ಮಾಟ-ಮಂತ್ರ ನಿಷೇಧ ಚಿಂತನೆಗೆ ಬಿಜಿವಿಎಸ್ ಸ್ವಾಗತ
ಹಾಸನ: ಅಕ್ಷರದಿಂದ ವಂಚಿತರಾಗಿ ಪ್ರಾಪಂಚಿಕ ಜ್ಞಾನವಿಲ್ಲದೆ ಅಂಧಕಾರದಲ್ಲಿರುವ ಮುಗ್ಧ, ಬಡಜನರಲ್ಲಿ ಅಂಧಶ್ರದ್ಧೆಯನ್ನು ಭಿತ್ತಿ ಭಯಭೀತರನ್ನಾಗಿಸಿ ಅವರ ತೊಳಲಾಟದಲ್ಲಿ ತಮ್ಮ ಹೊಟ್ಟೆ ಹೊರೆಯುತ್ತಿರುವ ಸ್ವಯಂ ಘೋಷಿತ ದೇವಮಾನವರ ಉಪಟಳಕ್ಕೆ ಕಡಿವಾಣ ಹಾಕಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕ ಸ್ವಾಗತಿಸಿದೆ. ಭಾರತೀಯರನ್ನು ತಲತಲಾಂತರದಿಂದ ಕಾಡುತ್ತಿರುವ ಅಂಧಶ್ರದ್ಧೆ, ಬಾನಾಮತಿ, ಮಾಟ-ಮಂತ್ರ, ಪವಾಡ, ವಶೀಕರಣ, ಜ್ಯೋತಿಷ್ಯ, ಮೂಢನಂಬಿಕೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ದೇವಸ್ಥಾನಗಳಿಗೆ ಶೂದ್ರರಿಗೆ, ದಲಿತರಿಗೆ ಮತ್ತು ಸ್ತ್ರೀಯರಿಗೆ ಪ್ರವೇಶದ ನಿರಾಕರಣೆ, ಪಾದಪೂಜೆಗಳು, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಸ್ತ್ರೀಯರ ನೈಸರ್ಗಿಕ ಕ್ರಿಯೆಗಳಿಗಾಗಿ ಊರಾಚೆ ಇರಿಸುವುದು. ಹೀಗೆ ಹತ್ತು ಹಲವು ಅನಿಷ್ಟ ಪದ್ಧತಿಗಳು ಜನಮಾನಸದಲ್ಲಿ ಮನೆ ಮಾಡಿ ಕುಬ್ಜ ಮಾನವನನ್ನು ಮತ್ತಷ್ಟು ಕುಬ್ಜನನ್ನಾಗಿಸುತ್ತಿವೆ ಎಂದು ಘಟಕದ ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ ತಿಳಿಸಿದರು.
ಜನ ಸಾಮಾನ್ಯರನ್ನು ಮೌಢ್ಯತೆಯಿಂದ ಹೊರತರಲು ಅನೇಕ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ ಯಾದರೂ ರಾಜಕೀಯ ಇಚ್ಛಾಶಕ್ತಿಯ ಮುಂದೆ ಶೂನ್ಯವೇ ಸರಿ. ಈ ಒಂದು ನಿಟ್ಟಿನಲ್ಲಿ ಸರ್ಕಾರವೇ ಮುಂದಾಗಿ ಕಾನೂನು ರೂಪಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಹೇಳಿದರು. ಅಕ್ಷರಸ್ಥರೂ ಅಂಧಶ್ರದ್ಧೆಯ ಮೊರೆಹೋಗುತ್ತಾರೆಂದರೆ ಅದು ಪಾಪ ಪ್ರಜ್ಞೆಯಿಂದಲೇ ಹೊರತು ಬೇರೇನು ಇರಲಾರದು. ಒಬ್ಬ ಮನುಜ ಈ ಜಗತ್ತಿನಲ್ಲಿ ಹುಟ್ಟಿದಾಗ ಅವನೊಬ್ಬ ಪಾಪ-ಪುಣ್ಯಗಳಿಲ್ಲದ ಪರಿಪೂರ್ಣ ವ್ಯಕ್ತಿತ್ವದವನಾಗೆ ಇರುತ್ತಾನೆ. ನಂತರದ ದಿನಗಳಲ್ಲಿ ಅವನಲ್ಲಿ ಪಾಪ ಪ್ರಜ್ಞೆ ಕಾಡುತ್ತಿದೆ ಎಂದರೆ, ಆ ಪಾಪದ ಕೆಲಸವನ್ನು ಈ ಭೂಮಿಯ ಮೇಲೆ ಅವತರಿಸಿದ ನಂತರವಷ್ಟೇ ಮಾಡಿರಲು ಸಾಧ್ಯ. ಅವನ ಕರ್ಮದ ಫಲವೇ ಅವನಲ್ಲಿ ಪಾಪ ಪ್ರಜ್ಞೆ ಕಾಡಲು ಆರಂಭಿಸುತ್ತದೆ. ಅದರ ಪ್ರತಿಫಲವೆ ಅಂಧಶ್ರದ್ಧೆಯ ಮೊರೆಹೋಗುತ್ತಾನೆ. ಕಾನೂನು ಜತೆಯಲ್ಲಿ ಸಮಾಜದಲ್ಲಿ ವೈಚಾರಿಕತೆಯನ್ನೂ ಮೂಡಿಸಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

