ಹಾಸನ

ಸ್ವಚ್ಛತಾ ಆಂದೋಲನಕ್ಕೆ ಮುನ್ನುಡಿ

Published On :

ಹಾಸನ: ನಗರಸಭೆಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸ್ವಚ್ಛತಾ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ನಗರದ ಹೇಮಾವತಿ ಪ್ರತಿಮೆ ಬಳಿ ಶಾಸಕ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ವತ: ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಮುನ್ನಡಿ ಬರೆದರು. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮಿಜಿ ಸಾನಿಧ್ಯ ವಹಿಸಿ ಪ್ರೇರಣೆ ನೀಡಿದರು.
ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಆಂದೋಲನಾ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು ಸೇರಿದಂತೆ ನಾನಾ ಸಂಘಟನೆಗಳ ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರು, ಸ್ವಯಂ ಸೇವಕರು, ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳು, ಜಿಲ್ಲಾ ಸಶಸ್ತ್ರ ಪಡೆ ತರಬೇತಿ ಪೊಲೀಸರು, ರಾಜ್ಯ ಮೀಸಲು ಪಡೆ ಸಿಬ್ಬಂದಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿ ನಗರದ ಮಹಾರಾಜ ಪಾರ್ಕ್ ಆವರಣ ಸ್ವಚ್ಛಗೊಳಿಸಿದರು.
ಮೊದಲ ದಿನ 1ರಿಂದ 12ನೇ ವಾರ್ಡ್ ಸ್ವಚ್ಛತಾ ಕಾರ್ಯ ನಡೆಸಿದರು. 13ರಿಂದ 25ನೇ ವಾರ್ಡ್ ನ ಸ್ವಚ್ಛತಾ ಕಾರ್ಯವನ್ನು ಅ.22 ರಂದು ಮತ್ತು 26 ರಿಂದ 35ನೇ ವಾರ್ಡ್‌ನ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಈ ಕಾರ್ಯಕ್ಕೆ 12 ಟಿಪ್ಪರ್ ಲಾರಿಗಳು, 70 ಟ್ರ್ಯಾಕ್ಟರ್‌ಗಳು ಹಾಗೂ 40 - 45 ಸೂಪರ್‌ವೈಸರ್‌ಗಳು ಕಾರ್ಯನಿರ್ವಹಿಸುವರು. ಈ ಕಾರ್ಯಕ್ಕೆ ಅವಶ್ಯಕ ಬೇಕಾದ ಬಕೆಟ್, ಕೈ ಕವಚ, ಬಾಯಿಗೆ ಮಾಸ್ಕ್‌ಗಳನ್ನು ನೀಡಲಾಗಿತ್ತು.
ಪ್ಲಾಸ್ಟಿಕ್ ಮುಕ್ತ ನಗರ:  ಅ.24 ರಿಂದ ಹಾಸನಾಂಬ ದೇವಿಯ ದರ್ಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್‌ನ್ನು ನಿಷೇಧಿಸುವುದು ಹಾಗೂ ಭಕ್ತಾಧಿಗಳು ತರುವ ಪ್ಲಾಸ್ಟಿಕ್ ಕವರ್ ಪಡೆದುಕೊಂಡು ಅವರಿಗೆ ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಈ ಮೂಲಕ ಪ್ಲಾಸ್ಟಿಕ್ ಮುಕ್ತ ನಗರವಾಗಿಸುವ ಉದ್ದೇಶ ಹೊಂದಲಾಗಿದೆ.   ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ನಗರ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು, ಸ್ವಯಂ ಸೇವಕರು, ಅಧಿಕಾರಿಗಳು ಕೈ ಜೋಡಿಸಿರುವುದು ಅಭಿನಂದನಾರ್ಹ. ಸಾರ್ವಜನಿಕರ ಸಹಕಾರವಿಲ್ಲದೆ ನಗರದ ಸಂಪೂರ್ಣ ಸ್ವಚ್ಛತೆ ಸಾಧಿಸುವುದು ಕಷ್ಟ. ಸ್ಥಳೀಯರು ಹಾಗೂ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಹಾಕದೆ ಅದಕ್ಕಾಗಿ ಮೀಸಲಿರಿಸಿರುವ ತೊಟ್ಟಿಗಳಲ್ಲಿ ಕಸ ಹಾಕಬೇಕು ಎಂದರು. ನಗರದ ಕಲ್ಯಾಣ ಮಂಟಪ ಹಾಗೂ ಇತರೆಡೆಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಬೋರ್ಡ್‌ಗಳನ್ನು ಅಳವಡಿಸಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ನಗರ ಸ್ವಚ್ಛತೆಗೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದಾಗಿರುವುದು ಶ್ಲಾಘನೀಯ ಎಂದ ಅವರು, ನಗರಸಭೆ ಅಧಿಕಾರಿಗಳಿಗೆ ಇದು ಎಚ್ಚರಿಕೆಯಾಗಿದೆ. ಮುಂದಿನ ದಿನಗಳಲ್ಲಿ ನಗರಸಭೆ ಮತ್ತಷ್ಟು ಜಾಗೃತಿಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕಾಗುತ್ತದೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಸ್ವಚ್ಛತಾ ಬಗ್ಗೆ ಪ್ರಜ್ಞೆ ಮೂಡಬೇಕಿದೆ. ತಮ್ಮ ಮನೆ, ನೆರೆಹೊರೆಯನ್ನು ಸ್ವಚ್ಛಗೊಳಿಸಿಟ್ಟುಕೊಂಡರೆ ಇತರರಿಗೂ ಅನುಕೂಲ.  ಸಾರ್ವಜನಿಕರು ಈ ಬಗ್ಗೆ ಹೊಣೆಗಾರಿಕೆ ಪ್ರದರ್ಶಿಸಬೇಕಿದೆ ಎಂದು ಹೇಳಿದರು. ಉಪಾಧ್ಯಕ್ಷ ಇರ್ಷಾದ್‌ಪಾಷ, ಸದಸ್ಯರಾದ ಅಂಬಿಕ ರವಿಶಂಕರ್, ಎಚ್.ಎಸ್.ಅನಿಲಕುಮಾರ್, ಪ್ರಸನ್ನ ಕೃಷ್ಣಮೂರ್ತಿ, ಗೋಪಾಲ್ ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ನಗರಸಭೆ ಆಯುಕ್ತ ನಾಗಭೂಷಣ್ ಹೆಬ್ಬಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.