ಹಾಸನ

ಲಂಬಾಣಿ ಸಮಾಜ ಸಂಘಟಿತ ಶಕ್ತಿಯಾಗಿ ಬೆಳೆಯಲಿ

Published On :

ಕನ್ನಡಪ್ರಭ ವಾರ್ತೆ ಅರಸೀಕೆರೆ ಸೆ. 23
ಅತ್ಯಂತ ಹಿಂದುಳಿದ ಲಂಬಾಣಿ ಸಮಾಜ ಸಂಘಟಿತ ಶಕ್ತಿಯಾಗಿ ಬೆಳೆಯಬೇಕಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
 ತಾಲೂಕಿನ ಮೈಸೂರು ಸೀಮೆ ಲಂಬಾಣಿ ಸಂಘ ಪಟ್ಟಣದ ಸುಭಾಷ್‌ನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
  12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮೂಲಕ ಜಾತಿ ವ್ಯವಸ್ಥೆಯನ್ನು ದೂರ ಮಾಡುವ ಪ್ರಯತ್ನ ಮಾಡಿದರು. ಆದರೆ ಇನ್ನೂ ಜೀವಂತವಾಗಿರುವ ಜಾತಿ ಪದ್ಧತಿಯಲ್ಲಿ ನಮ್ಮ ನಮ್ಮಲ್ಲಿಯೇ ಸಣ್ಣಪುಟ್ಟ ಕಾರಣಗಳಿಗಾಗಿ ದ್ವೇಷ ಮತ್ತು ಅಸೂಯೆಗಳ ಮನೋಭಾವನೆ ಬೆಳೆಸಿಕೊಳ್ಳುತ್ತಿರುವುದು ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಮಾರಕ ಎಂಬ ಸತ್ಯಸಂದೇಶ ಅರಿತು ನಾವುಗಳು ಬಾಳಬೇಕಾಗಿದೆ ಎಂದು ಹೇಳಿದರು.
  ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೇಮಾವತಿ ಮತ್ತು ಯಗಚಿ ನದಿ ಮೂಲದ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಲಾಗಿದ್ದು, ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಕಾಣಲಿದೆ. ಅಲ್ಲದೆ ಇಲ್ಲಿನ ಜನರಿಗೆ ಅಗತ್ಯ ಉದ್ಯೋಗ ಸೃಷ್ಟಿಸಲು ಬೃಹತ್ ಕೈಗಾರಿಕೆಗಳ ಸ್ಥಾಪನೆ ತಮ್ಮ ಕನಸಾಗಿದ್ದು, ಅದನ್ನು ನನಸು ಮಾಡಲು ಕ್ಷೇತ್ರದ ಜನತೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಹಾರೈಸಬೇಕೆಂದರು.
 ತಾಲೂಕು ಸಂಘದ ಅಧ್ಯಕ್ಷ ಸಿದ್ದಾನಾಯ್ಕ್ ಮಾತನಾಡಿ, ಎಲ್ಲಾ ಜಾತಿ ವರ್ಗಕ್ಕೂ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಸಹಕಾರ ನೀಡಿದ್ದಾರೆ. ಅಂತೆಯೇ ನಮ್ಮ ಲಂಬಾಣಿ ಸಮಾಜಕ್ಕೂ ಪಟ್ಟಣದಲ್ಲಿ ವಿಶಾಲ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
  ಜಿಪಂ ಸದಸ್ಯ ಅಗ್ಗುಂದ, ಕೃಷ್ಣನಾಯ್ಕ್, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನುಕುಮಾರ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ತಾಲೂಕು ಯಾದವ ಸಮಾಜದ ಅಧ್ಯಕ್ಷ ಬಂಡಿಗೌಡ್ರ ರಾಜಣ್ಣ, ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ಯಳವಾರೆ ಕೇಶವಮೂರ್ತಿ ಹಾಗೂ ಲಂಬಾಣಿ ಸಮಾಜದಿಂದ ಗ್ರಾಪಂ  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದವರನ್ನು ಸಮಾಜವತಿಯಿಂದ ಸನ್ಮಾನಿಸಲಾಯಿತು.
ತಾಲೂಕು ಲಂಬಾಣಿ ಸಮಾಜದ ಗೌರವಾಧ್ಯಕ್ಷ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಆರ್. ಲಚ್ಚಾನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಸಿದ್ದನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಚತುರನಾಯ್ಕ್, ಸಹಕಾರ್ಯದರ್ಶಿ  ಎಚ್.ಎಸ್.ಜಯಣ್ಣ ಇದ್ದರು. ಮುಖಂಡ  ಮೋತಿಲಾಲ್ ನಾಯ್ಕ್ ನಿರೂಪಿಸಿದರು.

ವಿಜೃಂಭಣೆಯ 56 ನೇ ವರ್ಷದ ಮಹಾಗಣಪತಿ ಮಹೋತ್ಸವ
ಹೊಳೆನರಸೀಪುರ: ಪಟ್ಟಣದ ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ಲೋಕಕಲ್ಯಾಣಾರ್ಥವಾಗಿ ದಶಕಗಳಿಂದಲೂ ನಡೆಸುತ್ತಾ ಬಂದಿರುವ ಮಹಾಗಣಪತಿ ಹೋಮ, 56ನೇ ಗಣಪತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ನಾಡಿನೆಲ್ಲೆಡೆ ಸುಭಿಕ್ಷ ನೆಲೆಸಿ ಜನ ಜಾನುವಾರು, ಜೀವರಾಶಿಗಳಿಗೆ ಅನ್ನ ನೀರು ಸಮೃದ್ಧಿಯಾಗಿ ದೊರೆಯಲಿ ಎಂಬ ಸದಾಶಯದೊಂದಿಗೆ ಇಲ್ಲಿ ಆಚರಿಸಲ್ಪಡುವ ಮಹಾಗಣಪತಿ ಹೋಮಕ್ಕೆ ತನ್ನದೇ ಆದ ವಿಶಿಷ್ಟವಾದ ಸ್ಥಾನವಿದೆ. ಪ್ರತಿ ವರ್ಷವೂ ನಡೆಯುವ ಹೋಮ ಹಾಗೂ ನಂತರದಲ್ಲಿ ನಡೆಯುವ ಅನ್ನಸಂತರ್ಪಣಾ ಕಾರ್ಯದಲ್ಲಿ ಸಾವಿರಾರು ಭಕ್ತರು  ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುವುದು ವಾಡಿಕೆಯಾಗಿದೆ.
ಈ ಬಾರಿಯೂ ಇಲ್ಲಿನ ಮಹಾಗಣಪತಿ ಪೆಂಡಾಲಿನಲ್ಲಿ ಮಹಾಗಣಪತಿ ಹೋಮವನ್ನು ಸಕಲ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು  ಹಾಜರಿದ್ದು, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ನಾಯಕ ಹಾಗೂ ಸ್ಥಳೀಯ ಶಾಸಕ ಎಚ್.ಡಿ.ರೇವಣ್ಣ ದಂಪತಿ ಮಹಾಗಣಪತಿ ಹೋಮದಲ್ಲಿ ಪಾಲ್ಗೊಂಡಿದ್ದರು.
  ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದಿ ಸಾಕಷ್ಟು ಜನಪ್ರಿಯತೆಗೂ ಪಾತ್ರವಾಗುತ್ತಿರುವ ಅನ್ನಸಂತರ್ಪಣಾ ಕಾರ್ಯಕ್ಕೆ ಪಟ್ಟಣದ ಎಲ್ಲಾ ವರ್ಗದ ಜನರೂ ಉದಾರತೆಯಿಂದ ಧನ ಧವಸ ಧಾನ್ಯ ಹಾಗೂ ತಮ್ಮ ಶಕ್ತಿಮೀರಿದ ಸಹಕಾರ ನೀಡಿದ್ದರು.ರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರು ಹಾಗೂ ರಾಜ್ಯಪ್ರಶಸ್ತಿ ವಿಜೇತರೂ ಆದ ಮಾದೇಶ್ವರ ದಯಬಾರದೇ ಖ್ಯಾತಿಯ ಎಂ.ಮಹದೇವಸ್ವಾಮಿ ತಂಡದವರಿಂದ ಅಮೋಘ ಗೀತೆ ಗಾಯನ ನಡೆಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.