ರಾಜೀವ್ಗಾಂಧಿ ಮಾಹಿತಿ ಕೇಂದ್ರ ಕಟ್ಟಡ ಅಪೂರ್ಣ
ಜಾವಗಲ್: ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಳಗಳಲ್ಲಿ ಕೇಂದ್ರದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ಗ್ರಾಮೀಣ ಜನರಿಗೆ ಅನುಕೂಲವಾಗುವಂತಹ ರಾಜೀವ್ಗಾಂಧಿ ಮಾಹಿತಿ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಹೋಬಳಿಯ 9 ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಮಾಹಿತಿ ಸೇವಾಕೇಂದ್ರ ನಿರ್ಮಾಣವಾಗಿದ್ದು 7 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಉದ್ಘಾಟನೆಯಾಗಿ ಕಳೆದ 6 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಮಾಹಿತಿ ಕೇಂದ್ರ ಪೂರ್ಣವಾಗದಿರಲು ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದು ಜಾವಗಲ್ ಗ್ರಾಮ ಪಂಚಾಯಿತಿ ಮಾಹಿತಿ ಕೇಂದ್ರದ ಸಮಸ್ಯೆಯಾದರೆ ಬಂದೂರು ಗ್ರಾಮ ಪಂಚಾಯಿತಿಯಲ್ಲೂ ಮಾಹಿತಿ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಕಿಟಕಿ ಬಾಗಿಲುಗಳನ್ನು ಹಾಕದೆ ಅರ್ಧಕ್ಕೆ ನಿಂತಿದೆ. ಯೋಜನೆಯ ಕಟ್ಟಡಗಳು ಅಪೂರ್ಣವಾಗಿರುವುದಕ್ಕೆ ಗ್ರಾಮದ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಕಲಚೇತನರ ವಿವಾಹಿತರಿಗೆ ಪ್ರೋತ್ಸಾಹ ಧನ
ಹಾಸನ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2013-14ನೇ ಸಾಲಿನ ದಿನಾಂಕ 28-8-2013ರ ನಂತರ ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ನಿರಂತರವಾಗಿ ಮಾಸಿಕ ಆದಾಯ ದೊರಕಿಸಲು ವಿಕಲಚೇತನ ಹಾಗೂ ಸಾಮಾನ್ಯ ವ್ಯಕ್ತಿಯ ಹೆಸರಿನಲ್ಲಿ 50000 ರು. ಹೂಡಿಕೆಯ ರೂಪದಲ್ಲಿ ನೀಡಿ ಪ್ರೋತ್ಸಾಹ ನೀಡಲು ಹಾಗೂ ಅದರಿಂದ ಬರುವ ಬಡ್ಡಿ ಹಣವನ್ನು ಭತ್ಯೆಯಾಗಿ ವಿಕಲಚೇತನರನ್ನು ಮದುವೆಯಾದ ಸಾಮಾನ್ಯ ವ್ಯಕ್ತಿಗೆ ನೀಡುವ ಯೋಜನೆಗೆ ಷರತ್ತುಗಳನ್ವಯ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಕ್ರಾಸ್, ಕೆ.ಆರ್.ಪುರಂ, ಹಾಸನ ಇವರಿಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂ 08172-264546 ನ್ನು ಸಂಪರ್ಕಿಸುವುದು.
ಅಂಧ ಮಹಿಳೆಗೆ ಜನಿಸುವ ಮಕ್ಕಳಿಗೆ ಶಿಶುಪಾಲನಾ ಭತ್ಯೆ
ಹಾಸನ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2013-14ನೇ ಸಾಲಿನಿಂದ ವಾರ್ಷಿಕ ಆದಾಯ 2.50 ಲಕ್ಷ ರು. ಮಿತಿಯೊಳಗಿನ ಬಡ ಕುಟುಂಬಗಳ ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ, 2 ಹೆರಿಗೆಯವರೆಗೆ ಪ್ರತಿ ಹೆರಿಗೆ ನಂತರ 2 ವರ್ಷ ಅವಧಿಗೆ ಆರೋಗ್ಯ ಹಾಗೂ ಪೌಷ್ಟಿಕ ಆಹಾರ ದೃಷ್ಟಿಯಿಂದ ತಿಂಗಳಿಗೆ 2000 ರು. ಶಿಶುಪಾಲನಾ ಭತ್ಯೆಯನ್ನು ನೀಡುವ ಯೋಜನೆಗೆ ಷರತ್ತುಗಳನ್ವಯ ಅಂಧ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಂಧ ಮಹಿಳೆಯರಿಂದ ದಾಖಲಾತಿಗಳೊಂದಿಗೆ ಅರ್ಜಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಕ್ರಾಸ್, ಕೆ.ಆರ್.ಪುರಂ, ಹಾಸನ ಇವರಿಗೆ ಸಲ್ಲಿಸತಕ್ಕದ್ದು. ಮಾಹಿತಿಗಾಗಿ ದೂ 08172-264546 ಸಂಪರ್ಕಿಸಿ.
ಶಿಕ್ಷಕರ ದಿನಾಚರಣೆ
ಹಾಸನ: ಶಿಕ್ಷಕರ ಸದ್ಗುಣಗಳನ್ನು ಗಮನಿಸಿಕೊಳ್ಳುತ್ತಾ ಬೆಳೆಯುವ ವಿದ್ಯಾರ್ಥಿ ತಾನೂ ಸದ್ಗುಣಿಯಾಗುತ್ತಾನೆ. ಅದರಿಂದ ಸಮಾಜದಲ್ಲಿ ಶಾಂತಿ ತನ್ನಷ್ಟಕ್ಕೆ ತಾನೇ ಸ್ಥಾಪನೆಯಾಗುತ್ತದೆ ಎಂದು ಸಮಾಜ ಸೇವಕಿ ವಾಸವಿ ವಿದ್ಯಾಕೇಂದ್ರ ಟ್ರಸ್ಟಿನ ಉಪಾಧ್ಯಕ್ಷೆ ವತ್ಸಲಾ ನಾರಾಯಣ್ ಅಭಿಪ್ರಾಯಪಟ್ಟರು. ನಗರದ ವಾಸವಿ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸರ್.ಎಂ.ವಿ. ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕನಾಗಬಲ್ಲ. ಶಿಕ್ಷಕ ತಾನು ಕೇವಲ ಬೋಧನೆಯನ್ನು ಮಾತ್ರವಷ್ಟೇ ಮಾಡುವುದಲ್ಲ. ತನ್ನ ನಡತೆಯಿಂದಲೂ ವಿದ್ಯಾರ್ಥಿಗಳಿಗೆ ಪ್ರೇರಕನಾಗಿರಬೇಕು. ತಮ್ಮ ಮಾತು-ನಡತೆ ಎರಡರಲ್ಲೂ ಆದರ್ಶಪ್ರಾಯರಾಗಿದ್ದುದರಿಂದಲೆ ಇಂದಿಗೂ ರಾಧಾಕೃಷ್ಣನ್ ಹಾಗೂ ವಿಶ್ವೇಶ್ವರಯ್ಯನವರು ನಿಜವಾದ ಭಾರತರತ್ನಗಳಾಗಿ ವಿಶ್ವವಂದ್ಯರಾಗಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳು ಶಿಕ್ಷಕರಿಂದ ಸಸಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದುದು ವಿಶೇಷವೆನಿಸಿತು. ವಿದ್ಯಾರ್ಥಿಗಳ ಪರಿಸರಪ್ರೇಮವನ್ನು ಎಲ್ಲರೂ ಪ್ರಶಂಸಿಸಿದರು.
ಜೂಜಾಟ: 4 ಬಂಧನ
ಅರಸೀಕೆರೆ: ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ತಾಲೂಕಿನಲ್ಲಿ ಬುಧವಾರ ನಡೆದಿದೆ. ತಾಲೂಕಿನ ಮಾಲೇಕಲ್ಲು ತಿರುಪತಿ ಗ್ರಾಮದ ಕೆರೆಯ ಪಕ್ಕದಲ್ಲಿ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು. ಮಾಲೇಕಲ್ಲು ತಿರುಪತಿಯ ಚಂದ್ರು (40), ಬಾಣಾವರದ ಪ್ರದೀಪ (28), ಶಾರದ ನಗರದ ಮಲ್ಲೇಶ (50) ಮತ್ತು ವಿದ್ಯಾನಗರದ ಕೆಂಪರಾಜು (37) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1,40,190 ರು. ನಗದನ್ನು ವಶಪಡಿಸಿ ಕೊಂಡಿದ್ದಾರೆ. ಪೊಲೀಸರು ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

