ಹಾಸನ

ಜೂ.1ಕ್ಕೆ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ

Published On :

ಕನ್ನಡಪ್ರಭವಾರ್ತೆ ಅರಕಲಗೂಡು ಸೆ.28
ಹಗಲು-ಇರುಳು ಸತ್ಯ. ಅದೇ ರೀತಿ ಪ್ರತಿವರ್ಷ ಮಕ್ಕಳ ಕಲಿಕೆಗೆ ಪಠ್ಯ ಪುಸ್ತಕ ನೀಡುವುದೂ ತಪ್ಪಿದ್ದಲ್ಲ. ಹೀಗಿರುವಾಗ ಪ್ರತಿವರ್ಷ ಪಠ್ಯಪುಸ್ತಕ ಮತ್ತು ಸಮವಸ್ತ್ರದ ವಿಳಂಬ ಏಕೆ ಈ ಬಗ್ಗೆ ತಾವು ಅಧಿಕಾರಿಗಳನ್ನು ಕೇಳಿದ್ದೇನೆ. ಹಿಂದಿನ ಸರ್ಕಾರಗಳು ಮಾಡಿಕೊಂಡು ಬಂದ ವಿಳಂಬ ಇನ್ನು ಮುಂದೆ ಆಗುವುದಿಲ್ಲ. ಜೂನ್ 1ಕ್ಕೆ ಪಠ್ಯ ಪುಸ್ತಕ ಮಕ್ಕಳಿಗೆ ದೊರಕುವ ರೀತಿಯಲ್ಲಿ ಈಗಲೇ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದೇ ರೀತಿ ಬಟ್ಟೆಯೂ ಮಕ್ಕಳಿಗೆ ಸರಿ ಸಮಯದಲ್ಲಿ ದೊರಕಲಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ತಿಳಿಸಿದರು.
ಸೈಕಲ್ ವಿತರಣೆಗೆ ಟೆಂಡರ್ ಪ್ರಕ್ರಿಯೆ:   ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ಸೈಕಲ್ ವಿತರಣೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆಗಿ ಹೋಗಿದೆ.ಇನ್ನು 6 ಮತ್ತು 9 ನೇ ತರಗತಿ ಪಠ್ಯ ಪುಸ್ತಕಗಳ ಬದಲಾವಣೆ ಆಗಬೇಕಿರುವುದರಿಂದ ಆ ಪುಸ್ತಕಗಳ ವಿತರಣೆ ಮತ್ತು ಟೆಂಡರ್ ಪ್ರಕ್ರಿಯೆ ತಡ ಆಗಬಹುದು. ಉಳಿದಂತೆ ಎಲ್ಲಾ ಪುಸ್ತಕ ಮತ್ತು ಸಮವಸ್ತ್ರಗಳು ಸರಿ ಸಮಯದಲ್ಲಿ ವಿತರಣೆ ಆಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 1ರಿಂದ 12ರ ವರೆಗಿನ 50 ಸಾವಿರ ಶಾಲಾ ಕಟ್ಟಡಗಳಿದ್ದು, ಇವುಗಳ ದುರಸ್ಥಿಗಾಗಿ ಸುಮಾರು 6 ಸಾವಿರ ಕೋಟಿ ರು. ವೆಚ್ಚ ತಗುಲಲಿದ್ದು, ಅವುಗಳ ದುರಸ್ಥಿ ಕಾರ್ಯ ಏಕಕಾಲದಲ್ಲಿ ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ ದುರಸ್ಥಿ ಮಾಡಿಸಲು ಯೋಜನೆ ಸಿದ್ದಗೊಳ್ಳುತ್ತಿದೆ ಎಂದು ನುಡಿದರು. ಖಾಸಗಿ ಶಾಲೆಗಳ ಅನುದಾನ ಕುರಿತಂತೆ ಈಗಾಗಲೇ 1994-95 ನೇ ಸಾಲಿನವರೆಗೆ ಆರಂಭಗೊಂಡ ಶಾಲೆಗಳ ಅನುದಾನಕ್ಕೆ ಹಣಕಾಸು ಇಲಾಖೆ ಮತ್ತು ಶಿಕ್ಷಣ ಇಲಾಖೆಗಳ ಅನುಮೋದನೆ ದೊರೆತಿದ್ದು, ಮುಖ್ಯಮಂತ್ರಿಗಳ ಅನುಮೋದನೆಗಾಗಿ ಕಾಯಲಾಗಿದೆ. ಇನ್ನೊಂದು ವಾರದಲ್ಲಿ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದರು.
24 ಸಾವಿರ ಶಿಕ್ಷಕರ ಕೊರತೆ:  ರಾಜ್ಯದಲ್ಲಿ 24 ಸಾವಿರ ಶಿಕ್ಷಕರ ಕೊರತೆ ಇದ್ದು ಅವುಗಳ ನೇಮಕಾತಿಗಾಗಿ ಪ್ರಸ್ತಾವನೆ ಸಲ್ಲಿಸಿದೆಯಾದರೂ ಅವುಗಳ ನಿರ್ವಹಣೆಗೆ 75ರಿಂದ 100 ಕೋಟಿ ರು. ಅನುದಾನ ಅಗತ್ಯವಿದೆ. ಶೇ. 50ರಷ್ಟಾದರೂ ಅಗತ್ಯ ಪೂರ್ಣಗೊಳಿಸುವ ಸಲುವಾಗಿ ತಾತ್ಕಾಲಿಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 12 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು ಈಗಾಗಲೇ 6 ಸಾವಿರ ಶಿಕ್ಷಕರ ನೇಮಖಾತಿ ಪ್ರಕ್ರಿಯೆ ಮುಗಿದಿದೆ ಎಂದರು.
ಹೈದರಾಬಾದ್ ಕರ್ನಾಟಕದ ನೇಮಕಾತಿ ಆದೇಶ ವಿವಾದದಿಂದಾಗಿ ವಿಳಂಬಗೊಂಡಿದ್ದು ಇನ್ನು 2 ತಿಂಗಳಲ್ಲಿ ರಾಷ್ಟ್ರಪತಿಗಳ ಅಂಕಿತ ಬಿದ್ದ ಕೂಡಲೇ ಶೇಕಡಾ 80 ರಷ್ಟು ಶಿಕ್ಷಕರ ಸಮಸ್ಯೆ ಬಗೆಹರಿಯಲಿದೆ ಎಂದರು.     4-5 ಸಾವಿರ ಶಿಕ್ಷಕರು ಪ್ರತಿ ವರ್ಷ ನಿವೃತ್ತರಾಗುತ್ತಾರೆ. ಇದರಿಂದ ಮಕ್ಕಳಿಗೆ ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ತೊಂದರೆ ಉಂಟಾಗುತ್ತಿತ್ತು.ಅದನ್ನು ತಪ್ಪಿಸುವ ಸಲುವಾಗಿ ಶೈಕ್ಷಣಿಕ ವರ್ಷದ ಕೊನೆಯ ವರೆವಿಗೂ ಸದರಿ ಶಿಕ್ಷಕರನ್ನು ಮುಂದುವರೆಸುವ ಬಗ್ಗೆ ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು.
ಲೋಪದೋಷಗಳು ಸ್ವಾಭಾವಿಕ:  ಕ್ಷೀರಭಾಗ್ಯ ಯೋಜನೆಯ ಲೋಪದೋಷ ಕುರಿತಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಯಾವುದೇ ಯೋಜನೆ ಹೊಸದಾಗಿ ಜಾರಿಗೆ ತರುವಾಗ ಇಂತಹ ಲೋಪದೋಷಗಳು ಸ್ವಾಭಾವಿಕ. ಪ್ರತಿವರ್ಷ 6 ಲಕ್ಷ ಮಕ್ಕಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಅಕ್ಷರ ದಾಸೋಹ ಯೋಜನೆಯಲ್ಲಿ ಈ ವರೆಗೆ 6 ಕೋಟಿ ಮಕ್ಕಳು ಇದರ ಪ್ರಯೋಜನೆ ಪಡೆದಿದ್ದಾರೆ. ಈ ಪೈಕಿ 14-15 ಪ್ರಕರಣಗಳು  ಸಂಭವಿಸಿವೆ.ಇದೆಲ್ಲಾ ಲೋಪದೋಷಗಳ ಬಗ್ಗೆ ವಿಚಾರಣೆ ನಡೆದಿದೆ ಎಂದರು.
ಶಾಲೆಗಳಲ್ಲಿ ಗುಮಾಸ್ತರು ಇಲ್ಲದಿರುವುದು, ಡಿ.ದರ್ಜೆ ನೌಕರರು ಇಲ್ಲದೇ ಶಿಕ್ಷಕರೇ ಕಸ ಗುಡಿಸಿಕೊಳ್ಳುತ್ತಿರುವ ಬಗೆಗೆ ತಾವು ಗಂಭೀರವಾಗಿ ಚಿಂತನೆ ನಡೆಸಿದ್ದು, ಆ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನುಡಿದರು.
ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಕೂಗಿನ ಬಗೆಗೆ ಪ್ರಸ್ತಾಪಿಸಿದ ಅವರು ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ. ಅವುಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಒಂದು ಕಲಿಕಾ ಭಾಷೆಯನ್ನಾಗಿ ಜಾರಿಗೆ ತರುವುದಾಗಿ ತಿಳಿಸಿದರು.
ಪ್ರತ್ಯೇಕ ವೆಬ್‌ಸೈಟ್:   ಶಾಲಾ ಕಟ್ಟಡಗಳು ಮತ್ತು ವೀಕ್ಷಣೆಗೆ ಸಂಬಂಧಿಸಿದಂತೆ ಇನ್ನೆರಡು ತಿಂಗಳಲ್ಲಿ ಪ್ರತ್ಯೇಕ ವೆಬ್‌ಸೈಟ್ ತೆರೆಯಲುತ್ತಿದೆ ಎಂದು ತಿಳಿಸಿದರು.

ಮೌಲ್ಯಭರಿತ ಶಿಕ್ಷಣಕ್ಕೆ ಒತ್ತು ನೀಡಿ
ಅರಕಲಗೂಡು:
ಶಿಕ್ಷಕರು ಇಂದು ಮಕ್ಕಳಿಗೆ ಜಾತಿ, ಧರ್ಮವೆಂಬ ಗೋಡೆಗಳನ್ನು ತೆಗೆದು ಮಾನವೀಯ ಮೌಲ್ಯಗಳನ್ನು ಬೋಧಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ತಿಳಿಸಿದರು.
ಅವರು ಇಲ್ಲಿನ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಅರಕಲಗೂಡು ತಾಲೂಕು ಶಿಕ್ಷಕರ ಸಂಘ ಆಯೋಜಿಸಿದ್ದ ಡಾ. ರಾಧಾಕೃಷ್ಣನ್ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೇಶ ಕಟ್ಟುವ ಮಹತ್ವದ ಪಾತ್ರ ಶಿಕ್ಷಕರದ್ದಾಗಿದೆ. ಇಂದು ಆದರ್ಶಗಳು ಅವಸಾನದ ಅಂಚಿನಲ್ಲಿ ಸಾಗಿವೆ.
 ಗಾಂಧಿ, ನೆಹರೂ  ಮುಂತಾದವರ ವಿಚಾರ, ಜೀವನ ಆದರ್ಶಗಳು ಮರೆಯಾಗುತ್ತಿದ್ದು ಮುಂದಿನ ಪೀಳಿಗೆಗೆ ಅವು ಅಲಭ್ಯವಾಗುವ ಮೊದಲೇ ಶಿಕ್ಷಕರು ಎಚ್ಚೆತ್ತು ಮುಂದಿನ ಪೀಳಿಗೆಗೆ ಅದು ದೊರಕುವಂತಾಗಬೇಕು. ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದ್ದು, ಮೌಲ್ಯಗಳೇ ಇಲ್ಲವಾಗಿ ಬಿಟ್ಟರೆ ದೇಶದ ಮುಂದಿನ ಭವಿಷ್ಯವೇನು ಎಂದು ಆತಂಕ ವ್ಯಕ್ತಪಡಿಸಿದರು. ದೇಶ ಸಾಕ್ಷರತೆ ಸಾಧಿಸಿದ ಮಾತ್ರಕ್ಕೆ ಮೌಲ್ಯಯುತವೆಂದು ಹೇಳಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ಬದುಕು ಎರಡೂ ಒಟ್ಟಾಗಿ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಹಲವು ಶಿಕ್ಷಕರ ಸಂಘಗಳು ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿವೆ. ಆದರೆ ಈವರೆಗೂ ಯಾವುದೇ ಶಿಕ್ಷಕರ ಸಂಘಗಳು ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಅಥವಾ ಅದಕ್ಕೆ ಪರಿಹಾರ ಸೂಚಿಸಿ ಒಂದೇ ಒಂದು ಮನವಿಯನ್ನೂ ಸಲ್ಲಿಸಿಲ್ಲ ಎಂದ ಅವರು ಶಿಕ್ಷಕರ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಡುತ್ತೇವೆ. ಆದರೆ 10-15 ವರ್ಷಗಳಿಂದ ಮಕ್ಕಳೊಂದಿಗೆ ಇದ್ದು ಆ ಮಕ್ಕಳ ಸಮಸ್ಯೆ ಅರಿತಿರುವ ಶಿಕ್ಷಕರು ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಂತಾಗಬೇಕು ಎಂದು ನುಡಿದರು. ದೇಶದಲ್ಲಿ ಎಷ್ಟು ಪ್ರಾರ್ಥನಾ ಮಂದಿರಗಳಿವೆ ಎಂಬುದಕ್ಕಿಂತ ಎಷ್ಟು ಶಾಲೆಗಳಿವೆ ಎಂಬುದು ಮುಖ್ಯ. ಇಂದು ಪಡೆಯುವ ಪದವಿ ಕೆಲಸಕ್ಕೆ ಸೇರಲು ಇರುವ ಪ್ರವೇಶ ಪತ್ರದಂತೆ. ಆದರೆ ಶಿಕ್ಷಕರಿಂದ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಮಂಜು ಮಾತನಾಡಿ ಸಮಾಜದಲ್ಲಿ ಶಿಕ್ಷಕರಿಗೆ ದೊರಕುತ್ತಿರುವ ಸ್ಥಾನಮಾನ ಮತ್ತಾರಿಗೂ ಇಲ್ಲ. ಆದರೆ ಶಿಕ್ಷಕರು ವೃತ್ತಿಘನತೆಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ರೀತಿಯಲ್ಲಿ ಮಕ್ಕಳಿಗೆ ತತ್ವಾದರ್ಶಗಳನ್ನು ತಿಳಿಸಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವುದು ಅವಶ್ಯವಾಗಿದೆ ಎಂದರು. ಆದರ್ಶ ವ್ಯಕ್ತಿಗಳ ಬಗೆಗೆ ಬೋಧನೆ ಮಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿರುವುದಕ್ಕೆ ವಿಷಾದಿಸಿದ ಅವರು ಉತ್ತಮ ಪ್ರಜೆಗಳ ನಿರ್ಮಾಣದ ಹೊಣೆಗಾರಿಕೆಯನ್ನು ಶಿಕ್ಷಕರು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಶಿಕ್ಷಕರಿಗೆ ಸನ್ಮಾನ:  ಇದೇ ವೇಳೆ ತಾಲೂಕಿನ ನಿವೃತ್ತ ಶಿಕ್ಷಕರನ್ನು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಪ್ರೇಮ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಪಾಂಡುರಂಗ ಇವರನ್ನು ಸನ್ಮಾನಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಶಿಕ್ಷಕಿ ಹಾಗೂ ಲೇಖಕಿ ಸುಶೀಲ ಸೋಮಶೇಖರ್ ಮಾತನಾಡಿದರು.
ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಜಿಪಂ ಸದಸ್ಯ ವಿ.ಎ.ನಂಜುಂಡಸ್ವಾಮಿ, ಎಂ.ಎಸ್.ಯೋಗೇಶ್, ಕೀರ್ತಿರಾಜ್, ಕಾಡಾ ಅಧ್ಯಕ್ಷ ಚೌಡೇಗೌಡ, ಬಸವರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಶಿವಪ್ಪ, ತಹಸೀಲ್ದಾರ್ ಈಶ್ವರಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವೇಗೌಡ, ತಾ. ನೌಕರರ ಸಂಘದ ಅಧ್ಯಕ್ಷ ಎನ್.ವೆಂಕಟೇಶ್, ತಾ. ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್, ಮುತ್ತೇಗೌಡ ಇದ್ದರು. ಶಿಕ್ಷಕಿ ನಾಗಮಣಿ ಮತ್ತು ತಂಡದವರು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಬಿಇಓ ಬಿ.ರೇವಣ್ಣ ಸ್ವಾಗತಿಸಿದರು.

ಇಂದು ಆದರ್ಶಗಳು ಅವಸಾನದ ಅಂಚಿನಲ್ಲಿ ಸಾಗಿವೆ. ಗಾಂಧಿ, ನೆಹರೂ  ಮುಂತಾದವರ ವಿಚಾರ, ಜೀವನ ಆದರ್ಶಗಳು ಮರೆಯಾಗುತ್ತಿದ್ದು ಮುಂದಿನ ಪೀಳಿಗೆಗೆ ಅವು ಅಲಭ್ಯವಾಗುವ ಮೊದಲೇ ಶಿಕ್ಷಕರು ಎಚ್ಚೆತ್ತು ಮುಂದಿನ ಪೀಳಿಗೆಗೆ ಅದು ದೊರಕುವಂತಾಗಬೇಕು. ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದ್ದು, ಮೌಲ್ಯಗಳೇ ಇಲ್ಲವಾಗಿ ಬಿಟ್ಟರೆ ದೇಶದ ಮುಂದಿನ ಭವಿಷ್ಯವೇನು
-ಕಿಮ್ಮನೆ ರತ್ನಾಕರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.