ಹಾಸನ

ಮಹಿಳೆ ಕೊಲೆ; ಜೀವಾವಧಿ ಶಿಕ್ಷೆ

Published On :

ಹಾಸನ: ಮಹಿಳೆ ಮಾನಭಂಗಕ್ಕೆ ಯತ್ನಿಸಿ, ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆಲೂರು ತಾಲೂಕು ಕುಂದೂರು ಹೋಬಳಿಯ ದೇವರಪುರ ಗ್ರಾಮದ ರಂಗಸ್ವಾಮಿ ಎಂಬಾತನೇ ಶಿಕ್ಷೆಗೆ ಒಳಗಾದವನು. ರಂಗಸ್ವಾಮಿ ಅದೇ ಗ್ರಾಮದ ರೇಣುಕಾ ಎಂಬವರ ಪುತ್ರಿ ದಿವ್ಯಾಳನ್ನು ಮಾನಭಂಗ ಮಾಡಲು ಯತ್ನಿಸಿ, ಆಕೆಯು ಒಪ್ಪದಿದ್ದ ಕಾರಣ ಆಕೆಗೆ ಚಾಕುವಿನಿಂದ ತಿವಿದು, ಗಾಯಗೊಳಿಸಿದ್ದು ಈ ಬಗ್ಗೆ ದಿವ್ಯಾ ಅವರು ರಂಗಸ್ವಾಮಿಯ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ರಂಗಸ್ವಾಮಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಆಲೂರು ಪೊಲೀಸ್ ಉಪ ನಿರೀಕ್ಷಕ ಮುದ್ದುರಾಜು ಅವರು ಆರೋಪಿಯ ವಿರುದ್ಧ ಆಲೂರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ರಂಗಸ್ವಾಮಿ ಮತ್ತು ಆತನ ತಾಯಿ ಸರಸಮ್ಮ ಅವರು ಸೇರಿಕೊಂಡು ದಿವ್ಯಾಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಇದರ ಪರಿಣಾಮ ದಿವ್ಯಾ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ. ಉದ್ದಾರ್ ಅವರು ಆರೋಪಿಯು ಕೊಲೆ ಅಪರಾಧ ಎಸಗಿರುವುದು ರುಜುವಾತಾದ್ದರಿಂದ ಆತನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ 1ನೇ ತ್ವರಿತಗತಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕ   ಮಲ್ಲರಾಜೇಗೌಡ ವಾದಿಸಿದ್ದರು.

ತಾಲೂಕು ಕಸಾಪಕ್ಕೆ ಆನಂದ್ ಬೇಲೂರು
ಹಾಸನ:
ಪ್ರಗತಿಪರ ಚಿಂತಕ ಟಿ.ಡಿ. ತಮ್ಮಣ್ಣಗೌಡರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಕಸಾಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಆನಂದ್ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ತಿಳಿಸಿದ್ದಾರೆ. ಮೂಲತಃ ಆನಂದ್ ಶಿಕ್ಷಕರಾಗಿ ಸೇವೆ ಮಾಡುತ್ತಿದ್ದಾರೆ. ಇವರು ಸರ್ಕಾರಿ ನೌಕರರ ಸಂಘದಲ್ಲಿ ಹಾಗೂ ತಾಲೂಕು, ಜಿಲ್ಲಾ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಅನನ್ಯ ಸೇವೆ ಮಾಡಿದ್ದಾರೆ.  ಇಂತಹವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದಕ್ಕೆ ತಾಲೂಕಿನ ಕನ್ನಡ ಅಭಿಮಾನಿಗಳು ಅವರಿಗೆ ಅಭಿನಂದಿಸಿದ್ದಾರೆ. ಕಸಾಪಕ್ಕೆ ನೋಂದಣಿ ಕಾರ್ಯ ಹಾಗೂ ಗ್ರಾಮೀಣ ಮಟ್ಟದಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದ ಅವರು ಎಲ್ಲರ ಸಹಕಾರ ಕೋರಿದರು.

ಸೌಜನ್ಯಾ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ಪ್ರತಿಭಟನೆ
ಹಾಸನ:
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಒತ್ತಾಯಿಸಿ ಸಿಪಿಎಂ ನೇತೃತ್ವದಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೊಲೆ ಪ್ರಕರಣವನ್ನು ಕೂಡಲೇ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿಕೊಡಬೇಕೆಂದು ಒತ್ತಾಯಿಸಿದ ಅವರು, ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಮೇಲೆ ಧರ್ಮಸ್ಥಳದಲ್ಲಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ನಡೆದು ಒಂದು ವರ್ಷ ಕಳೆದರೂ, ಆಕೆಗೆ ನ್ಯಾಯ ಸಿಗದಿರುವುದು ಅತ್ಯಂತ ಖಂಡನೀಯವಾದುದು ಎಂದರು. ಸಚಿವ ವಿನಯ ಕುಮಾರ್ ಸೊರಕೆ ಅವರು ಬಹಿರಂಗವಾಗಿಯೇ ಸರ್ಕಾರ ಯಾರ ಪರ ಇದೆ ಎಂದು ಹೇಳಿಕೊಂಡಿದ್ದಾರೆ. ಸಮಾಜವಾದಿ ಹಿನ್ನೆಲೆಯಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಅರ್ಥಮಾಡಿಕೊಂಡು ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಿಕೊಡಬೇಕೆಂದು ಪಟ್ಟುಹಿಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಕಾರ್ಯದರ್ಶಿ ಧರ್ಮೇಶ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯ್‌ಕುಮಾರ್, ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಆರ್‌ಪಿಐನ ಸತೀಶ್, ಎಚ್.ಆರ್. ನವೀನ್‌ಕುಮಾರ್‌ಇತರರು ಇದ್ದರು.

ವಿಚಾರ ಸಂಕಿರಣ
ಹಾಸನ:
ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬಹುರಾಷ್ಟ್ರೀಯ ಕಂಪನಿ ಕೃಷಿಯನ್ನು ವಿರೋಧಿಸಿ ಹಾಗೂ ರೈತರ ಕೃಷಿಯನ್ನು ಸಂರಕ್ಷಿಸಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಅ.24ರಂದು ಬೆಳಗ್ಗೆ 11 ಗಂಟೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಲಾಗಿದೆ. ರೈತರು ಹಾಗೂ ಕೃಷಿ ಕೂಲಿಕಾರರಿಗಾಗಿ ಭೂ ನೀತಿಯೋ, ಬಹುರಾಷ್ಟ್ರೀಯ ಕಂಪನಿಗಳಿಗಾಗಿಯೋ ವಿಷಯ ಕುರಿತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ವಿಚಾರ ಮಂಡಿಸಿದರು. ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್‌ಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರೈತ ಮುಖಂಡ ರಾಜೇಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ನಂಜೇಗೌಡ, ತಾಲೂಕು ಕಾರ್ಯದರ್ಶಿ ಪ್ರಕಾಶ್, ಸಕಲೇಶಪುರ ತಾಲೂಕು ಅಧ್ಯಕ್ಷ ಕೆ.ಎಲ್. ಶಂಕರ್, ಸಕಲೇಶಪುರ ಕಾರ್ಯದರ್ಶಿ ವಿರೂಪಾಕ್ಷ ಭಾಗವಹಿಸುವರು.

'ಲೋಕಾ' ಭೇಟಿ
ಹಾಸನ:
ಲೋಕಾಯುಕ್ತ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಮತ್ತು ತಂಡದವರು ಅ.24ರಂದು ಅರಸೀಕರೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ನಂತರ ಚನ್ನರಾಯಪಟ್ಟಣದ ಪ್ರವಾಸಿ ಮಂದಿರಕ್ಕೆ ಮಧ್ಯಾಹ 2ರಿಂದ ಸಂಜೆ 5.30ರವರೆಗೆ ಭೇಟಿ ನೀಡಲಿದ್ದಾರೆ. ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಹಾಸನ ವಿಭಾಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ವಾರ್ಷಿಕೋತ್ಸವ
ಹಾಸನ:
ಸಂತಸ ಹಾಸನ ಸಂತಾನೋತ್ಪತ್ತಿ ಸಂಸ್ಥೆಯ 5ನೇ ವಾರ್ಷಿಕೋತ್ಸವದ ಪ್ರಯುಕ್ತ  ಮಕ್ಕಳಿಲ್ಲದ ದಂಪತಿಗೆ ಉಚಿತ ತಪಾಸಣೆ, ಸಲಹೆ ಹಾಗೂ ಸ್ಕ್ಯಾನಿಂಗ್ ಶಿಬಿರವನ್ನು ಅ.24 ರಿಂದ ಅ.26ರವರೆಗೆ ನಗರದ ಎಸ್‌ಎಸ್‌ಎಂ ಆಸ್ಪತ್ರೆಯ ಸಂತಸ ವಿಭಾಗದಲ್ಲಿ  ನಡೆಸಲಾಗುತ್ತಿದೆ. ಇಲ್ಲಿಯವರೆಗೆ 250ಕ್ಕೂ ಹೆಚ್ಚು ದಂಪತಿ ಈ ಶಿಬಿರಕ್ಕೆ ಹೆಸರು ನೋಂದಾಯಿಸಿದ್ದಾರೆ. ಅ.24ರಂದು ಬೆಳಗ್ಗೆ 10ಕ್ಕೆ ಶಿಬಿರವನ್ನು ಭಾರತೀಯ ವೈದ್ಯಕೀಯ ಸಂಘದ ಹಾಸನ ಜಿಲ್ಲಾಧ್ಯಕ್ಷ ಡಾ. ರಾಮಕೃಷ್ಣ ಭಟ್, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಲೀಲಾವತಿ ಜನಾರ್ದನ್ ಉದ್ಘಾಟಿಸುವರು.

ಮೂವರ ಬಂಧನ
ಹೊಳೆನರಸೀಪುರ:
ವಸತಿ ಗೃಹಗಳಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಪಟ್ಟಣ ಠಾಣೆಯ ಪೊಲೀಸರು ಬುಧವಾರ ಮತ್ತೆ ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ್ದು, ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬುಧವಾರ ಸಂಜೆ ಖಚಿತ ಮಾಹಿತಿಯ ಮೇರೆಗೆ ಪಟ್ಟಣದ ಬಸ್ ನಿಲ್ದಾಣದ ಪಕ್ಕದ  ವೆಂಕಟೇಶ್ವರ ಲಾಡ್ಜ್ ಮೇಲೆ ದಿಢೀರ್ ದಾಳಿ ನಡೆಸಿದ ಎಎಸ್ಪಿ ವಿನಾಯಕ ಪಾಟೀಲ್ ಹಾಗೂ ನಗರ ಠಾಣೆಯ ಎಸ್‌ಐ ಶಿವಕುಮಾರ್ ತಂಡವು ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಶಿವಮೊಗ್ಗ ಮೂಲದ ಮಹಿಳೆ ಹಾಗೂ ಜಿಲ್ಲೆಯ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಗೆ ಪ್ರೋತ್ಸಾಹ ನೀಡಿದ ಲಾಡ್ಜ್ ಮಾಲೀಕ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರ್ಗಾವಣೆ ಪತ್ರ ನೀಡದೆ ವಿದ್ಯಾರ್ಥಿಗೆ ಕಿರುಕುಳ; ಪ್ರತಿಭಟನೆ
ಅರಸೀಕೆರೆ:
ಉದ್ಯೋಗಾಕಾಂಕ್ಷಿಯಾಗಿರುವ ವಿದ್ಯಾರ್ಥಿಗೆ ಖಾಸಗಿ ಶಾಲೆಯೊಂದು ವರ್ಗಾವಣೆ ಪತ್ರ ನೀಡದೆ ಕಿರುಕುಳ ನೀಡುತ್ತಿದೆ ಎಂದು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸುಬ್ರಹ್ಮಣ್ಯ ನಗರ ಬಡಾವಣೆಯಲ್ಲಿ ಕಳೆದ 15-20 ವರ್ಷಗಳ ಹಿಂದೆ ಸಂತ ಮೇರಿ ಆಂಗ್ಲ ಶಾಲೆಯೆಂಬ ಹೆಸರಿನಲ್ಲಿ ಖಾಸಗಿ ಶಾಲೆಯನ್ನು ತೆರೆಯಲಾಗಿತ್ತು. ಆ ನಂತರ ದಿನಗಳಲ್ಲಿ ಶಾಲೆಯನ್ನು ಮುಚ್ಚಲಾಗಿದೆ. ಆದರೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ದೃಢೀಕರಣ ಪತ್ರಗಳನ್ನು ಸಂಬಂಧಿಸಿದ ಶಿಕ್ಷಣ ಇಲಾಖೆಗೆ ವರ್ಗಾಯಿಸದೆ ಕೈ ತೊಳೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗೆ ನ್ಯಾಯ ದೊರಕುವವರೆಗೆ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲವೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಪಟ್ಟು ಹಿಡಿದರು. ಪ್ರತಿಭಟನೆಯ ಸುದ್ಧಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಲಭ್ಯವಾಗದಿರುವ ವಿದ್ಯಾರ್ಥಿಯ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ರೈತ ಮುಖಂಡರಾದ ನಿಂಗಪ್ಪ, ಚಂದ್ರಪ್ಪ, ವಡೇರಹಳ್ಳಿ ರಾಜು, ಆನಂದರಾಜು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.