ಹಾಸನಾಂಬ ದೇಗುಲ ತೆರೆವ ಬಗ್ಗೆ ಮೊದಲೇ ಪ್ರಚಾರ
ಕ.ಪ್ರ.ವಾರ್ತೆ ಹಾಸನ ಸೆ.19
ಪ್ರಸಿದ್ಧ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಈ ಬಾರಿ ಇನ್ನೂ ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಈಗಿನಿಂದಲೇ ಸಕಲ ಸಿದ್ಧತೆ ಪ್ರಾರಂಭಿಸಿದ್ದು, ಇದಕ್ಕಾಗಿ ನಾನಾ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ನಿರ್ಧರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಾಸನಾಂಬ ದೇವಿ ಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಹಾಸನಾಂಬ ದೇವಿ ಜಾತ್ರೆ ಪ್ರಸಿದ್ಧ ಹಾಗೂ ಭಾವನಾತ್ಮಕ ಅಂಶಗಳನ್ನು ತುಂಬಿರುವ ಉತ್ಸವ. ಇದನ್ನು ಯಾವುದೇ ರೀತಿಯಲ್ಲಿ ಕುಂದುಕೊರತೆಗಳಿಲ್ಲದಂತೆ ನಿರ್ವಹಿಸುವುದು ಎಲ್ಲರ ಕರ್ತವ್ಯ ಎಂದರು.
ಅಚ್ಚುಕಟ್ಟಾದ ವ್ಯವಸ್ಥೆ: ದೇವಸ್ಥಾನದ ಬಾಗಿಲು ತೆರೆಯುವ ದಿನಾಂಕ, ಪೂಜಾ ಸಮಯ ದರ್ಶನ ಸಮಯ ಬಗ್ಗೆ ಮುಂಚಿತವಾಗಿಯೇ ಪ್ರಚಾರಗೊಳಿಸಲಾಗುವುದು. ಮುಜರಾಯಿ ಇಲಾಖೆ ಗಮನಕ್ಕೆ ತರಲಾಗುವುದು. ಎಲ್ಲಾ ಭಕ್ತರಿಗೂ ದರ್ಶನದ ಅವಕಾಶ ದೊರೆಯುವಂತೆ ಅಚ್ಚುಕಟ್ಟಾದ ವ್ಯವಸ್ಥೆ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ದೇವಾಲಯದ ಬಾಗಿಲು ತೆರೆಯುವ ದಿನದಿಂದ ಮುಕ್ತಾಯದ ವರೆಗೆ ಒಟ್ಟಾರೆ ಮೇಲ್ವಿಚಾರಣಾ ಜವಾಬ್ದಾರಿಯನ್ನು ವಹಿಸುವಂತೆ ಉಪ ವಿಬಾಗಾಧಿಕಾರಿ ಶರತ್ ಅವರಿಗೆ ಹಾಗೂ ಉಳಿದಂತೆ ದೇವಾಲಯದ ವ್ಯವಸ್ಥೆಗಳನ್ನು ನೋಡಿಕೊಳ್ಳಲು ನೆರವಾಗುವಂತೆ ತಹಶೀಲ್ದಾರ್ ಮಂಜುನಾಥ್ಗೆ ಸೂಚಿಸಿದರು.
ದೇವಾಲಯದಲ್ಲಿ ನೂಕು ನುಗ್ಗಲಾಗದಂತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ನಿಗಾವಹಿಸುವಂತೆ ಹಾಗೂ ಆಗಮಿಸುವ ಭಕ್ತಾಧಿಗಳು,ಗಣ್ಯ ಮತ್ತು ಅತಿ ಗಣ್ಯರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ ದೇವಸ್ಥಾನದ ಬಾಗಿಲು ತೆರೆದಿರುವಷ್ಟು ದಿನಗಳ ಕಾಲ ಕುಡಿಯಲು ಶುದ್ದ ನೀರು, ರುಚಿಕರವಾದ ಪ್ರಸಾದ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಇದರ ಮೇಲ್ವಿಚಾರಣೆ ವಹಿಸುವಂತೆ ಹೇಳಿದರು. ಈ ಹಿಂದಿನಂತೆ ಬ್ಯಾರಿಕೇಡ್ ವಿದ್ಯುತ್ ದೀಪಾಲಂಕಾರ ಮತ್ತಿತರ ವಿಷಯಗಳನ್ನು ಲೋಕೋಪಯೋಗಿ ಇಲಾಖೆ, ಸ್ವಚ್ಛತೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ನಗರ ಸಭೆವತಿಯಿಂದ ಮಾಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಅಂಗವಿಕಲರು, ವಯೋವೃದ್ಧರಿಗೆ ಸುಗಮ ದರ್ಶನ: ಅಂಗವಿಕಲರು ವಯೋವೃದ್ಧರಿಗೆ ಮಾನವೀಯತೆಯಿಂದ ನೆರವಾಗಿ ಹೆಚ್ಚುಹೊತ್ತು ಸರದಿ ಸಾಲಿನಲ್ಲಿ ನಿಲ್ಲಿಸದೆ ಸುಗಮ ದರ್ಶನಕ್ಕೆ ಅವಕಾಶ ದೊರಕಿಸಲು ಪ್ರಯತ್ನಿಸುವಂತೆ ತಿಳಿಸಿದ ಅವರು, ದೇವಾಲಯದೊಳಗೆ ಸ್ವಯಂ ಸೇವಕರನ್ನಾಗಿ ಸರ್ಕಾರಿ ನೌಕರರನ್ನು ನೇಮಿಸಿ ಕಂದಾಯ ಇಲಾಖೆಯಲ್ಲಿರುವ ವೈರ್ಲೆಸ್ ಸಾಧನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಚ್ಚುಕಟ್ಟಾಗಿ ಉತ್ಸವ ನಿರ್ವಹಿಸಬೇಕೆಂದರು. ಭಕ್ತರು ನೀಡುವ ಹಣ ಯಾವುದೇ ರೀತಿಯೂ ವ್ಯತ್ಯಯವಾಗದಂತೆ ಎಚ್ಚರವಹಿಸಲು ಅವರು ಸೂಚಿಸಿದರು.
ದೇವಾಲಯದ ಮೂರು ಗೋಪುರಗಳು ಪೂರ್ಣಗೊಂಡ ನಂತರ ಒಟ್ಟಿಗೆ ಉದ್ಘಾಟನೆ ನೆರವೇರಿಸಬಹುದು. ಗೋಪುರ ನಿರ್ಮಾಣ ಅಥವಾ ಕಳಸಕ್ಕೆ ಯಾರಿಂದಲೂ ದೇಣಿಗೆ ಕೋರುವ ಅಥವಾ ಸ್ವೀಕರಿಸುವ ಅಗತ್ಯವಿಲ್ಲ ದೇವರ ಹುಂಡಿಯಲ್ಲಿ ಸಂಗ್ರಹವಾಗುವ ಹಣದಿಂದಲ್ಲೇ ಇದನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ಅವರು ಈ ಹಿಂದೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯುವ ಸಂದರ್ಭಗಳಲ್ಲಿ ಅನುಸರಿಸಲಾಗುತ್ತಿದ್ದ ಕ್ರಮಗಳು ದೇವಾಲಯದ ಕಟ್ಟುಪಾಡುಗಳು ಪೂರ್ವಭಾವಿ ತಯಾರಿ ಜನಸಂದಣೆ ನಿಭಾಯಿಸುವುದು ಸೇರಿದಂತೆ ಹಲವು ವಿಷಯಗಳನ್ನು ಸಭೆಯ ಗಮನಕ್ಕೆ ತಂದರು.
ತಹಸೀಲ್ದಾರ್ ಮಂಜುನಾಥ್ ಹಿಂದಿನ ಅನುಭವ ವಿವರಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಿಗಳ ಸಭೆ ಕರೆದು ಜವಾಬ್ದರಿಯನ್ನು ಇನ್ನಷ್ಟು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಉಪ ವಿಭಾಗಾಧಿಕಾರಿ ಶರತ್ ಹಾಗೂ ನಾನಾ ಇಲಾಖಾ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

