ಕಾಲೇಜು ವಿದ್ಯಾರ್ಥಿಗಳಿಗಾಗಿ ಚುಟುಕು ಸ್ಪರ್ಧೆ
ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಶಾಲೆಗೊಂದು ಚುಟುಕು ವಾಚನ ಸ್ಪರ್ಧೆಯನ್ನು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನಿಂದ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಬಿ.ಎನ್. ಚಂದ್ರಶೇಖರ್ ್ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ತನ್ನದೇ ಆದ ಪ್ರತಿಭೆಯಿರುತ್ತದೆ.
ಅದನ್ನು ಕವನ, ಕಥೆ, ಅಥವಾ ಚುಟುಕುಗಳ ಮೂಲಕ ಅಭಿವ್ಯಕ್ತಿಸಿ, ಸಮಾಜಕ್ಕೆ ಮೌಲ್ವಿಕ ವ್ಯಕ್ತಿಯಾಗಿ ಮತ್ತೊಬ್ಬರಿಗೆ ಸ್ಪೂರ್ತಿಯಾಗಬೇಕು ಹಾಗೂ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆ, ದಿನನಿತ್ಯದಲ್ಲಿ ಅನುಭವಿಸುವ ಸುಖ, ದುಃಖದ ಅನುಭವವನ್ನು ಕವನಗಳನ್ನು ಬರೆಯುವ ಮೂಲಕ ಕಲಿತ ವಿದ್ಯೆಯನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರು.
ಅಭಿವ್ಯಕ್ತಿಗೊಳಿಸಬೇಕು: ಕಾಲೇಜಿನ ಪ್ರಾಂಶುಪಾಲ ಆರ್. ಪಾಂಡುರಂಗ ವಿಠಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುಟುಕು ಬ್ರಹ್ಮ ಎಂದೇ ಖ್ಯಾತಿ ಪಡೆದ ದಿನಕರ ದೇಸಾಯಿ ತಮ್ಮ ಚುಟುಕುಗಳ ಮೂಲಕ ಚುಟುಕು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ತ್ರಿಪದಿ ಕವಿ ಸರ್ವಜ್ಞ ವಚನ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ವಚನಾಕಾರರು, ತಮಿಳಿನ ತಿರುವಳ್ಳವರ್, ಇವರೆಲ್ಲ ತಮ್ಮ ಚುಟುಕುಗಳ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಿದ್ಯಾರ್ಥಿಗಳೂ ಸಹ ತಮ್ಮ ಸೃಜನಶೀಲತೆಯನ್ನು ಚುಟುಕು ರಚನೆಯಲ್ಲಿ ಅಭಿವ್ಯಕ್ತಿಗೊಳಿಸಬೇಕೆಂದರು.
ಕರ್ನಾಟಕ ಜಾನಪದ ಪರಿಷತ್ತಿನ ಖಜಾಂಚಿ ಜಿ.ಪಿ. ಮಂಜುನಾಥ ಗುಪ್ತ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ತು ಶಾಲೆಗೊಂದು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು ವಿದ್ಯಾರ್ಥಿಗಳು ಓದುವುದರ ಜೊತೆಗೆ ಸಾಹಿತ್ಯದ ಕಡೆ ಒಲವು ಹೆಚ್ಚಿಸಿಕೊಂಡರೆ ಮುಂದೊಂದು ದಿನ ಉತ್ತಮ ಕವಿಗಳಾಗಬಹುದೆಂದು ಅಭಿಪ್ರಾಯಪಟ್ಟರು.
ಅದ್ಭುತ ಕೊಡುಗೆ: ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್ ಪ್ರಾಸ್ತಾವಿಕ ನುಡಿಯನ್ನಾಡುತ್ತಾ ಕನ್ನಡ ಸಾಹಿತ್ಯದ ಪರಂಪರೆಯು ಒಂದು ಭಾಗವೇ ಎಂದು ಹೇಳಬಹುದಾದ ಚುಟುಕು ಸಾಹಿತ್ಯ ಜನಪದ ಶೈಲಿಯ ಅದ್ಭುತ ಕೊಡುಗೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಜನಪದ ಪರಿಷತ್ತಿನ ಅಧ್ಯಕ್ಷ ಬಾ.ರಾ. ಸುಬ್ಬರಾಯ ಹಾಸ್ಯ ಚುಟುಕು ವಾಚನ ಮಾಡಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರತಿಭೆ ಹೆಚ್ಚಿಸಿಕೊಳ್ಳಬೇಕು: ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಒತ್ತಡದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಚುಟುಕು ಸಾಹಿತ್ಯದಂತಹ ಸೃಜನಾತ್ಮಕ ಕ್ರಿಯೆಯಲ್ಲಿ ಭಾಗಿಗಳಾಗಿ ಜ್ಞಾನಪೀಠ ಸಾಹಿತಿಗಳು, ನಾಡಿನ ಖ್ಯಾತ ಕವಿಗಳೆಲ್ಲರ ಕವನಗಳನ್ನು ವ್ಯಾಸಂಗ ಮಾಡಿ ತಮ್ಮಲ್ಲಿನ ಪ್ರತಿಭೆ ಹೆಚ್ಚಿಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಶಿವರಾಂ ಎನ್.ಆರ್., ಮಹದೇವಯ್ಯ ಇತರರು ಇದ್ದರು. ಹಿರಿಯ ಕಲಾವಿದರಾದ ವೀರಬಸಪ್ಪನವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಮಧುಸೂದನ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

