ಜಾನಪದ ಸೊಗಡು ಕಂಗೊಳಿಸುವ ಕೆಲಸವಾಗಲಿ
ಹಾಸನ: ಜಾನಪದ ಕಲೆ, ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿ ಇಂದು ವಿನಾಶದ ಅಂಚಿನತ್ತ ಸಾಗುತ್ತಿದ್ದು, ಇದಕ್ಕೆ ಪುನಶ್ಚೇತನ ನೀಡುವ ಕೆಲಸ ಎಲ್ಲೆಡೆಯಿಂದ ನಡೆಯಬೇಕಿದೆ ಎಂದು ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಪ್ರಾಧ್ಯಾಪಕ, ಹಾಸ್ಯ ಭಾಷಣಕಾರ ಪ್ರೊ. ಕೃಷ್ಣೇಗೌಡ ಪ್ರತಿಪಾದಿಸಿದರು.
ನಗರದ ಆದಿಚುಂಚನಗಿರಿ ಶಾಖಾ ಮಠ ಆರಂಭಿಸಿರುವ 'ಗುರು ತೋರಿದ ದಾರಿ ಹುಣ್ಣಿಮೆ ತಿಂಗಳು ಮಾಮನ ತೇರು' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪದೀಯ ತಳಹದಿ ಮೇಲೆ ಸ್ಥಾಪಿತವಾದ ಆದಿ ಚುಂಚನಗಿರಿ ಮಠ, ಪುರಾತನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.
ದೇಶೀಯ ಸಂಸ್ಕೃತಿಯ ಪ್ರತೀಕ: ಹುಣ್ಣಿಮೆ ಚಂದರನಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಹಾಗೂ ಪೂಜ್ಯ ಭಾವನೆ ಆದಿಚುಂಚನಗಿರಿ ಮಠಕ್ಕೂ ಇದೆ. ಇಂದು ದೇಶೀಯ ಸಂಸ್ಕೃತಿಯ ಪ್ರತೀಕ ವಾಗಿರುವ ಗ್ರಾಮೀಣ ಸೊಗಡು, ಜಾನಪದ ಕಲೆ, ಸಂಸ್ಕೃತಿ ನಾನಾ ಕಾರಣಗಳಿಂದಾಗಿ ವಿನಾಸದ ಅಂಚಿಗೆ ಸಾಗುತ್ತಿದೆ. ಇದನ್ನು ತಡೆಗಟ್ಟಿ ಅಳಿಯುತ್ತಿರುವ ಸಂಪ್ರದಾಯ, ಸಂಸ್ಕೃತಿ ಪುನರುಜ್ಜೀವನಗೊಳಿಸಲು ಗುರು ತೋರಿದ ದಾರಿ ಹೆಸರಿನ ಧಾರ್ಮಿಕ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಪಾಶ್ಚಿಮಾತ್ಯ ಪ್ರಭಾವ ಸಲ್ಲ: ಆಧುನಿಕ ಸಂದರ್ಭದಲ್ಲಿ ಎಲ್ಲೆಡೆ ಪಾಶ್ಚಿಮಾತ್ಯ ಪ್ರಭಾವಗಳಿಗೆ ಎಲ್ಲರೂ ಆಕರ್ಷಿತರಾಗುತ್ತಿರುವುದರಿಂದ ನಮ್ಮ ಸಂಸ್ಕೃತಿ ಬಗೆಗಿನ ಒಲವು, ಆಸಕ್ತಿ ಕಡಿಮೆಯಾಗುತ್ತಿದೆ.
ಈ ಮನೋಧೋರಣೆ ಬದಲಾಗುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಒಂದೇ ರೀತಿಯ ಸಂಸ್ಕತಿ ಇದ್ದರೆ, ನಮ್ಮ ದೇಶದಲ್ಲಿ ವೈವಿಧ್ಯಮಯ ಆಚಾರ-ವಿಚಾರ, ನಡೆ-ನುಡಿ ಚಾಲ್ತಿಯಲ್ಲಿದೆ ಎಂದರು.
ನಮ್ಮತನ ಬಿಡಬಾರದು: ಹೀಗಿದ್ದರೂ ನಾವು ನಮ್ಮತನ ಬದಿಗೊತ್ತಿ ಅನ್ಯ ಸಂಸ್ಕೃತಿಯತ್ತ ಮಾರು ಹೋಗುತ್ತಿರುವುದು ಒಳ್ಳೇ ಬೆಳವಣಿಗೆಯಲ್ಲ ಎಂದು ತಿಳಿ ಹೇಳಿದರು. ನಮ್ಮ ನಮ್ಮ ಭಾವನೆ ಆಧಾರದ ಮೇಲೆ ನಾವು ನೋಡುವ, ಆಚರಿಸುವ ನಂಬಿಕೆ, ಪದ್ಧತಿಗಳು ನಿರ್ಧಾರವಾಗುತ್ತವೆ. ಉಹಾಹರಣೆಗೆ ಜಾನುವಾರು ಸಗಣಿಯನ್ನು ನೋಡಿದರೆ ಅದು ಬರೀ ತೊಪ್ಪೆಯಷ್ಟೆ. ಆದ್ರೆ ಅದನ್ನು ಉಂಡೆಕಟ್ಟಿ ಗರಿಕೆ ಚುಚ್ಚಿದರೆ ಗಣಪತಿಯಾಗುತ್ತದೆ. ಅಂತೆಯೇ ಕಲ್ಲನ್ನು ಒದ್ದರೆ ಅದು ಬರೀ ಕಲ್ಲು ಅಷ್ಟೆ, ಅದಕ್ಕೆ ಪೂಜಿಸಿದರೆ ದೇವರು ಅಂತ ಕಾಣುತ್ತೇವೆ ಎಂದು ವಿವರಿಸಿದರು.
ಪರಿಸರ ಸಂರಕ್ಷಣೆಗೆ ಒತ್ತು: ಲಿಂಗ್ಯಕ್ಯ ಬಾಲಗಂಗಾಧರನಾಥ ಸ್ವಾಮೀಜಿ 6 ಕೋಟಿ ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು. ಆ ಸಸಿಗಳನ್ನು ಕೇವಲ ಒಕ್ಕಲಿಗರಿಗಾಗಿ ನೆಡಲಿಲ್ಲ ಅನ್ನೋದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಜಾತ್ಯತೀತ ನೆಲೆಗಟ್ಟಿನ ಮೇಲೆ ಸ್ಥಾಪಿತವಾದ ಆದಿಚುಂಚನಗಿರಿ ಮಠ ಆರೋಗ್ಯ, ಶಿಕ್ಷಣ, ಸಮಾಜ ಮತ್ತು ಧಾರ್ಮಿಕ ಸೇವೆ ಹಾಗೂ ತ್ರಿವಿಧ ದಾಸೋಹದಂತಹ ಪುಣ್ಯದ ಕೆಲಸ ಮಾಡುವ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಾಗೃತಿ ಮೂಡಿಸುವ ಉದ್ದೇಶ: ಜಾನಪದ ಕಲೆ ಉಳಿಸಿ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಗುರುತೋರಿದ ದಾರಿ ಹುಣ್ಣಿಮೆ ತಿಂಗಳು ಮಾಮನ ತೇರು ಕಾರ್ಯಕ್ರಮದ ಅಂಗವಾಗಿ ಪ್ರತಿ ತಿಂಗಳು ವಿವಿಧ ಉಪನ್ಯಾಸಕರು, ಒಂದೊಂದು ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದು, ವರ್ಷದ ನಂತರ ಈ ಕಾರ್ಯಕ್ರಮವನ್ನು ಗ್ರಾಮೀಣ ಭಾಗ ಮತ್ತು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಮುಖ್ಯವಾಗಿ ಜನರಲ್ಲಿ ದೇಶೀಯ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆದಿಹಳ್ಳಿ ಮಠದ ಶಿವಪುತ್ರ ಸ್ವಾಮೀಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ.ಮದನಗೌಡ ಮೊದಲಾದವರು ಇದ್ದರು.
ಶಾಖಾ ಮಠದ ವ್ಯವಸ್ಥಾಪಕ ಚಂದ್ರಶೇಖರ್ ಸ್ವಾಗತಿಸಿದರು. ಇದೆ ವೇಳೆ ಕಾಲ ಬೈರವೇಶ್ವರ ಭಜನಾ ಮಂಡಳಿ, ಶಕ್ತಿ ಮಹಿಳಾ ಮಂಡಳಿ ಹಾಗೂ ಶೈಲ ವಲ್ಲಭ ಮಹಿಳಾ ಮಂಡಳಿಯವರು ಭಜನೆ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

