ಜೀತ ವಿಮುಕ್ತಿಗೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಅ.25
ಜೀತದಾಳುಗಳ ಬಗ್ಗೆ ಜಿಲ್ಲಾಡಳಿತ ವಹಿಸಿರುವ ನಿರ್ಲಕ್ಷ್ಯ ಖಂಡಿಸಿ ಹಾಗೂ ರಾಗಿಮರೂರು ಗ್ರಾಮದ ಜೀತ ಪ್ರಕರಣದ ವರದಿಗೆ ಆಗ್ರಹಿಸಿ ಜೀವಿಕ, ಜೀತ ವಿಮುಕ್ತ ಕರ್ನಾಟಕ ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಹಾಗೂ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜೀತದಾಳು ಸಮೀಕ್ಷೆಯಾಗಿಲ್ಲ: ಜಿಲ್ಲೆಯ 8 ತಾಲೂಕುಗಳಲ್ಲಿ 911 ಜೀತದಾಳುಗಳನ್ನು ಗುರುತಿಸಿ, ಜೀತದಾಳುಗಳಿಂದ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಸಹ ಪ್ರಸ್ತುತದವರೆಗೂ ಯಾವುದೇ ಜೀತದಾಳುಗಳ ಬಗ್ಗೆ ತನಿಖೆಯಾಗಲಿ, ಸಮೀಕ್ಷೆಯಾಗಲಿ ಆಗಿಲ್ಲ. ಸರ್ಕಾರದ ಕಾನೂನಿನಲ್ಲಿ ಜೀತದಾಳುಗಳ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಜಾಗೃತಿ ಸಮಿತಿ ಸಭೆ ನಡೆಸಬೇಕು ಎಂದು ಕಾನೂನಿದ್ದರು ಸಹ ಈವರೆಗೂ ಜಿಲ್ಲಾ ಮಟ್ಟದಲ್ಲಿ ಅಥವಾ ಉಪ ವಿಭಾಗದ ಮಟ್ಟದಲ್ಲಿ ಜಾಗೃತಿ ಸಭೆಯನ್ನು ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನಿಖಾ ತಂಡ ರಚನೆಯಾಗಲಿ: ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜೀತದಾಳುಗಳ ಬಗ್ಗೆ ಮರು ಸಮೀಕ್ಷೆ ನಡೆಸಿ ತರಬೇತಿ ಕಾರ್ಯಗಾರ ನಡೆಸಿ ಅಧಿಕಾರಿಗಳಿಂದ ತನಿಖಾ ತಂಡ ರಚನೆ ಮಾಡಿ ಡಾ.ಎಸ್.ಆರ್.ಶಂಕರ್ ಮಾರ್ಗದರ್ಶನ ಅನುಸರಿಸಿ ಜೀತದಾಳುಗಳ ಸಮೀಕ್ಷೆ ಮಾಡಿ ವರದಿ ನೀಡುವಂತೆ ರಾಜ್ಯ ಸರ್ಕಾರ 2012ರಲ್ಲಿ ಆದೇಶ ಮಾಡಿದೆ. ಕಳೆದ ಫೆಬ್ರವರಿಯಲ್ಲಿ ಜಿಲ್ಲೆಯ 8 ತಾಲೂಕುಗಳಲ್ಲಿ ಅಧಿಕಾರಿಗಳಿಗೆ ತರಬೇತಿ ನಡೆಸಿದರೂ ಯಾವುದೇ ತಾಲೂಕಿನಲ್ಲಿ ತನಿಖಾ ತಂಡ ರಚನೆ ಮಾಡಿ ಅನುಬಂಧ 1ರಿಂದ9ರಲ್ಲಿ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ತಲುಪಿಸುವಂತೆ ಕೆಲಸವನ್ನು ಯಾವುದೇ ತಾಲೂಕುಗಳಲ್ಲಿ ನಡೆದಿಲ್ಲ ಎಂದು ಆರೋಪಿಸಿದರು.
ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ 30 ಜನ ಜೀತದಾಳುಗಳು ಜೀತ ಮಾಡುತ್ತಿದ್ದು, ಮುಂಗಡ ಹಣ ಪಡೆದು ವರ್ಷಕ್ಕೆ ಕಡಿಮೆ ವೇತನ ಪಡೆಯುತ್ತಿದ್ದು, ಬೇರೆ ಕಡೆ ಕೆಲಸ ಮಾಡದಂತೆ ನಿರ್ಬಂಧವಾಗಿದ್ದು, ಆ ಸ್ಥಳಕ್ಕೆ ಬೇಟಿ ನೀಡಿದ ಮಾಧ್ಯಮದವರು ನಿಜವಾದ ಜೀತದಾಳುಗಳ ಪರಿಸ್ಥಿತಿಯನ್ನು ಪ್ರಕಟಿಸಿದ್ದಾರೆ. ಇದನ್ನು ನೋಡಿ ಎಚ್ಚರಗೊಂಡ ಜಿಲ್ಲಾಧಿಕಾರಿ ರಾಗಿಮರೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಈ ಸಂದರ್ಭದಲ್ಲಿ ಜೀತದಾಳುಗಳಿಂದ ಹೇಳಿಕೆ ಪಡೆದು ಮೇಲ್ನೋಟಕ್ಕೆ ಜೀತ ಇದೆಯೋ ಇಲ್ಲವೋ ಎಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ತಕ್ಷಣವೇ ತನಿಖೆ ಮಾಡಿಸಿ 15 ದಿನಗಳಲ್ಲಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದರಂತೆ ರಾಗಿಮರೂರು ಗ್ರಾಮಕ್ಕೆ ಉಪ ವಿಭಾಗಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ತಹಸೀಲ್ದಾರ್, ಟಿ.ಎಸ್ ಡಬ್ಲ್ಯೂ, ಇಒ, ನಿರೀಕ್ಷಕರು ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 30 ಜನ ಜೀತದಾಳುಗಳ ಹೇಳಿಕೆ ಪಡೆದಿದ್ದರು.
ಯಾವುದೇ ಕ್ರಮ ಕೈಗೊಂಡಿಲ್ಲ: ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ವರದಿ ನೀಡುವಂತೆ ಕೇಳಿದರೆ ಜಿಲ್ಲಾಧಿಕಾರಿಗೆ ನೀಡಿರುವುದಾಗಿ ಹೇಳುತ್ತಿದ್ದಾರೆ. ಆದರೆ 2 ತಿಂಗಳು ಕಳೆದಿದ್ದರೂ ಸಹ ಈವರೆಗೂ ರಾಗಿಮರೂರು ಗ್ರಾಮದಲ್ಲಿನ ಜೀತದಾಳುಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ಜೀವಿಕ ಜಿಲ್ಲಾ ಸಂಚಾಲಕ ಬೈರಪ್ಪ, ಡಿ.ಪಿ.ಜಯರಾಂ, ಕೆ.ಈರಪ್ಪ, ಬಿ.ಸಿದ್ದಯ್ಯ, ರಾಜಶೇಖರ್, ಎಂ.ಸೋಮಶೇಖರ್, ನಾಗರಾಜ್ ಹೆತ್ತೂರು, ಪುಟ್ಟರಾಜು, ಕೃಷ್ಣದಾಸ್, ಎಚ್.ಪಿ.ಮಂಜು, ಎಚ್.ಎನ್.ಅಣ್ಣಯ್ಯ, ವಿಜಯಕುಮಾರ್, ಅರೇಹಳ್ಳಿ ನಿಂಗರಾಜು, ಪ್ರೊ. ಶ್ರೀನಿವಾಸ್, ಎಂ.ಆರ್.ಯೋಗೇಶ್, ವಿಜಯೇಂದ್ರ, ಕೆ.ಆರ್.ಮಲ್ಲೇಶ್, ಮಂಜು, ಜೈರಾಮ್, ಸತೀಶ್, ಮಲ್ಲೇಶ್ ಅಂಬುಗ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಬೇಡಿಕೆಗಳು
-ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ 30 ಜನ ಜೀತ ದಾಳುಗಳಿಗೆ ಬಿಡುಗಡೆ ಪತ್ರವನ್ನು ತಕ್ಷಣ ಕೊಡಿಸಬೇಕು. ಜಿಲ್ಲಾಧಿಕಾರಿಗಳ ಮಟ್ಟದ ಜಾಗೃತಿ ಸಮಿತಿ ಮತ್ತು ಉಪವಿಭಾಗದ ಮಟ್ಟದಲ್ಲಿ ಜಾಗೃತಿ ಸಭೆಯನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಸಭೆ ಕರೆಯಬೇಕು.
-ಜಿಲ್ಲೆಯ 8 ತಾಲೂಕುಗಳಲ್ಲಿ 1976ರ ಜೀತಪದ್ಧತಿ ರದ್ದತಿ ಕಾನೂನು 2012 ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳಿಗೆ ಎಸ್.ಆರ್.ಶಂಕರ್ ಮಾರ್ಗದರ್ಶನದಂತೆ ಆಯಾ ತಾಲೂಕುಗಳಲ್ಲಿ ತನಿಖಾ ತಂಡ ರಚನೆ ಮಾಡಿ ಜೀತದಾಳುಗಳ ಸಮೀಕ್ಷೆ ನಡೆಸಬೇಕು ಮತ್ತು ಜೀವಿಕ ಮತ್ತು ದಲಿತ ಮುಖಂಡರನ್ನು ಆ ತಂಡದಲ್ಲಿ ಸೇರಿಸಿಕೊಳ್ಳಬೇಕು.
-ಗಂಗೂರು ಜೀತ ವಿಮುಕ್ತರಿಗೆ ಭೂಮಿ ನೀಡಬೇಕು. 2008ರ ಕ್ರಿಯಾ ಯೋಜನೆಯನ್ನು ಅನುಷ್ಠಾಗೊಳಿಸಬೇಕು.ಜೀವಿಕ ಗುರ್ತಿಸಿ ಅರ್ಜಿ ಸಲ್ಲಿಸಿರುವ 911 ಜೀತದಾಳುಗಳನ್ನು ತನಿಖೆ ಮಾಡಿ ಬಿಡುಗಡೆಗೊಳಿಸಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿಕೊಡಬೇಕು.
-1976 ಮತ್ತು 1981ರಲ್ಲಿ ಜಿಲ್ಲೆಯಲ್ಲಿ ಜೀತದಾಳುಗಳಿಗೆ ಸರ್ಕಾರ ಭೂಮಿಗೆ ಸಾಗುವಳಿ ಚೀಟಿ ನೀಡಿದ್ದು, ಜೀತದಾಳುಗಳಿಗೆ ಭೂಮಿಯನ್ನು ನೀಡಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಭೂಮಿ ನೀಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

