ಸ್ಥಿಮಿತ ಕಳೆದುಕೊಂಡ ಕಾಂಗ್ರೆಸಿಗರು
ಹಾಸನ: ಕಾಂಗ್ರೆಸ್ ಅಭ್ಯರ್ಥಿ ಬುದ್ಧಿ ಸ್ಥಿಮಿತತೆ ಕಳೆದುಕೊಂಡು ಬಾಯಿಗೆ ಬಂದಂತೆ ಹರಡುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿಯನ್ನು ಮುಂದೆ ಕೂರಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಬಾಯಿಗೆ ಬಂದಂತೆ ಹರಡುವುದು ಸರಿಯಲ್ಲ. ಕೊಚ್ಚೆ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮೇಲೆ ಹಾರುತ್ತದೆ ಅನ್ನೋದು ತಿಳಿದಿದ್ದು, ಅದರ ಬದಲು ನಾವೇ ಶುದ್ಧ ನೀರಿನಿಂದ ಅವರಿಗೆ ಪ್ರೋಕ್ಷಣೆ ಮಾಡೋದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಬೇರೆ ವಿಧಿಯಿಲ್ಲ: ಸಂಸದ ಸ್ಥಾನಕ್ಕೆ ಅವರು ಅನರ್ಹ ಅಭ್ಯರ್ಥಿ ಎಂದ ಅವರು, ಕಾಂಗ್ರೆಸ್ನಲ್ಲಿ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಮಂಜು ಅವರಿಗೆ ಟಿಕೆಟ್ ನೀಡಲಾಗಿದೆ. ಇಂಥ ದೈನೇಸಿ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿದೆ. ದೇವೇಗೌಡರು ಮತ್ತು ಅವರು ಕುಟುಂಬದವರನ್ನು ನಿಂದಿಸಿದರೆ ಕಾಂಗ್ರೆಸ್ನವರಿಗೆ ಉನ್ನತ ಸ್ಥಾನ ಸಿಗುತ್ತದೆ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ವಿನಾಕಾರಣ ನಿಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿಧಿ ಇಲ್ಲದೆ ದೇವೇಗೌಡರ ಕುಟುಂಬವನ್ನು ಬೈಯ್ಯಬೇಕಾಗಿದೆ ಅಂತ ನನ್ನ ಬಳಿಯೇ ಹೇಳಿದ್ದಾರೆ ಎಂದರು.
ಸವಾಲು: ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರಿದ್ದಾರೆ ಎಚ್ಚರ ಎಂಬಂತೆ ರೇವಣ್ಣ ಯಾವಾಗಲೂ ಸಿದ್ದರಾಮಯ್ಯನವರ ಬಳಿಯೇ ಇರುತ್ತಾರೆ ಎಂಬ ಕಾಂಗ್ರೆಸ್ ಅಭ್ಯರ್ಥಿಯ ಆಪಾದನೆಗೆ ಪ್ರತಿಕ್ರಿಯಿಸಿದ ರೇವಣ್ಣ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದ ನಾನು ಅವರು ಮನೆ ಬಾಗಿಲಿಗೆ ಹೋಗಿದ್ದೇನೆಂದು ಸಿದ್ದರಾಮಯ್ಯ ಅವರ ಬಾಯಿನಲ್ಲೇ ಹೇಳಿಸಲಿ. ನಾನು ರಾಜಕೀಯವಾಗಿ ದೂರು ಉಳಿಯುತ್ತೇನೆ ಎಂದು ಸವಾಲು ಹಾಕಿದರು.
ಮೊದ್ಲು ಅಭಿವೃದ್ಧಿ ಮಾಡಲಿ: ಕಾಂಗ್ರೆಸ್ ಅಭ್ಯರ್ಥಿ ಯಾರ ಮನೆ ಬಾಗಿಲಿಗೆ ಹೋಗಿದ್ದಾರೆ ಅಂತ ನನಗೆ ಚೆನ್ನಾಗಿ ತಿಳಿದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಯಾರು ಅವರ ಮನೆ ಬಾಗಿಲಿಗೆ ಹೋಗಿದ್ದರು ಅಂತಾನೂ ತಿಳಿದೆ. ಇತರರನ್ನು ನಿಂದಿಸುವ ಮುನ್ನು ಮಂಜು ಅವರು, ಮೊದಲು ಅರಕಲಗೂಡು ರಸ್ತೆಯ ಗುಂಡಿ ಮುಚ್ಚುವ ಕೆಲಸ ಮಾಡಲಿ. ಹಳ್ಳಿ ಮೈಸೂರು ಹೋಬಳಿಯ ಕಲ್ಲಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಇರುವಂತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಹರಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಮುಳುಗೊ ಹಡಗು: ದೇಶದಲ್ಲಿ ಕಾಂಗ್ರೆಸ್ನ 10 ವರ್ಷಗಳ ಭ್ರಷ್ಟಾಚಾರ ಆಡಳಿತದಿಂದ ಜನತೆ ಬೇಸತ್ತಿದ್ದು, ಅದನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ಹಡಗಾಗಿದ್ದು, ಚುನಾವಣೆ ನಂತರ ತೃತೀಯ ರಂಗ ಅಧಿಕಾರಕ್ಕೆ ಬರಲಿದೆ. ಚುನಾವಣೆಯ ನಂತರ ಕಾಂಗ್ರೆಸ್ ಇರೋದಿಲ್ಲ. ಜೆಡಿಎಸ್ ಇರೋದಿಲ್ಲ ಎಂದು ಹೇಳುವ ಮುನ್ನು ಕಾಂಗ್ರೆಸ್ನವರು ತಮ್ಮ ಪಕ್ಷವನ್ನು ಉಳಿವನ್ನು ನೋಡಿಕೊಳ್ಳಲಿ ಸಾಕು ಎಂದರು.
ಜೆಡಿಎಸ್ನಿಂದ ಅಭಿವೃದ್ಧಿ: ಜಿಲ್ಲೆ ಅಭಿವೃದ್ಧಿಗೆ ಜೆಡಿಎಸ್ ಸಾಕಷ್ಟು ಶ್ರಮಿಸಿದೆ ಎಂದ ಅವರು, ಬೆಂಗಳೂರು-ಹಾಸನ ರಸ್ತೆ, ಹಾಸನ-ಮೈಸೂರು ರೇಲ್ವೆ ಮಾರ್ಗ, ಹೊಸ ಬಸ್ ನಿಲ್ದಾಣ, ಕೃಷಿ ಕಾಲೇಜು, ವೈದ್ಯಕೀಯ ಕಾಲೇಜು ಸೇರಿದಂತೆ ಇತರೆ ಕಾಲೇಜುಗಳನ್ನು ನಿರ್ಮಿಸಿರುವುದು ಸಾಕ್ಷಿ ಗುಡ್ಡೆ ಅಲ್ಲವೆ? ಈ ರೀತಿ ಸಾಕ್ಷಿ ಗುಡ್ಡೆಯನ್ನು ಕಾಂಗ್ರೆಸ್ನವರು ಮಾಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ಹಾಸನ ನಗರದಲ್ಲಿ ಪಾಳು ಬಿದ್ದಿದ್ದ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡೋಕೆ ನಾನು ಅಧಿಕಾರಕ್ಕೆ ಬರಬೇಕಾಯಿತು. ಕಾಂಗ್ರೆಸ್ನವರು ಏತಕ್ಕೆ ಈ ಕೆಲಸವನ್ನು ಮಾಡಲಿಲ್ಲ ಎಂದು ಹೇಳಿದರು ಟೀಕಿಸಿದರು.
ಗೌಡ್ರು ಹೆಚ್ಚಿನ ಮತದಿಂದ ಗೆಲ್ತಾರೆ
ಈಗಾಗಲೇ ಜಿಲ್ಲೆ ಸೇರಿದಂತೆ ಕಡೂರಿನಲ್ಲಿ ದೇವೇಗೌಡರ ಪರ ಜನತೆ ಒಲವು ತೋರಿದ್ದು, ಮಾಜಿ ಪ್ರಧಾನಿ ಇರಬೇಕು ಮತ್ತು ಅವರು ಮತ್ತೆ ಸಂಸದರಾಗಿ ಆಯ್ಕೆಯಾಗಿ ಹೋಗಬೇಕು ಎಂಬು ಆಸೆಯನ್ನು ಹೊಂದಿದ್ದಾರೆ. ಆದ್ದರಿಂದ ಈ ಬಾರಿ ದೇವೇಗೌಡರು ಕಳೆದ ಲೋಕಸಭಾ ಚುನಾವಣೆಗಿಂತಲು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ. ಅದಕ್ಕಾಗಿ ಜಿಲ್ಲೆಯ ಜನತೆ ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

