ಹಾಸನ

ಕ್ರಿಯಾ ಯೋಜನೆ ರದ್ದು ಆಗ್ರಹಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ಅರಸೀಕೆರೆ ಸೆ. 25
ಪಟ್ಟಣ ಪುರಸಭೆ ಈಗಾಗಲೇ ತಯಾರಿಸಿರುವ ಕ್ರಿಯಾಯೋಜನೆಯಲ್ಲಿ ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ಕಾಮಗಾರಿಗಳು ಹಂಚಿಕೆಯಾಗದೆ ತಾರತಮ್ಯವಾಗಿದ್ದು, ಕೂಡಲೇ ಅದನ್ನು ರದ್ಧುಪಡಿಸಿ ಹೊಸದಾಗಿ ಕ್ರಿಯಾಯೋಜನೆ ರೂಪಿಸುವಂತೆ ಒತ್ತಾಯಿಸಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
 2013-14ನೇ ಸಾಲಿಗೆ ಎಸ್.ಎಫ್.ಸಿ  ಮುಕ್ತ ನಿಧಿಯಲ್ಲಿ ನಿಗದಿಪಡಿಸಿರುವ 2.98 ಕೋಟಿ ರೂ.ಗಳ ಅನುದಾನದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಕಳೆದ 2008-2013ರವರೆಗೆ ಅಸ್ತಿತ್ವದಲ್ಲಿದ್ದ ಪುರಸಭಾ ಅವಧಿಯಲ್ಲಿ 27 ವಾರ್ಡ್‌ಗಳಿಗೂ ಅನುದಾನವನ್ನು ಸಮರ್ಪಕವಾಗಿ ತಾರತಮ್ಯವಿಲ್ಲದೆ ಅನುದಾನ ಹಂಚಿಕೆ ಮಾಡಲಾಗಿತ್ತು.
  ಪ್ರಸ್ತುತ ಕೆಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸಿ ಯೋಜನೆ ರೂಪಿಸಲಾಗಿದ್ದು ತಾರತಮ್ಯವೆಸಗಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಪುರಸಭಾ ಮುಖ್ಯಾಧಿಕಾರಿ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
 ಪುರಸಭಾ ಸದಸ್ಯರಲ್ಲಿ  ಭೇದಭಾವ ಮಾಡುವುದು ಸಹಿಸುವುದಿಲ್ಲ. ಕೂಡಲೇ ಕ್ರಿಯಾಯೋಜನೆ ರೂಪುರೇಷೆಯನ್ನು ಪರಿಶೀಲಿಸಿ ಎಲ್ಲಾ 27 ವಾರ್ಡ್‌ಗಳಿಗೂ ಸೂಕ್ತ ರೀತಿಯಲ್ಲಿ ಅನುದಾನ ಹಂಚಿಕೆ ಮಾಡುವಂತೆ ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು.
 ಸದಸ್ಯರಿಂದ  ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿಗಳು ಅಧ್ಯಕ್ಷರು ಹಾಗೂ ಇತರೆ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಅರಸೀಕೆರೆ ಪುರಸಭಾಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿ ಕಾಂಗ್ರೆಸ್ ಸದಸ್ಯರು ಈ ಬಗ್ಗೆ ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸದೆ ಸರಿಯಾದ ಮಾಹಿತಿಯನ್ನು ಪಡೆಯದೆ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದರು.
 ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯುವ ಮುನ್ನವೇ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ.  ಈ ಜನೋಪಯೋಗಿ ಕಾಮಗಾರಿಗಳು ಬಹುತೇಕ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಲ್ಲೇ ನಡೆಯಲಿದ್ದು ಸ್ಮಶಾನದ ಕಾಮಗಾರಿ ಎಸ್.ಎಸ್.ಟಿ. ಹಾಸ್ಟೆಲ್‌ಗೆ ರಸ್ತೆ ನಿರ್ಮಾಣ ಇಂತಹ ಕಾಮಗಾರಿಗಳನ್ನು ರೂಪಿಸಿರುವ ಆಡಳಿತಾಧಿಕಾರಿಗಳ ಕ್ರಮ ಶ್ಲಾಘನೀಯ ಎಂದು ಹೇಳಿದರು.
 ಆದರೆ ವಾಸ್ತವ ಅಂಶ ಮನಗಾಣದ ಸದಸ್ಯರು ಈ ರೀತಿ ಧರಣಿ ನಡೆಸುವ ಬದಲು ಅಧ್ಯಕ್ಷರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈ ರೀತಿ ಘೋಷಣೆ ಕೂಗುವುದು ನ್ಯಾಯಸಮ್ಮತವಲ್ಲವೆಂದು ಪುರಸಭಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.
 ಅಲ್ಲದೇ ಜೆಡಿಎಸ್ ಸದಸ್ಯರು ಮಾತನಾಡಿ,  ಯೋಜನೆಯಲ್ಲಿ ಲೋಪದೋಷಗಳಿದ್ದರೆ ಚರ್ಚೆ ನಡೆಯಲಿ. ಈ ನಡವಳಿಕೆ  ಶೋಭೆ ಯಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.