30 ವರ್ಷ ಮೀರಿದವರಿಗೆ ಆರೋಗ್ಯ ಉಚಿತ ತಪಾಸಣೆ
ಚನ್ನರಾಯಪಟ್ಟಣ: ರಾಜ್ಯದಲ್ಲಿ 30 ವರ್ಷ ಮೀರಿದವರಿಗೆ ಆರೋಗ್ಯ ತಪಾಸಣೆ ಉಚಿತವಾಗಿ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 30 ವರ್ಷ ದಾಟಿದ ಶೇ.50ಕ್ಕೂ ಹೆಚ್ಚು ಮಂದಿಗೆ ಯಾವುದಾದರೊಂದು ರೋಗವಿರುವ ಸೂಚನೆಗಳು ಕಾಣಿಸಿ ಕೊಳ್ಳುತ್ತಿದ್ದು, ಇದನ್ನು ತಿಳಿಯದೆ ಜನತೆ ಕೆಲ ರೋಗಗಳನ್ನು ಉಲ್ಪಣ ಮಾಡಿಕೊಳ್ಳುತ್ತಿದ್ದಾರೆ.
30 ರ ನಂತರ ಕಾಣಿಸಿಕೊಳ್ಳುವ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ರೋಗಗಳ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆಯಾ ವ್ಯಾಪ್ತಿಗೆ ಬರುವ ಎಲ್ಲಾ ಮನೆಗಳಿಗೆ ತೆರಳಿ ಅವರಿಗೆ ಆರೋಗ್ಯ ಉಚಿತ ತಪಾಸಣೆ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಆರೋಗ್ಯ ತಪಾಸಣೆ ನಂತರ ಈ ಬಗ್ಗೆ ಅವರಿಗೆ ಮಾಹಿತಿ ನೀಡುವ ಜತೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಲು ತಕ್ಕ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಸಹ ಕಲ್ಪಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿಂದು ಒಂದೇ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಬೇರೆ ಬೇರೆ ಚಿಕಿತ್ಸೆಗೆ ಆಸಕ್ತಿ ತೋರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಯುರ್ವೇದಿಕ್, ಯುನಾನಿ, ಹೋಮಿಯೋಪತಿ ಕೇಂದ್ರಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಕಡಿಮೆ ದರದಲ್ಲಿ ಔಷಧಿ ನೀಡುವ ಸಲುವಾಗಿ ಪ್ರತ್ಯೇಕ ವಿಭಾಗ ತೆರೆಯುವ ಉದ್ದೇಶವಿದೆ ಎಂತಲೂ ತಿಳಿಸಿದರು.
ಸಿಬ್ಬಂದಿ ನೇಮಕ: ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ 3500ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಹೈ.ಕರ್ನಾಟಕ ಸಮಿತಿ ಅಡ್ಡ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಖಾಲಿಯಿರುವ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿ ಬಗ್ಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಹೈ.ಕರ್ನಾಟಕ ಭಾಗಕ್ಕೆ 371ನೇ ವಿಧಿಯ ಪ್ರಕಾರ ನೀಡಬೇಕಾಗಿರುವ ಮೀಸಲಾತಿ ಪ್ರಕಟಿಸಿ ನಂತರ ನೇಮಕಾತಿ ಮಾಡಿ ಎಂಬ ಕೂಗು ಕೇಳಿ ಬರುತ್ತಿರುವುದರಿಂದ ಅಲ್ಪ ಹಿನ್ನಡೆಯಾಗಿದೆ ಎಂದು ವಿವರಿಸಿದರು.
ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಸದ್ಯದಲ್ಲಿಯೇ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸಲಾಗುವುದು ಎಂದ ಅವರು ವೈದ್ಯರಿಗೆ ಎರಡು ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕೂಡ ಆಸಕ್ತಿ ತೋರಬೇಕಾಗಿದೆ ಎಂದು ತಿಳಿಸಿದರು. ತಾಯಿ ಮಗು ಸುರಕ್ಷಿತವಾಗಿ ಮನೆಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಗರ್ಭಿಣಿಯರನ್ನು 108 ಅಂಬುಲೆನ್ಸ್ನಲ್ಲಿ ಕರೆತರುವ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗೆ ಬಂದ ಕೆಲವರು ಸಾರಿಗೆ ಬಸ್ ಹಾಗೂ ಆಟೋದಲ್ಲಿ ತೆರಳುವ ಸಂದರ್ಭದಲ್ಲಿ ಅವರಿಗೆ ಸೊಂಕು ಕಾಣಿಸಿಕೊಳ್ಳುವುದಲ್ಲದೆ, ಇನ್ನೂ ಹಲವು ತೊಂದರೆಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಮುಖ್ಯಮಂತ್ರಿಗಳೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಗೆ ಖಾದರ್ ಭೇಟಿ
ಹಾಸನ: ಆರೋಗ್ಯ ಸಚಿವ ಯು.ಟಿ.ಖಾದರ್ ಮಂಗಳವಾರ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು, ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಸಾರ್ವಜನಿಕರಿಂದಲೂ ಮಾಹಿತಿ ಪಡೆದರು.
ವೈದ್ಯಕೀಯ ಕಾಲೇಜು ಇರುವುದರಿಂದ ಗರಿಷ್ಠ ಪ್ರಮಾಣದ ವೈದ್ಯಕೀಯ ಸೌಲಭ್ಯ ಆಸ್ಪತ್ರೆಯಲ್ಲಿದ್ದು ಅದನ್ನು ಸಾರ್ವಜನಿಕರಿಗೆ ತಲುಪಿಸಿ ಯಾರನ್ನೂ ಸತಾಯಿಸಬೇಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಬಡ ರೋಗಿಗಳ ಬಗ್ಗೆ ಖಾಳಜಿ ಇರಲಿ, ಅವರ ನೋವಿಗೆ ಸಕಾಲದಲ್ಲಿ ಸ್ಪಂದನ ದೊರೆಯಲಿ ಎಂದ ಸಚಿವರು ಹೆರಿಗೆ ವಾರ್ಡ್ನ್ಲ್ಲಿ ಶಸ್ತ್ರಚಿಕಿತ್ಸೆ ವೇಳೆ ತೊಂದರೆಗೊಳಗಾದ ರೋಗಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಅಗತ್ಯ ಚಿಕಿತ್ಸೆ ಒದಗಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಹಾಸನ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ರಾಜೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್.ಶ್ಯಾಮಲಾದೇವಿ ಇತರರು ಇದ್ದರು.
ಖಾದರ್ಗೆ ಸಾರ್ವಜನಿಕರಿಂದ ದೂರುಗಳ ಸುರಿಮಳೆ
ಚನ್ನರಾಯಪಟ್ಟಣ: ಆರೋಗ್ಯ ಸಚಿವ ಖಾದರ್ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ದೂರುಗಳ ಸುರಿಮಳೆಯನ್ನೇ ಸುರಿದರು.
ವೈದ್ಯರು ಇಂದು ಎಲ್ಲರೂ ಹಾಜರಾತಿ ತೋರಿದ್ದಾರೆ. ಸಾಮಾನ್ಯ ದಿನಗಳಲ್ಲಿ ಒಬ್ಬ ವೈದ್ಯರೂ ಇರುವುದಿಲ್ಲ. ರಾತ್ರಿ ಸಂದರ್ಭದಲ್ಲಿ ನರ್ಸ್ಗಳದ್ದೇ ರಾಜ್ಯಭಾರ ಆಗಿರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ತೆರೆದು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕೆಲ ಏಜಂಟರನ್ನು ಸರ್ಕಾರಿ ಆಸ್ಪತ್ರೆಯಲ್ಲಿಟ್ಟುಕೊಂಡು ಆಸ್ಪತ್ರೆಯ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ದೂರಿದರು. ಇಂದು ಹಾಜರಾಗಿರುವ ನರ್ಸ್ಗಳನ್ನು ನೋಡುತ್ತಿರುವುದೇ ಪ್ರಥಮವಾಗಿದ್ದು, ಇರುವ ಸಿಬ್ಬಂದಿ ಕೊರತೆಯ ನಡುವೆಯೂ ನರ್ಸ್ಗಳ ಗೈರು ಹಾಜರಿ ಎದ್ದು ಕಾಣುತ್ತದೆ. ಸಣ್ಣ ಪುಟ್ಟ ಗಾಯವಾಗಿದ್ದರೂ ಅದನ್ನು ಪರಶೀಲಿಸಲು ಮುಂದಾಗದ ವೈದ್ಯರು ಕಮಿಷನ್ ಆಸೆಗಾಗಿ ನೇರವಾಗಿ ಸಿಟಿ ಸ್ಕ್ಯಾನ್ಗೆ ಬರೆಯುತ್ತಾರೆ. ಆಂಬುಲೆನ್ಸ್ ಚಾಲಕ ಹಾಸನದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯದೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅವರಿಂದ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು. ಹೆರಿಗೆಗೆ ಬಂದವರು ಕಷ್ಟದಲ್ಲಿದ್ದರೂ ಅದನ್ನೇ ಕಾರಣವಾಗಿಟ್ಟುಕೊಂಡು ಸಾಮಾನ್ಯ ಹೆರಿಗೆಗೆ ಮೂರು ಹಾಗೂ ಸೀಸೆರಿಯನ್ಗೆ 6 ಸಾವಿರ ರು. ಪಿಕ್ಸ್ ಆಗಿದೆ ಅದನ್ನು ಕೊಡುವಂತೆ ಪೀಡಿಸುತ್ತಾರೆ ಎಂದು ಆಕ್ಷೇಪಿಸಿದರು.
ಪರಿಶೀಲನೆ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ಖಾದರ್ ಪ್ರಥಮವಾಗಿ ಶೌಚಾಲಯಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ನಂತರ ವಾರ್ಡ್ಗಳಿಗೆ ತೆರಳಿ ರೋಗಿಗಳಿಗೆ ಆಸ್ಪತ್ರೆಯಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವಿವರ ಪಡೆದರು. ನಿಮ್ಮಿಂದ ಆಸ್ಪತ್ರೆಯ ಸಿಬ್ಬಂದಿ ಯಾವುದಕ್ಕಾದರೂ ಹಣ ಕೇಳುತ್ತಾರೆಯೇ, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುತ್ತಿದ್ದಾರಾ ಹಾಗೂ ಊಟ ಹಾಲು ಬ್ರೆಡ್ ನೀಡುತ್ತಿದ್ದಾರೆಯೋ ಎಂದು ರೋಗಿಗಳಿಂದ ಮಾಹಿತಿ ಪಡೆದರು.
ಹಾಜರಿ ಕೂಗಿದ ಸಚಿವ
ಆಸ್ಪತ್ರೆ ಪರಿಶೀಲನಾ ಸಭೆ ನಡೆಸುವ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಗಳನ್ನು ಒಂದೆಡೆ ಕರೆಸಿದ ಹಾಜರಾತಿ ಪುಸ್ತಕ ತರಿಸಿಕೊಂಡು ಶಾಲೆಯಲ್ಲಿ ಹಾಜರಿ ಕೂಗುವ ರೀತಿಯಲ್ಲಿ ವೈದ್ಯರು ಸೇರಿದಂತೆ ಪ್ರತಿ ಆಸ್ಪತ್ರೆಯ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿದರು.
ಆಸ್ಪತ್ರೆಯಲ್ಲಿನ ಔಷಧ ದಾಸ್ತಾನು, ಪ್ರತಿದಿನ ಚಿಕಿತ್ಸೆ ನೀಡುವ ರೋಗಿಗಳ ಮಾಹಿತಿಗಳನ್ನು ಮಾಹಿತಿ ಪುಸ್ತಕದಲ್ಲಿ ಪರಿಶೀಲಿಸಿದ ನಂತರ ಹೆರಿಗೆಯವರಿಗೆ ನೀಡುವ ಮಡಿಲು ಕಿಟ್ಗಳ ಮಾಹಿತಿ ಪಡೆದರು.
ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಹೆರಿಗೆ ಭತ್ಯೆಗಾಗಿ ನೀಡುವ ಚೆಕ್ ಪುಸ್ತಕವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಫಲಾನುಭವಿಗಳಿಂದ ಸಹಿ ಪಡೆದು 15ಕ್ಕೂ ಹೆಚ್ಚು ಚೆಕ್ಗಳು ಚೆಕ್ ಪುಸ್ತಕದಲ್ಲಿರುವುದನ್ನು ಪತ್ತೆ ಹಚ್ಚಿದ ಸಚಿವರು ಇದರ ಬಗ್ಗೆ ತೀವ್ರ ಗಮನ ಹರಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

