ಹಾಸನ

ಇಂದು ಬುಡಕಟ್ಟು ಒಕ್ಕೂಟದಿಂದ ಪ್ರತಿಭಟನೆ

Published On :

ಹಾಸನ: ಜಾತಿ ನಿಂದನೆ ಪ್ರಕರಣ ದಾಖಲಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.26 ರಂದು ಕರ್ನಾಟಕ ಅರಣ್ಯಮೂಲ ಬುಡಕಟ್ಟುಗಳ ಒಕ್ಕೂಟದಿಂದ ಧರಣಿ ನಡೆಸುವುದಾಗಿ ಒಕ್ಕೂಟದ ಸಂಚಾಲಕ ಹೂರಾಜ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಹಕ್ಕು ಮತ್ತು ಭೂಮಿಯ ಹಕ್ಕು ಕಾಯ್ದೆಯಡಿ ಹಕ್ಕಿ-ಪಿಕ್ಕಿ ಜನಾಂಗದ ಭೂ ನಿರ್ಗತಿಕ ಕುಟುಂಬಗಳಿಗೆ ಭೂಮಿ ಹಕ್ಕು ಪತ್ರ ವಿತರಿಸುವುದು, ಕೆಲವು ಸಮುದಾಯಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಈ ಯೋಜನೆ ಜಾರಿಯಲ್ಲಿದೆ.
ಯೋಜನೆಯನ್ನು ಹಕ್ಕಿ-ಪಿಕ್ಕಿ ಜನಾಂಗಕ್ಕೂ ಉಳಿದ ಬುಡಕಟ್ಟು ಜನಾಂಗಕ್ಕೂ ವಿಸ್ತರಿಸಬೇಕು. 5ನೇ ಉಪಜಾತಿ ಅನ್ವಯ ವಿಶೇಷ ಅನುದಾನದಡಿಯಲ್ಲಿ ಗಿರಿಜನ ಉಪಯೋಗ ಯೋಜನೆಯನ್ನು ಕಾನೂನಾಗಿ ಮಾರ್ಪಡಿಸಿ ಆಂಧ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಹ ಟಿಎಸ್ಪಿಯನ್ನು ಜಾರಿಗೊಳಿಸಬೇಕು.
ಬುಡಕಟ್ಟು ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಸರ್ಕಾರ ಉದ್ಯೋಗದಲ್ಲಿ ಆದ್ಯತೆ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರು.ವರೆಗೆ ಸ್ವಯಂ ಉದ್ಯೋಗಕ್ಕೆ ಸಹಾಯಧನ ನೀಡಬೇಕು. ಅರಣ್ಯ ಕಿರು ಉತ್ಪನ್ನಗಳು ಬುಡಕಟ್ಟು ಸಮುದಾಯಗಳಿಗೆ ಸಂಪೂರ್ಣ ಬಳಕೆಯಾಗಬೇಕು ಮತ್ತು ಅರಣ್ಯದಂಚಿನಲ್ಲಿ ಹಿಂದಿನಿಂದಲೂ ವಾಸ ಮಾಡುತ್ತಿರುವ ಈ ಸಮುದಾಯದ ಕುಟುಂಬಗಳನ್ನು ಒಕ್ಕಲೆಬ್ಬಿಸದೆ ಅಲ್ಲಿರುವವರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಈ ಸಮುದಾಯದವರಿಗೆ ಬ್ಯಾಕ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಗಿರಿಜನ ಆಶ್ರಮ ಶಾಲೆಗಳನ್ನು ಮುರಾರ್ಜಿ ಶಾಲೆಗಳಂತೆ ಮೇಲ್ದರ್ಜೆಗೆ ತಂದು ಈ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆಹಾರ ಮತ್ತು ಇನ್ನಿತರ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುವುದರೊಂದಿಗೆ ಈ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು.
 ಜಿಲ್ಲೆಯಲ್ಲಿ ಇರುವ ಹಕ್ಕಿಪಿಕ್ಕಿ ಜನಾಂಗದವರಿರುವ ಅಂಗಡಿಹಳ್ಳಿ ಗ್ರಾಮವನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ನೋಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಈ ಗ್ರಾಮಗಳ ಬಗ್ಗೆ ಅಸಡ್ಡೆಯಿಂದ ಕಾಣುತ್ತಿದೆ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಅಲ್ಲದೆ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಅನಾರೋಗ್ಯದ ತಾಣವಾಗಿದೆ. ಇಲ್ಲಿನ ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ಗರ್ಭಿಣಿಯರು ನಾನಾ ರೋಗಗಳಿಗೆ ತುತ್ತಾಗಿ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 6 ಬುಡಕಟ್ಟು ಸಮುದಾಯಗಳು ವಾಸಿಸುತ್ತಿದ್ದು, 75 ಸಾವಿರ ಜನಸಂಖ್ಯೆ ಹೊಂದಿದ್ದು, ಇಷ್ಟು ಜನರ ಕಲ್ಯಾಣಕ್ಕೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕಚೇರಿಯನ್ನು ಆರಂಭಿಸಬೇಕು ಎಂದರು.
ಹಕ್ಕಿಪಿಕ್ಕಿ ಜನಾಂಗದ ವಸತಿ ರಹಿತ, ನಿವೇಶನ ರಹಿತರಿಗೆ ಸ್ಥಳವಕಾಶ ದೊರೆಯುವ ಭಾಗದಲ್ಲಿ ನಿವೇಶನ ಮತ್ತು ವಸತಿಯ ಜೊತೆ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹಾಡಿ ಮತ್ತು ಕಾಲೋನಿಗಳು ಇರುವ ಪ್ರದೇಶದಲ್ಲಿ ಗುಂಡುತೋಪು ಮತ್ತು ಊರಿಗೆ ಮೀಸಲಾತಿ ಗ್ರಾಮ ಠಾಣಾ ಜಾಗಗಳಿದ್ದು, ಅದನ್ನು ಸರ್ಕಾರದ ವಶಕ್ಕೆ ಪಡೆದು ಈ ಪ್ರದೇಶದಲ್ಲಿ ಇರುವ ಬುಡಕಟ್ಟು ಸಮುದಾಯಕ್ಕೆ ನಿವೇಶನಗಳನ್ನು ವಿತರಿಸಬೇಕು.  ಕುಶಲಕರ್ಮಿ ಯೋಜನೆಯಡಿ ಈ ಸಮುದಾಯಗಳು ನಾನಾ ಕಲಾಕೃತಿಗಳನ್ನು ತಯಾರಿಸಲು ಕುಶಲ ಪರಿಕರಗಳನ್ನು ಒದಗಿಸಲು ನಂತರ ಮಾರಾಟಕ್ಕೆ ಖಾದಿ-ಗ್ರಾಮೋದ್ಯೋಗ ಮಾರುಕಟ್ಟೆ ಮಾದರಿ ಸೂಕ್ತ ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲು ಸರ್ಕಾರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಕ್ಕಿ-ಪಿಕ್ಕಿ, ಕೊರಗ, ಅಸಲರು, ಮೇದರು, ಸಿದ್ದಿ, ಜೇನುಕುರುಬ, ಸೋಲಿಗ, ಮೇಲೆಕುಡಿಯ, ಗೌಂಡ್ಲು, ಬೆಟ್ಟದ ಕುರುಬ, ಎರವ, ನಾಯ್ಕ್, ಗೋಸ್ಲೆ ಜನಾಂಗದವರ ಹಕ್ಕುಗಳನ್ನು ಹಾಗೂ ಸರ್ಕಾರದಿಂದ ದೊರೆಯುವಂತಹ ಸೌಕರ್ಯಗಳನ್ನು ನಾಯಕ ಸಮುದಾಯವು ಕಸಿದುಕೊಳ್ಳುತ್ತಿವೆ. ಇದರಿಂದ ಈ ಸಮುದಾಯಗಳು ಸೌಕರ್ಯಗಳಿಂದ ವಂಚಿತವಾಗುತ್ತಿದ್ದು, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕ ಸೌಲಭ್ಯಗಳಿಲ್ಲದೆ ಬಳಲುತ್ತಿದೆ ಎಂದು ಆರೋಪಿಸಿ, ಈ ಜನಾಂಗಗಳಿಗೆ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಸಂಚಾಲಕ ಅನಿಲ್, ಇಂದ್ರಾಣಿ, ಆಶೀರ್ವಾದ, ಮನೋಜ್, ರಿವಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.