ಹಾಸನ

'ಅನ್ನಭಾಗ್ಯ'ಕ್ಕೆ ಕೇಂದ್ರ, ರಾಜ್ಯ ಸರ್ಕಾರದ ಪಾಲೆಷ್ಟಿದೆ?

Published On :

ಎಪಿಎಲ್ ಕಾರ್ಡ್‌ಗೆ ನಿಲ್ಲಿಸಿದ ಅಕ್ಕಿ ಯಾತಕ್ಕೆ ಬಳಕೆಯಾಗುತ್ತಿದೆ: ದೇವೇಗೌಡ ೤ ಸಿಎಂ ಮನೆ ಮುಂದೆ ಧರಣಿ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಹಾಸನ ಅ.23

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಯಾವ ಪ್ರಮಾಣದಲ್ಲಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರವೇ ಎಷ್ಟು ಖರೀದಿ ಮಾಡುತ್ತಿದೆ ಮತ್ತು ಎಪಿಎಲ್ ಕಾರ್ಡ್‌ದಾರರಿಗೆ ನಿಲ್ಲಿಸಿರುವ ಅಕ್ಕಿಯನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಬಗ್ಗೆ ಜನತೆಗೆ ಮಾಹಿತಿ ನೀಡುವುದು ಸೂಕ್ತವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗ್ರಹಿಸಿದ್ದಾರೆ.
ಒಂದು ಕಡೆ ಕೇಂದ್ರ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದೆ. ಈ ನಡುವೆ ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಹೊರ ರಾಜ್ಯದಿಂದ ಅಕ್ಕಿಯನ್ನು ಖರೀದಿಸುತ್ತಿದೆ ಎಂದು ಹೇಳಲಾಗುತ್ತದೆ. ಮತ್ತೊಂದು ಕಡೆ ಎಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿದ್ದ ಅಕ್ಕಿ, ಗೋದಿಯನ್ನು ನಿಲ್ಲಿಸಲಾಗಿದೆ. ಹಾಗಾದರೆ ಕೇಂದ್ರ ನೀಡುತ್ತಿರುವ ಅಕ್ಕಿ, ಗೋಧಿ, ರಾಜ್ಯ ಖರೀದಿಸುತ್ತಿರುವ ಅಕ್ಕಿ ಬಗ್ಗೆ ವಾಸ್ತವಾಂಶವನ್ನು ತಿಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದ ಕೆಲವು ಕಡೆ ಅಕ್ಕಿ ಬದಲಿಗೆ ರಾಗಿ, ಜೋಳ ವಿತರಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಅದು ಎಷ್ಟರ ಮಟ್ಟಿಗೆ ಜಾರಿಯಾಗುತ್ತಿದೆ ಎಂಬುದು ನಿಗೂಢವಾಗಿದೆ. ರಾಜ್ಯದಲ್ಲಿ ಇರುವ ಬಿಪಿಎಲ್ ಕಾರ್ಡ್‌ಗಳ ಪೈಕಿ ಶೇ.33ರಷ್ಟು ಕಾರ್ಡ್‌ಗಳಿಗೆ ಕೇಂದ್ರ ಸರ್ಕಾರ ಕೆ.ಜಿ. ಅಕ್ಕಿಯನ್ನು 5.80 ನೀಡುತ್ತದೆ. ಎಪಿಎಲ್ ಕಾರ್ಡ್‌ದಾರರಿಗೆ ಕೆ.ಜಿ. ಅಕ್ಕಿಯನ್ನು 8.60 ರು.ಗೆ ಈಗಲೂ ನೀಡುತ್ತಿದೆ. ಹಾಗೆಂದ ಮೇಲೆ ಎಪಿಎಲ್ ಕಾರ್ಡ್‌ದಾರರಿಗೆ ನೀಡುವ ಅಕ್ಕಿಯನ್ನು ಬಿಪಿಎಲ್ ಕಾರ್ಡ್‌ದಾರರಿಗೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಸಿಎಂ ಮನೆ ಮುಂದೆ ಧರಣಿ: ಕಾಂಗ್ರೆಸ್ ಮಂದಿ ತಮ್ಮನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕೆಂಬ ಏಕಮೇವ ಉದ್ದೇಶದಿಂದ ಹಾಸನ ಟಾರ್ಗೆಟ್, ರಣಕಹಳೆ ಊದುತ್ತೇವೆ ಎಂದು ಹೇಳುತ್ತಿದ್ದಾರೆ. ಊದಿಕೊಳ್ಳಲಿ, ನನಗೆ ಹಳ್ಳಿ ಜನರು ಊದುವ ಕೊಂಬಿನ ಕಹಳೆಯೇ ಸಾಕು. 1999ರಲ್ಲಿ ಪಾಂಚಜನ್ಯ ಮೊಳಗಿಸಲಾಗಿತ್ತು. ಈಗ ರಣಕಹಳೆಯಂತೆ. ಏನಾದರೂ ಮೊಳಗಿಸಿಕೊಳ್ಳಿಲಿ. ಅದಕ್ಕೆ ತಕರಾರು ಇಲ್ಲ. ಹಾಸನ ಜಿಲ್ಲೆಯ ಜನತೆ ಮತ್ತು ಜಿಲ್ಲೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲಿ. 15 ದಿನಗಳಲ್ಲಿ ಮುಖ್ಯ ಸಮಸ್ಯೆಗಳನ್ನಾದರೂ ಬಗೆಹರಿಸದಿದ್ದರೂ ಮುಖ್ಯಮಂತ್ರಿ ನಿವಾಸದ ಬಳಿ ಧರಣಿ ನಡೆಸಲಾಗುವುದು ಎಂದರು.
1978ರಲ್ಲಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಹಾಸನ- ಬೆಂಗಳೂರು ಮತ್ತು ಚಿಕ್ಕಮಗಳೂರು- ಕಡೂರು ರೇಲ್ವೆ ಮಾರ್ಗ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದಕ್ಕೆ ಹಣಕಾಸು, ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು ನಾನು ಪ್ರಧಾನಿಯಾದಾಗ. ಅಂದ್ರೆ.. 1996ರಲ್ಲಿ. 17 ವರ್ಷಗಳಾದರೂ ಹಾಸನ- ಬೆಂಗಳೂರು ನಡುವಿನ ರೇಲ್ವೆ ಮಾರ್ಗ ಕಾಮಗಾರಿ ಪೂರ್ಣಗೊಂಡಿಲ್ಲ. ಅದಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿಲ್ಲ ಎಂದು ಹೇಳಿದರು.
ಹಾಸನ ವೈದ್ಯಕೀಯ ಕಾಲೇಜಿಗೆ ಅಗತ್ಯ ಬೋಧನಾ, ಬೋಧನೇತರ ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಪಶು ವೈದ್ಯಕೀಯ, ಕೃಷಿ ಕಾಲೇಜುಗಳಿಗೆ ಕಟ್ಟಡ ಮತ್ತಿತರ ಸೌಲಭ್ಯ ನೀಡಿಲ್ಲ. ರಸ್ತೆಗಳೆಲ್ಲಾ ಹಾಳಾಗಿವೆ. ಟೆಂಡರ್ ಕರೆದು ರಸ್ತೆ ಮಾಡಬೇಡಿ ಎಂದು ನಾವೇನು ಹೇಳಿಲ್ಲ. ಕಾಫಿ, ಏಲಕ್ಕಿ, ಮೆಣಸು, ತೆಂಗು ಮತ್ತಿತರ ಬೆಳೆಗಳು ನಾಶವಾಗಿವೆ. ಪರಿಹಾರ ನೀಡಿಲ್ಲ. ಇದನ್ನು ಮರೆತು ರಣಕಹಳೆ ಕೂಗುತ್ತಾರಂತೆ. ನಾವು ಪರಿಹಾರ ನೀಡುವಷ್ಚು ಶಕ್ತರಾಗಿಲ್ಲ. ಬೇರೆ ದಾರಿಯೇ ಇಲ್ಲ. ಹೋರಾಟ ಮಾಡುವುದೇ ನಮ್ಮಗಿರುವ ಶಕ್ತಿ ಎಂದು ಗುಡುಗಿದರು. ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ ಇದ್ದರು.

ಏಕವಚನ ಸಂಭಾಷಣೆ ರಾಜಕೀಯ ಅವನತಿ ಲಕ್ಷಣ; ತೀವ್ರ ವಿಷಾದ
ಹಾಸನ:
ರಾಜ್ಯದ ಹಿರಿಯ ರಾಜಕಾರಣಿಗಳು ಪರಸ್ಪರ ಏಕವಚನದಲ್ಲಿ ನಿಂದನೆ ಮಾಡಿಕೊಳ್ಳುತ್ತಿರುವುದು ಉತ್ತಮ ಲಕ್ಷಣವಂತೂ ಅಲ್ಲ. ಅದು ರಾಜಕೀಯ ಕ್ಷೇತ್ರದ ಅವನತಿ ಲಕ್ಷಣ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕಾರಣಕ್ಕೇನೆ ದಿನೇ ದಿನೇ ರಾಜಕಾರಣಿಗಳ ಮೇಲಿನ ಗೌರವ ಜನತೆಯಲ್ಲಿ ಕಡಿಮೆಯಾಗುತ್ತಿದೆ. ಅಧಿಕಾರ ಗಳಿಸಲಿಕ್ಕೋ, ಕಿತ್ತುಕೊಳ್ಳಲಿಕ್ಕೋ ನೈತಿಕತೆ ಮೀರಿ ತುಟಿ ಮೀರಿದ ಮಾತುಗಳನ್ನಾಡುವುದು ಶೋಭೆ ತರುವುದಿಲ್ಲ. ರಾಜ್ಯದಲ್ಲಿ ಮಾತ್ರವೇ ಅಲ್ಲ, ದೆಹಲಿ ಮಟ್ಟದಲ್ಲೂ ರಾಜಕಾರಣಿಗಳ ಕೀಳು ಮಟ್ಟದ ಹೇಳಿಕೆಗಳು ಸುರಿಯುತ್ತಿವೆ. ಪ್ರಧಾನಿಯನ್ನು ತೀರ ಕೆಳ ಮಟ್ಟದಲ್ಲಿ ಟೀಕೆ ಮಾಡುವುದು ಮತ್ತು ಪ್ರಧಾನಿಯನ್ನು ಸಮರ್ಥಿಸಿಕೊಳ್ಳಲು ಕೂಡ ಕೆಟ್ಟ ಭಾಷೆ ಪ್ರಯೋಗವಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಚುನಾವಣೆ ವೇಳೆ ಜಾತಿ ಮತ್ತು ಹಣದಿಂದ ಗೆಲ್ಲಬಹುದು ಎಂಬ ಅಹಂ ಕೂಡ ಕೆಟ್ಟ ರೀತಿಯಲ್ಲಿ ಮಾತನಾಡಿಲಿಕ್ಕೆ ಕಾರಣವಾಗಿದೆ. ಸೇಡಿನ ಮನೋಭಾವವೂ ಇದರ ಹಿಂದೆ ಇದೆ. ಗಾಂಧೀಜಿ ಪುಣ್ಯಾತ್ಮ ಸ್ವಾತಂತ್ರ್ಯ ರಕ್ತ ಬಸಿದು ತಂದು ಕೊಟ್ಟಿದ್ದು ಇದಕ್ಕೇನಾ ಎಂಬ ನೋವು ಉಂಟಾಗುತ್ತದೆ. ಯಾರು ಅಧಿಕಾರಕ್ಕೆ ಬಂದರೂ ದೇಶದಲ್ಲಿ ತೀರ ಹದಗೆಟ್ಟಿರುವ ರಾಜಕೀಯ ಪರಿಸ್ಥಿತಿಯನ್ನು ಸರಿಪಡಿಸಲಾಗುವುದು ಎಂಬುದು ಹಗಲುಗನಸಾಗುತ್ತದೆ ಎಂಬ ಭಯ ಉಂಟಾಗುತ್ತದೆ ಎಂದು ಗೌಡರು ಆತಂಕ ವ್ಯಕ್ತಪಡಿಸಿದರು.
ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣೆ ಸಹಜ. ಅದನ್ನು ಸೌಜನ್ಯದ ಎಲ್ಲೆಯನ್ನು ದಾಟಬಾರದು. ರಾಜಕಾರಣಿಗಳು ಸ್ವಯಂ ಪ್ರೇರಣೆಯಿಂದ ನೈತಿಕತೆ ಚೌಕಟ್ಟಿನಲ್ಲಿ ಮಾತನಾಡಬೇಕೆಂಬ ನೀತಿಯನ್ನು ಅಳವಡಿಸಿಕೊಂಡರೇ ಮಾತ್ರ ಪರಿಹಾರ ಸಿಗಬಹುದಷ್ಟೇ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಅವರ ನಿವಾಸ ಮುಂದೆ ಧರಣಿ ನಡೆಸಿದೆ. ಸುಬ್ರಮಣ್ಯಂದಲ್ಲಿ ಇದ್ದ ಅವರು ದೂರವಾಣಿ ಮೂಲಕ ಮಾತನಾಡಿ ಬೇಡಿಕೆಗೆ ಸ್ಪಂದಿಸುವ ಅಭಯವನ್ನು ಸೌಜನ್ಯಯುತವಾಗಿ ನೀಡಿದರು. ಸಿದ್ದರಾಮಯ್ಯನವರು ಸಿಎಂ ಆಗುವುದಕ್ಕೆ ಮುಂಚೆ ಮತ್ತು ಆದ ನಂತರದಲ್ಲಿ ಅವರನ್ನು ಕುರಿತು ಅಗೌರವದಿಂದ ಕೂಡಿದ ಶಬ್ದದಿಂದ ಮಾತನಾಡಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.