ನೀತಿ ಸಂಹಿತೆ ಉಲ್ಲಂಘನೆ ಕಟ್ಟೆಚ್ಚರ ವಹಿಸಿ
ಹಾಸನ: ಲೋಕಸಭಾ ಚುನಾವಣೆಯ ಮತದಾನದ ದಿನಾಂಕ ಸಮೀಪಿಸುತ್ತಿದ್ದು ಮಾದರಿ ನೀತಿ ಸಂಹಿತೆ ಜಾರಿ ಇನ್ನಷ್ಟು ಕಟ್ಟುನಿಟ್ಟಾಗಬೇಕು. ನಗರ ಹಾಗೂ ಇತರ ಪ್ರದೇಶಗಳಲ್ಲಿನ ತಪಾಸಣೆ ಮತ್ತಷ್ಟು ಸೂಕ್ಷ್ಮವಾಗಿ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರ ಸಭೆ ನಡೆಸಿದ ಅವರು ಸಾರ್ವಜನಿಕರಿಗೆ, ಮಹಿಳೆಯರು, ವಯೋವೃದ್ಧರಿಗೆ ಮುಜುಗರವಾಗದಂತೆ ವಿಶ್ವಾಸ ಪೂರ್ವಕವಾಗಿ ಎಲ್ಲೆಡೆ ವ್ಯಾಪಕವಾಗಿ ವಾಹನಗಳ ತಪಾಸಣೆ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳ ಜತೆಗೆ ಹೆಚ್ಚುವರಿಯಾಗಿ ಕನಿಷ್ಠ ಇನ್ನೆರಡು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಿದರು.
ಅಕ್ರಮ ಮದ್ಯ, ಹಣ ಸರಬರಾಜು, ಹಂಚಿಕೆ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಪ್ರತಿಯೊಂದು ಎಂ.ಸಿ.ಸಿ. ತಂಡಗಳು ಗಸ್ತು ತಿರುಗುವಿಕೆ ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಹೆಚ್ಚಾಗಿ ಪತ್ತೆ ಹಚ್ಚಿ ದೂರು ದಾಖಲಿಸಬೇಕು. ಹೊಸ ಸೇರ್ಪಡೆ, ಮಾರ್ಪಾಡುಗಳ ಮತದಾರರ ಹೊಸ ಗುರುತಿನ ಚೀಟಿಯನ್ನು ಶೇ. 100ರಷ್ಟು ವಿತರಣೆ ಮಾಡಬೇಕು. ಪ್ರತಿಯೊಬ್ಬ ಸಹಾಯಕ ಚುನಾವಣಾಧಿಕಾರಿ ಮತ್ತು ತಹಸೀಲ್ದಾರರು ಇದನ್ನು ಖಾತ್ರಿಪಡಿಸಿ ವರದಿ ಮಾಡಬೇಕು. ಅಲ್ಲದೇ ಪ್ರತಿಯೊಂದು ಮತದಾರರಿಗೂ ವೋಟರ್ ಸ್ಲಿಪ್ಗಳನ್ನು ತಲುಪಿಸಬೇಕು ಎಂದು ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಮಾದರಿ ಮತಗಟ್ಟೆಗಳು: ಈ ಬಾರಿ ಪ್ರತಿ ಲೋಕಸಭಾ ಕ್ಷೇತ್ರದ ವ್ಯಪ್ತಿಯಲ್ಲಿ ಸಾಧ್ಯವಾದಷ್ಟು ಕಡೆ ಮಾದರಿ ಮತಗಟ್ಟೆಗಳ ಸ್ಥಾಪನೆಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 2 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಪರಿವರ್ತಿಸಬೇಕು. ಅಲ್ಲಿ ಗಾಳಿ, ಬೆಳಕು ಕುಡಿಯಲು ಶುದ್ಧ ನೀರು ಪೂರೈಕೆ, ಸ್ನೇಹಮಯ ವಾತಾವರಣ ರೂಪಿಸಬೇಕು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳು ಇದಕ್ಕೆ ನೆರವಾಗಲಿದ್ದಾರೆ. ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಸೀಲ್ದಾರರು ಸ್ವತಃ ಹೋಗಿ ಇಂತಹ ಮತಗಟ್ಟೆಗಳನ್ನು ಗುರುತಿಸಿ, ಸಕಲ ವ್ಯವಸ್ಥೆ ಪರಿಶೀಲಿಸಬೇಕು ಎಂದು ಅವರು ಸೂಚನೆ ನೀಡಿದರು.
ಎರಡನೇ ಹಂತದ ತರಬೇತಿಗೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಆಗ್ರಹಿಸಿದರ ಅವರು, ಮಾಸ್ಟರಿಂಗ್ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದರು.
ಮಳೆ ಅಥವಾ ಇತರ ಪರಿಸ್ಥಿತಿಯಿಂದ ವಿದ್ಯುನ್ಮಾನ ಮತಯಂತ್ರಗಳಿಗೆ ಯಾವುದೇ ಕಾರಣಕ್ಕೂ ಒಂದೇ ಬಂದು ಹನಿ ನೀರು ತಗಲುವಂತಾಗಬಾರದು ಅದಕ್ಕಾಗಿ ಮತಯಂತ್ರಗಳನ್ನು ಸುರಕ್ಷಿತವಾಗಿ ಮುಚ್ಚಿಡಲು ಪ್ಲಾಸ್ಟಿಕ್ ಕವರ್ಗಳನ್ನು ಒದಗಿಸಲಾಗುವುದು ಎಂದರು.
ಭದ್ರತೆ: ಆನೆ, ಚಿರತೆ ಹಾಗೂ ಕರಡಿ ಹಾವಳಿ ಪ್ರದೇಶದಲ್ಲಿ ಪೊಲೀಸ್ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ವೈದ್ಯರ ತಂಡ ಮೀಸಲಿರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಕ್ರಮ ಕೈಗೊಳ್ಳಲಾಗುತ್ತಿದೆ. ಆನೆ ಹಾವಳಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ತಂಡ ಪಟಾಕಿಯೊಂದಿಗೆ ಹಾಜರಿದ್ದು ಚುನಾವಣಾ ಸಿಬ್ಬಂದಿ ಹಾಗೂ ಮತದಾರರಿಗೆ ಭದ್ರತೆ ಒದಗಿಸಲಿವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಮತದಾನದ ದಿನದಂದು ಭದ್ರತೆಗೆ ಎಲ್ಲಾ ರೀತಿಯ ಭದ್ರತಾ ಕ್ರಮ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಲು ಪೊಲೀಸ್ ಇಲಾಖೆ ಸಿದ್ಧವಾಗಿದೆ. ಜಿಲ್ಲೆ ಹಾಗೂ ಹೊರಭಾಗದಿಂದ ಬರುವ ಭದ್ರತಾ ಸಿಬ್ಬಂದಿಗಳ ಜೊತೆಗೆ ಹೋಂಗಾರ್ಡ್, ಎನ್.ಸಿ.ಸಿ.ಕೆಡಿಟ್ಗಳನ್ನು ಬಳಸಲಾಗುತ್ತಿದೆ. ಯಾವುದೇ ಮತಗಟ್ಟೆಗೂ ಐದು ನಿಮಿಷದೊಳಗೆ ಪೊಲೀಸ್ ತಂಡ ತಲುಪುವಂತೆ ರಕ್ಷಣೆ ರೂಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

