ದೇವೇಗೌಡರಿಂದ ಜಿಲ್ಲಾ ಜಾಗೃತಿ ಸಭೆ
ಹಾಸನ: ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ದೇವೇಗೌಡರ ಅಧ್ಯಕ್ಷತೆಯಲ್ಲಿ ಅ 23ರಂದು ಬೆಳಗ್ಗೆ 11ಕ್ಕೆ ಜಿಲ್ಲೆಯ 2013-14ನೇ ಸಾಲಿನ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸಭೆಯನ್ನು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕೇಂದ್ರದ ನಾನಾ ಪರಿಷ್ಕತ ಹಾಗೂ ಇತರೆ ಯೋಜನೆಗಳ ಕುರಿತಂತೆ ಸೆಪ್ಟೆಂಬರ್ 21ರಂದು ನಡೆದ ಸಭೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದ ವಿಷಯಗಳ ಬಗ್ಗೆ ಚರ್ಚಿಸಲು ಸಂಸದರ ಸೂಚನೆಯ ಮೇರೆಗೆ ಮುಂದುವರಿದ ಈ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಪರಿಷ್ಕೃತ ಯೋಜನೆಯಯಲ್ಲಿ ಸೆಪ್ಟೆಂಬರ್ 2013ರ ಅಂತ್ಯಕ್ಕೆ ಸಾಧಿಸಲಾದ ಪ್ರಗತಿಯ ವಿವರದೊಂದಿಗೆ ಹಾಜರಾಗುವಂತೆ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ತಿಳಿಸಿದ್ದಾರೆ.
ಸಕಲೇಶಪುರಕ್ಕೆ ದತ್ತಪೀಠ ರಥ
ಸಕಲೇಶಪುರ: ಸಕಲೇಶಪುರಕ್ಕೆ ದತ್ತ ಪೀಠ ಮುಕ್ತಿ ಸಂಕಲ್ಪ ರಥ ಯಾತ್ರೆಯು ಅ. 25ರಂದು ಆಗಮಿಸಲಿದೆ ಎಂದು ಶ್ರೀ ರಾಮ ಸೇನೆ ತಾ. ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ. ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 23 ರಿಂದ 27 ರವರೆಗೆ ತಾಲೂಕಿನಾದ್ಯಂತ ಉಚಿತ ದತ್ತಮಾಲಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 25 ರಂದು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪಟ್ಟಣದಲ್ಲಿ ಶೋಭಾ ಯಾತ್ರೆ ನಡೆಯಲಿದೆ ಎಂದರು ಹಾಗೂ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ತಾಲೂಕು ಸಂಚಾಲಕ ಸಂಪತ್, ನಗರ ಘಟಕ ಅಧ್ಯಕ್ಷ ವಿಜಯ್,ನಗರ ಕಾರ್ಯದರ್ಶಿ ನಂದೀಶ್, ಚೇತನ್ ಉಪಸ್ಥಿತರಿದ್ದರು.
ಮರಕ್ಕೆ ಕಾರು ಡಿಕ್ಕಿ: ದಂಪತಿ ಸಾವು
ಅರಸೀಕೆರೆ: ಆಲದಮರಕ್ಕೆ ಟಾಟಾ ಇಂಡಿಕಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತ ಪಟ್ಟರೆ, ಮಹಿಳೆಯೊಬ್ಬರು ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ತಳಲೂರು ಗೇಟ್ ಸಮೀಪ ಸಂಭವಿಸಿದೆ. ಭದ್ರಾವತಿ ನಗರದ ಗೋಪಾಲಕೃಷ್ಣ(55) ಅವರ ಪತ್ನಿ ಪರಿಮಳ(45) ಮೃತಪಟ್ಟ ದುರ್ದೈವಿಗಳು. ಚನ್ನರಾಯಪಟ್ಟಣದಿಂದ ಹಿಂತಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸುದ್ಧಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರ ಎದುರು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಅ. 22
ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ವಿಭಾಗದ ಅಧ್ಯಕ್ಷ ಡಿ.ಮಲ್ಲೇಶ್ ಪರಿಶಿಷ್ಟರ ಸಮಸ್ಯೆಗೆ ಸ್ಪಂದಿಧಿಸದ ಕಾರಣ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮುಂದೆ ಮಂಗಳವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಲವು ಕಾರ್ಯಕರ್ತರು ಮಲ್ಲೇಶ್ ಅಧ್ಯಕ್ಷರಾಗಿ ಒಂದೂವರೆ ವರ್ಷ ಕಳೆದರೂ ಈವರೆಗೂ ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯಾಗಿ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪಕ್ಷದ ಸಂಘಟನಾತ್ಮಕ ವಿಚಾರಗಳಲ್ಲಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಿಲ್ಲೆಯಲ್ಲಿ ದಲಿತ ಸಮುದಾಯವು ಕಾಂಗ್ರೆಸ್ನ್ನು ಬಲಪಡಿಸುವಂತಹ ಕಾರ್ಯದಲ್ಲಿ ಹಿಂಜರಿಯುವಂತಾಗಿದೆ. ದಲಿತ ಚಳವಳಿಯಲ್ಲಿ ದುಡಿಯುವಂತಹ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ರೀತಿಯಲ್ಲೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ದಲಿತರನ್ನು ಒಗ್ಗೂಡಿಸವಲ್ಲಿ ಸಂಪೂರ್ಣವಾಗಿ ಇರುವ ವಿಫವಾಗಿದ್ದು, ಕೂಡಲೇ ಇವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸುವಂತೆ ಪಟ್ಟು ಹಿಡಿದರು. ಡಿಎಸ್ಎಸ್ ಮುಖಂಡ ಕುಮಾರಸ್ವಾಮಿ, ಕೆಲವೆತ್ತಿ ಸೋಮಶೇಖರ್, ಎಸ್.ಮಂಜುನಾಥಸ್ವಾಮಿ, ಎಸ್.ಜೆ.ರಂಗಸ್ವಾಮಿ, ರಾಜಪ್ಪ, ಅಶೋಕ್, ದೇವಯ್ಯ, ಹಾಲಪ್ಪ ಇತರರು ಇದ್ದರು.
ನೀರಿಗಾಗಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ
ಅರಸೀಕೆರೆ: ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಜನ ಪರದಾಡುತ್ತಿದ್ದರೂ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಗ್ರಾಪಂ ಎದುರು ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎರಡು-ಮೂರು ತಿಂಗಳಿಂದಲೂ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ತೊಂದರೆ ಅನುಭವಿಸುತ್ತಿದ್ದರೂ ಸಮರ್ಪಕ ಕುಡಿಯುವ ನೀರು ಪೂರೈಸುವಲ್ಲಿ ಚುನಾಯಿತ ಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದು ಇದರಿಂದ ಜನತೆ ಹಾಗೂ ದನಕರುಗಳು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ರಾಜಮ್ಮ ಮಾತನಾಡಿ, ಕಡುಬಡವರೇ ವಾಸಿಸುವ ನಾಯಕರ ಬೀದಿಯಲ್ಲಿ ಸುಮಾರು 150 ಕುಟುಂಬಗಳಿದ್ದು ಈ ಸಮಸ್ಯೆ ಉಲ್ಭಣಗೊಂಡಿದೆ. ಪರಿಸ್ಥಿತಿ ಹೀಗಿದ್ದರೂ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳಾಗಲಿ ಅಥವಾ ತಾಲೂಕು ಪಂಚಾಯ್ತಿ ಸದಸ್ಯರಾಗಲಿ ಇತ್ತ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಕೂಡಲೇ ನೀರು ಪೂರೈಕೆಗೆ ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯೆ ಗಂಗಮ್ಮ, ಲಕ್ಷ್ಮೀ, ಸ್ವಸಹಾಯ ಸಂಘ ಹಾಗೂ ಮಡಿವಾಳ ಮಾಚದೇವ ಸ್ವಸಹಾಯ ಸಂಘದ ಮಹಿಳೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾನೂನು ಸಾಕ್ಷರತಾ ರಥದ ಪ್ರಯೋಜನಕ್ಕೆ ನ್ಯಾ. ಬಾಬು ಕರೆ
ಆಲೂರು: ಪ್ರತಿಯೊಬ್ಬರಿಗೂ ಕಾನೂನಿನ ಅವಶ್ಯಕತೆಯಿದ್ದ, ಜನರ ಬಳಿಗೆ ಕಾನೂನನ್ನು ತಲುಪಿಸುವ ಸಲುವಾಗಿ ಆಗಮಿಸಿರುವ ಕಾನೂನು ಸಾಕ್ಷರತಾ ರಥದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಎಂ.ಮಹೇಶ್ಬಾಬು ತಿಳಿಸಿದರು. ವರು ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಸಂಚಾರಿ ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು -ನೆರವು ಮೂಡಿಸುವ ಸಾಕ್ಷರತಾ ರಥ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಆರಂಭಗೊಂಡಿರುವ ಸಂಚಾರಿ ಜನತಾ ನ್ಯಾಯಾಲಯ 3 ದಿನಗಳ ಕಾಲ ಕಾನೂನು ಅರಿವು ಮೂಡಿಸುವ ಶಿಬಿರಗಳನ್ನು ಪಟ್ಟಣದ ಹಲವೆಡೆ ಏರ್ಪಡಿಸಿದ್ದು ಸಾರ್ವಜನಿಕರು ಇದರ ಪೂರ್ಣ ಉಪಯೋಗವನ್ನು ಪಡೆದು ಕೊಳ್ಳಬೇಕೆಂದರು.
ಆಶ್ರಯ ಯೋಜನೆಗಳಿಂದ ಮಂಜೂರಾದ ನಿವೇಶನ ಅಥವಾ ಜಮೀನುಗಳನ್ನು ಈ ಹಿಂದೆ ಅನೇಕರು ಕೊಂಡುಕೊಂಡಿದ್ದು (ಇಂತಿಷ್ಟು ವರ್ಷಗಳ ನಂತರ ಪರಭಾರೆ ಮಾಡಬಹುದೆನ್ನುವ ಆಧಾರದಲ್ಲಿ) ಆದರೆ ಸುಪ್ರೀಂ ಕೋರ್ಟಿನ ಇತ್ತೀಚಿನ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿ, ಪಂಗಡದವರ ಜಮೀನುಗಳು ಮಾರಾಟ ಮಾಡಬಾರದು ಎಂದು ತಿಳಿಸಿದರು. ಮೋಸ ಹಾಗೂ ವಂಚನೆಗಳಿಂದ ಬಚಾವಾಗಬೇಕೆಂದರೆ ಕಾನೂನಿನ ಸೂಕ್ತ ತಿಳುವಳಿಕೆಯನ್ನು ಪಡೆಯುವುದು ಅವಶ್ಯಕ ಎಂದು ಹೇಳಿದರು. ತಹಸೀಲ್ದಾರ್ ಶಾರದಾಂಬ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಮಹೇಂದ್ರ, ವಕೀಲರಾದ ಕೆ.ಕೆ.ಮಂಜೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

