'ಪರಂಪರೆ ಉಳಿವಿಗೆ ನೆರವು ಅಗತ್ಯ'
ಕ.ಪ್ರ.ವಾರ್ತೆ ಹಾಸನ ಅ.25
ಇತ್ತೀಚೆಗೆ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಲೆಗೆ ಪ್ರೋತ್ಸಾಹ ಸಿಗದೆ ಮರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹೊಯ್ಸಳ ಜಾನಪದ ಕಲಾ ಸಂಸ್ಥೆಯಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಫೂರ್ತಿ ತುಂಬುವ ಶಕ್ತಿ ಹೊಂದಿದೆ: ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕೆಲಸ ಆಗಬೇಕು. ಆದರೆ ಇತ್ತೀಚೆಗೆ ಅದಕ್ಕೆ ಪ್ರೋತ್ಸಾಹ ಲಭ್ಯವಾಗದೆ ಕಣ್ಮರೆಯಾಗುವಂತಾಗಿದೆ ಎಂದರು.
ಭರತ ಖಂಡದಲ್ಲಿ ಪಾರಂಪರಿಕ ವ್ಯವಸ್ಥೆ ಜೀವನದುದ್ದಕ್ಕೂ ಬೆಳೆದು ಬಂದಿದೆ. ಇದು ಸ್ಫೂರ್ತಿಯನ್ನು ತುಂಬುವ ಶಕ್ತಿಯನ್ನು ಹೊಂದಿದೆ. ಆದರೆ ಇದಕ್ಕೆ ಸ್ಪೂರ್ತಿ ಹಾಗೂ ಪ್ರೋತ್ಸಾಹಗಳು ಸಿಗುತ್ತಿಲ್ಲ. ಸಾಂಸ್ಕೃತಿಕ ಹಾಗೂ ಪರಂಪರ ತನ್ನದೆ ಆದ ಇತಿಹಾಸವನ್ನು ಹೊಂದಿದ್ದು, ಉಳಿಸಿಕೊಂಡು ಬಂದಿದೆ. ಅದನ್ನು ಬೆಳೆಸುವಂತಹ ಕಾರ್ಯವನ್ನು ಯುವ ಪೀಳಿಗೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ದೇಶ ಕಟ್ಟುವ ಕೆಲಸವಾಗಲಿ: ಭಾರತ ಶ್ರೀಮಂತ ಸಂಸ್ಕೃತಿ, ಪರಂಪರೆ ಹೊಂದಿರುವ ದೇಶ, ಅದೇ ರೀತಿ ಜಾನಪದ ಮತ್ತು ಇತರ ಕಲೆಗಳು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಇವುಗಳನ್ನು ಪೋಷಿಸಿ, ಪ್ರೋತ್ಸಾಹಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಭಾರತ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವಂತೆ ಯುವಶಕ್ತಿ ಕೂಡ ಬಲಿಷ್ಠವಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಆ ಮೂಲಕ ದೇಶ ಕಟ್ಟುವ ಕೆಲಸವಾಗಬೇಕು ಎಂದರು.
ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಆಪಾರವಾಗಿದ್ದು, ಸ್ವಾಮಿ ವಿವೇಕಾನಂದರ ಯುವಕರಲ್ಲಿ ಸ್ಫೂರ್ತಿ ಹಾಗೂ ಎಚ್ಚೆತ್ತುಕೊಳ್ಳುವ ಜಾಗೃತಿ ಭಾವನೆಗಳನ್ನು ಮಾಡಿಸಿದ್ದರು. ಆದ್ದರಿಂದ ಯುವ ಪೀಳಿಗೆಯು ವಿವೇಕಾ ನಂದರ ಆದರ್ಶಗುಣ ತತ್ವಗಳನ್ನು ಮೈಗೂಡಿಸಿಕೊಂಡು ನವ ಭಾರತ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದು ಕರೆ ನೀಡಿದರು.
ಇತ್ತೀಚೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಸಮಾಜವು ಕೆಟ್ಟ ಹಾದಿಯಲ್ಲಿ ಇದೆ. ಮುಂದೆ ನಮಗೆ ಸಮಾಜದ ಕಳಕಳಿ ಹೊಂದಿ ದಿಟ್ಟ ನಾಯಕನನ್ನು ಹುಟ್ಟಿ ಹಾಕಬೇಕಾಗಿದೆ. ಸಮಾಜ ಪ್ರಜ್ಞೆ ಹಾಗೂ ದೇಶಪ್ರೇಮ ಹೊಂದಿರುವ ನಾಯಕನನ್ನು ಸೃಷ್ಟಿಸುವಂತಹ ಶಕ್ತಿ ಯುವ ಪೀಳಿಗೆಯು ಹೊಂದಿದ್ದು, ಅದನ್ನು ಯುವಕರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವ್ಯಕ್ತಿತ್ವ ರೂಪಿಸುವ ಶೈಕ್ಷಣಿಕ ವ್ಯವಸ್ಥೆ ಬೇಕು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜನಾರ್ದನ್ ಮಾತನಾಡಿ, ಯುವಕರನ್ನು ಪ್ರೋತ್ಸಾಹಿಸುವ ಅವರಲ್ಲಿ ಉತ್ತಮ ಸಂಸ್ಕೃತಿ ಹಾಗೂ ವ್ಯಕ್ತಿತ್ವ ರೂಪಿಸುವ ಶೈಕ್ಷಣಿಕ ವ್ಯವಸ್ಥೆ ಜಾರಿಯಾಗಬೇಕು ಎಂದ ಅವರು, ಜೀವನದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಇದನ್ನು ಸರಿಪಡಿಸುವ ಹಾಗೂ ಶಾಲಾ ಕಾಲೇಜು ಹಂತದಲ್ಲೇ ಕಲೆ, ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ತರಬೇತಿ ನೀಡುವ ಪದ್ಧತಿ ಅನುಸರಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕರಿಯಪ್ಪ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮತ್ತಿತರರು ಮಾತನಾಡಿದರು.
ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ನಾರಾಯಣ್ ತಮ್ಮ ಕಾಲೇಜಿನಲ್ಲಿ ಜಾನಪದ ಕಲೆಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಇತರ ಕಾಲೇಜುಗಳಲ್ಲಿ ಇದನ್ನು ಅನುಸರಿಸಬೇಕಾದ ಅಗತ್ಯಗಳ ಬಗ್ಗೆ ತಿಳಿಸಿದರು.
ಜಾನಪದ ಗೀತೆ, ನೃತ್ಯ, ಏಕಾಂತ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದ್ಯ ಸಂಗೀತ, ಶಾಸ್ತ್ರೀಯ ನೃತ್ಯಗಳು ಸೇರಿದಂತೆ ವಿವಿಧ ಪ್ರಕಾರಗಳ ಸ್ಪರ್ಧೆಗಳನ್ನು ಎರಡು ಪ್ರತ್ಯೇಕ ವೇದಿಕೆಗಳಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಚಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

