ಪ್ರಾಮಾಣಿಕತೆ, ಸರಳ ಜೀವನದಿಂದ ಯಶಸ್ಸು: ಸ್ವಾಮೀಜಿ
ಕ.ಪ್ರ.ವಾರ್ತೆ , ಸಕಲೇಶಪುರ , ಸೆ.27
ಸತ್ಯ, ಪ್ರಾಮಾಣಿಕತೆಯಿಂದ ಸರಳ ಜೀವನ ನಡೆಸಿದರೆ ಬದುಕಿನಲ್ಲಿ ಯಶಸ್ಸುಗಳಿಸ ಬಹುದಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ರಾಜೇಂದ್ರ ಮಹಾಂತ ಸ್ವಾಮೀಜಿಗಳ 98 ನೇ ಜಯಂತಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಅವರು ಮಾತನಾಡಿದರು.
ದೇಶದಲ್ಲಿ ಅತ್ಯುನ್ನತ ವಿದ್ಯಾಸಂಸ್ಥೆಗಳನ್ನು ನೀಡಿದ ಕೀರ್ತಿ ಸುತ್ತೂರು ಶ್ರೀಮಠಕ್ಕೆ ಸೇರುತ್ತಿದ್ದು, ಬಡವರಿಗೆ ವಿದ್ಯಾದಾನ ಮಾಡುವ ಉದ್ದೇಶದಿಂದ ರಾಜೇಂದ್ರ ಸ್ವಾಮೀಜಿ ಆರಂಭಿಸಿದ ವಿದ್ಯಾಸಂಸ್ಥೆಗಳನ್ನು ಉನ್ನತ ಮಠಕ್ಕೆ ಕೊಂಡೊಯ್ಯುವ ಮೂಲಕ ಇಂದಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಮಾನವನ ಬದುಕಿಗೆ ಅತ್ಯಮೂಲ್ಯ. ಈ ಎರಡು ಸೇವೆಗೆ ಮುನ್ನುಡಿ ಬರೆದ ಸುತ್ತೂರು ಮಠ ಶ್ಲಾಘನಾರ್ಹ. ಸ್ವತಂತ್ರ ಪೂರ್ವದಲ್ಲೇ ದೇಶಿಕೇಂದ್ರ ಶ್ರೀಗಳು ಆರೋಗ್ಯ ಹಾಗೂ ಶಿಕ್ಷಣದ ಮಹತ್ವವನ್ನು ಅರಿತು ತಮ್ಮ ಸ್ವಂತದುಡಿಮೆಯಲ್ಲಿ ಬಡವರ್ಗವನ್ನು ಗುರಿಯಾಗಿಸಿಟ್ಟುಕೊಂಡು ವಸತಿ, ದಾಸೋಹ ಮೂಲಕ ವಿದ್ಯಾದಾನ ಆರಂಭಿಸಿದ ಪರಿಣಾಮ ದೇಶದ ಹಲವರು ಶಿಕ್ಷಿತರಾಗಲು ಅನುಕೂಲವಾಯಿತು ಎಂದು ತಿಳಿಸಿದರು.
ಈ ಸಂಸ್ಥೆಗಳಲ್ಲಿ ವ್ಯಾಸಂಗಮಾಡಿದ ಹಲವರು ಇಂದು ದೇಶದ ಆಯಾಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೆಎಸ್ಎಸ್ ಸಂಸ್ಥೆಯ ಸಮಾಜ ಸೇವೆಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಇಂದು ಹಲವು ಮಠಗಳು ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದರ ಫಲವಾಗಿ ಸರಕಾರದ ಹೊರೆ ಸಾಕಷ್ಟು ಕಡಿಮೆಯಾಗಿದೆ ಎಂದರು.
ಬಂಡೆಮಠದ ಬಸವಲಿಂಗಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ವೀರಶೈವ ಸಮಾಜ ಮುಖಂಡ ಎಚ್.ಪಿ ಕಾಂತರಾಜ್, ಶಶಿಧರ್, ಶಿವಪ್ರಸಾದ್ ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಅಧೀಕ್ಷಕ ನಾಗರಾಜ್ ಇತರರು ಇದ್ದರು.
ಸಭೆಯಲ್ಲಿ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೌಡಳ್ಳಿ ಗ್ರಾಮದ ಕಿವುಡು, ಮೂಕ ಮಕ್ಕಳಿಗೆ ಹಾಗೂ ಕ್ರಾಫರ್ಡ್ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

