್ ತರಬೇತಿ ನೀಡಲಿದ್ದು, ಕೋರ್ಸ್ ಮ್ಯಾನ್ಯೂವಲ್ ಟೆಸ್ಟಿಂಗ್ ಹಾಗೂ ಲೇಟೆಸ್ಟ್ ಆಟೋಮೇಷನ್ ಟೂಲ್ಸ್ ಅನ್ನು ಒಳಗೊಂಡಿರುತ್ತದೆ. ಆಸಕ್ತರು ಮೊ. 99455 00027 ಸಂಪರ್ಕಿಸಬಹುದು. ಮೊ. 94819 15991 ಸಂಪರ್ಕಿಸಬಹುದು. ಟಿ.ಕೆ. ಲೇಔಟ್‌ನಲ್ಲಿರುವ ಯೂನಿಕಾನ್ ಇನ್‌ಸ್ಟಿಟ್ಯೂಟ್ ಎರಡು ದಿನಗಳ ಬೇಸಿಕ್ ಕಂಪ್ಯೂಟರ್ ಕಾರ್ಯಾಗಾರ ನಡೆಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.