ಹಾಸನ

ಕನ್ನಡ ರಾಜ್ಯೋತ್ಸವಕ್ಕೆ ನಿರ್ಧಾರ

Published On :

ಬೇಲೂರು: ತಾಲೂಕಿನಲ್ಲಿ ಸಮೃದ್ಧ ಮಳೆ, ಬೆಳೆಯಾದ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವೈಭವದಿಂದ ಆಚರಣೆ ಮಾಡಲಾಗುತ್ತದೆ. ಅಂದಿನ ಕಾರ್ಯಕ್ರಮದಲ್ಲಿ ಗೈರು ಹಾಜರಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಾಲೂಕು ತಹಸೀಲ್ದಾರ್ ರವಿಚಂದ್ರ ನಾಯಕ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಅವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ತಬ್ಧ ಚಿತ್ರಗಳು, ಮಂಗಳ ವಾದ್ಯ, ಹಳ್ಳಿ ವಾದ್ಯ, ನಂದಿಧ್ವಜ ನಾನಾ ಕಲಾ ಪ್ರಕಾರಗಳಿಂದ ಕೂಡಿದ ಭವ್ಯ ಮೆರವಣಿಗೆಯನ್ನು ನೆಹರು ನಗರದಿಂದ ಬಸವೇಶ್ವರ ವೃತ್ತ ತನಕ ನಡೆಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಸರ್ಕಾರಿ ಅದೇಶದ ಮೇಲೆ ವೇದಿಕೆ ಮೇಲೆ ಗಣ್ಯರಿಗೆ ಅವಕಾಶ ನೀಡಲಾಗುತ್ತದೆ, ಶಾಲಾ ಮಕ್ಕಳಿಗೆ ಸಹಿ ಹಂಚುವದು ಮತ್ತು ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವೈಭವದಿಂದ ಅಚರಣೆ ಮಾಡಲಾಗುತ್ತದೆ. ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ನೀಡಲಾಗುತ್ತದೆ ಎಂದರು. ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳ ಸಹಕಾರದಿಂದ ನಡೆಸಲಾಗುತ್ತದೆ. ಈ ದಿಸೆಯಲ್ಲಿ ಕಾರ್ಯಕ್ರಮಕ್ಕೆ ಗೈರು ಹಾಜರಿಯಾದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ. ಚಂದ್ರೇಗೌಡ ಮಾತನಾಡಿ, ಈ ಬಾರಿ ಮಳೆ, ಬೆಳೆ ತಾಲೂಕಿನಲ್ಲಿ ಸಮೃದ್ಧವಾದ ಕಾರಣ ಪ್ರಸಕ್ತ ಕನ್ನಡದ ಹಬ್ಬವನ್ನು ವೈಭವದಿಂದ ಅಚರಣೆ ಮಾಡಬೇಕು. ಅಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಬೇಕು ಎಂದು ತಿಳಿಸಿದರು. ಕಸಾಪ ನೂತನ ಅಧ್ಯಕ್ಷ ಆನಂದ್ ಮಾತನಾಡಿದರು.

ಆಲೂರು; ನಾಲ್ವರು ಮರಗಳ್ಳರ ಬಂಧನ
ಆಲೂರು:
ಮರಗಳನ್ನು ಕದ್ದು ಸಾಗಿಸುತ್ತಿದ್ದ ನಾಲ್ವರು ಮರಗಳ್ಳರನ್ನು ಪೊಲೀಸರು ಬಂಧಿಸಿ 40 ಸಾವಿರ ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಗದ್ದೆಗೊಪ್ಪಲು ಗ್ರಾಮದ ಸರ್ಕಲ್ ಬಳಿ ಸೋಮವಾರ ನಡೆದಿದೆ.
ತಾಲೂಕಿನ ಬೆಂಬಳೂರು ಗ್ರಾಮದ ಕೃಷ್ಣಮೂರ್ತಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಕೂಳಿ ಮರಗಳನ್ನು ಕದ್ದು ಮಹೇಂದ್ರ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ರಮೇಶ(41), ಪರಮೇಶ(31), ಪಾಲಾಕ್ಷ(45) ಹಾಗೂ ಚಂದ್ರ ಅಲಿಯಾಸ್ ಚಂದ್ರೇಗೌಡ(48) ಎಂಬವರನ್ನು ಗದ್ದೆಕೊಪ್ಪಲು ಗ್ರಾಮದ ಸರ್ಕಲ್ ಬಳಿ ಬಂಧಿಸಲಾಯಿತು.
ತಾಲೂಕಿನಲ್ಲಿ ಮರಗಳ್ಳರ ಹಾವಳಿ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅವರು ಈ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್, ಪಿಎಸ್‌ಐ ತಿಮ್ಮಶೆಟ್ಟಿ ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.