ಜೆಡಿಎಸ್ ಶಾಸಕರಿಂದ ಸಭೆ ಬಹಿಷ್ಕಾರ
ಕನ್ನಡಪ್ರಭ ವಾರ್ತೆ ಹಾಸನ ಅ. 22
ಜಿಲ್ಲಾದ್ಯಂತ ಇರುವ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಇಲಾಖೆ ಕಾರ್ಯ ವೈಖರಿ ಬಗ್ಗೆ ಪರಾಮರ್ಶೆ ನಡೆಸಲು ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕರೆದಿದ್ದ ಸಭೆಗೆ ಆರೋಗ್ಯ ಸಚಿವರು ನಾಲ್ಕು ತಾಸು ವಿಳಂಬವಾಗಿ ಬಂದ ಕಾರಣ ಜೆಡಿಎಸ್ ಶಾಸಕರು ಸಭೆ ಬಹಿಷ್ಕರಿಸಿದರು.
ಸಭೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು 4 ತಾಸು ತಡವಾಗಿ ಬಂದರು. ಬಂದ ಮೇಲೆ ಸಚಿವರು ವಿಳಂಬಕ್ಕೆ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಇದರಿಂದ ಬೇಸತ್ತ ಜೆಡಿಎಸ್ ಶಾಸಕರು ಸಚಿವರಿಗೆ ಸಮಸ್ಯೆಗಳ ಬಗ್ಗೆ ಕೇವಲ ಮನವಿ ಸಲ್ಲಿಸಿ ಸಭೆ ಬಹಿಷ್ಕರಿಸಿ ಹೊರ ನಡೆದರು.
ಆಹ್ವಾನ ಪತ್ರಿಕೆ ಪ್ರಕಾರ ಸಭೆ ಬೆಳಿಗ್ಗೆ 10ಕ್ಕೆ ಆರಂಭವಾಗಬೇಕಿತ್ತು. ಎಲ್ಲಾ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಗೆ ಸರಿಯಾದ ಸಮಯಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತು. ವಿಪರ್ಯಾಸ ಅಂದ್ರೆ..ಬೆಳಗ್ಗೆ 10ಕ್ಕೆ ಬರಬೇಕಾದ ಆರೋಗ್ಯ ಸಚಿವರು ಖಾಸಗಿ ಕಾರ್ಯಗಳಲ್ಲಿ ಪಾಲ್ಗೊಂಡು ಮಧ್ಯಾಹ್ನ 1.30ಕ್ಕೆ ಸಭೆಗೆ ಆಗಮಿಸಿದರು.
ಇದರಿಂದ ಬೇಸತ್ತ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸಚಿವರಿಗೆ ಮನವಿ ನೀಡಿ ಸಭೆಯಲ್ಲಿ ಹೊರ ನಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಎ.ಮಂಜು ಹಾಗೂ ರುದ್ರೇಶಗೌಡರು ಸಹ ಬೆಳಗ್ಗೆ ಬೇಗನೆ ಬಂದು ಸಚಿವರಿಗಾಗಿ ಕಾದು ಕಾದು ಸುಸ್ತಾದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಹಾಗೂ ಉಪಾಧ್ಯಕ್ಷ ಬಿಳಿ ಚೌಡಯ್ಯ, ಇಲಾಖೆಯ ಎಲ್ಲಾ ಅಧಿಕಾರಿಗಳು ಸಚಿವರಿಗಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದರು. ಸಭೆಗೆ ಆಗಮಿಸಿದ್ದ ಶಾಸಕರು ಸರ್ಕಾರಿ ಸಭೆಯನ್ನು ಆಯೋಜಿಸಿ ಆರೋಗ್ಯ ಸಚಿವರು ಖಾಸಗಿ ಹಾಗೂ ಪಕ್ಷದ ಕಾರ್ಯಕ್ಕೆ ಹೋಗಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಜಿಲ್ಲೆಯಲ್ಲಿನ ಆರೋಗ್ಯ ಸಮಸ್ಯೆಗಳನ್ನು ಸಚಿವರಿಗೆ ತಿಳಿಸಲು ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಗ್ಗೆ 8.30ಕ್ಕೆ ಸಭೆಗೆ ಆಗಮಿಸಿದರೆ ಮಧ್ಯಾಹ್ನ 1.30 ಆದರೂ ಸಚಿವರು ಬರಲಿಲ್ಲ. ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ತಡವಾಗಿ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಆರೋಗ್ಯ ಇಲಾಖೆ ಸಚಿವರು ಸಹ ನಾಲ್ಕು ತಾಸು ತಡವಾಗಿ ಆಗಮಿಸಿದ್ದು ವಿಪರ್ಯಾಸ. ಸರ್ಕಾರಿ ಸಭೆಯನ್ನು ಆಯೋಜಿಸಿ ಸಚಿವರು ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸುವುದು ಸರಿಯಲ್ಲ. ಸಭೆ ನಂತರ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು
- ಶಾಸಕ ಎಚ್.ಕೆ.ಕುಮಾರಸ್ವಾಮಿ
ಬೆಳಗ್ಗೆ 10ಕ್ಕೆ ಸಭೆಯನ್ನು ಆಯೋಜಿಸಿ ಸಭೆ ನಡೆಸಬೇಕಾದ ಸಚಿವರೇ ನಾಲ್ಕು ತಾಸು ತಡವಾಗಿ ಬಂದರೆ ಆರೋಗ್ಯ ಇಲಾಖೆಯ ಸಮಸ್ಯೆಗಳು ಹೇಗೆ ಬಗೆಹರಿಯಲು ಸಾಧ್ಯವಾಗುತ್ತದೆ. ಕೇವಲ ನಾವಲ್ಲದೆ ಕಾಂಗ್ರೆಸ್ ಶಾಸಕರು ಸಹ ಸಚಿವರಿಗಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾದ್ದು ವಿಪರ್ಯಾಸ
- ಪಟೇಲ್ ಶಿವರಾಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

